ADVERTISEMENT

ತ್ಯಾವಣಿಗೆ | ಭದ್ರಾ ನಾಲೆಯಲ್ಲಿ ಧರಣಿ ಕುಳಿತ ರೈತರು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 5:13 IST
Last Updated 22 ಫೆಬ್ರುವರಿ 2024, 5:13 IST
ತ್ಯಾವಣಿಗೆ ಸಮೀಪದ ಕುಕ್ಕವಾಡ ಗ್ರಾಮದ ದಾವಣಗೆರೆ ಎರಡನೇ ವಲಯದ ಭದ್ರಾ ನಾಲೆಗೆ ಇಳಿದು ಬುಧವಾರ ಧರಣಿ ನಡೆಸಿದ ರೈತರು
ತ್ಯಾವಣಿಗೆ ಸಮೀಪದ ಕುಕ್ಕವಾಡ ಗ್ರಾಮದ ದಾವಣಗೆರೆ ಎರಡನೇ ವಲಯದ ಭದ್ರಾ ನಾಲೆಗೆ ಇಳಿದು ಬುಧವಾರ ಧರಣಿ ನಡೆಸಿದ ರೈತರು   

ತ್ಯಾವಣಿಗೆ: ದಿನೇ ದಿನೇ ಬೆಳೆಗಳು ಒಣಗುತ್ತಿರುವುದು ರೈತರ ಆತಂಕವನ್ನು ಹೆಚ್ಚಿಸುತ್ತಿದೆ. ರೈತರ ತಾಳ್ಮೆಯನ್ನು ಇನ್ನೂ ಪರೀಕ್ಷಿಸಬೇಡಿ ಎಂದು ರೈತ ಮುಖಂಡ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್ ಎಚ್ಚರಿಕೆ ನೀಡಿದರು.

ತ್ಯಾವಣಿಗೆ ಸಮೀಪದ ಕುಕ್ಕವಾಡದ ಬಳಿ ಇರುವ ದಾವಣಗೆರೆ ಎರಡನೇ ವಲಯದ ಭದ್ರಾ ನಾಲೆಯಲ್ಲಿ ಬುಧವಾರ ನಿರತ ರೈತರ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ನಾಳೆಯಿಂದ ಟ್ರ್ಯಾಕ್ಟರ್‌ಗಳ ಸಮೇತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಮಕ್ಕಳನ್ನು ಸಾಕುವ ಹಾಗೆ ತೋಟಗಳನ್ನು ನೋಡಿಕೊಳ್ಳಲಾಗುತ್ತಿದೆ. ಸಾಲ ಮಾಡಿ ಕೊಳವೆಬಾವಿ ಕೊರಿಸಿದರೂ ನೀರು ಸಿಗುತ್ತಿಲ್ಲ. ಈ ಹಿಂದೆ ನೀರು ನೀಡುತ್ತಿದ್ದ ಕೊಳವೆಬಾವಿಗಳಿಂದ ನೀರು ಬರುತ್ತಿಲ್ಲ. ರೈತರ ಕಷ್ಟ ಯಾರಿಗೂ ಅರ್ಥವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸಮರ್ಪಕ ನೀರು ಹರಿದರೆ ಮಾತ್ರ ಈ ಎಲ್ಲ ಸಮಸ್ಯೆಗಳು ಕೊನೆಗಾಣಬಹುದು. ನೀರಿನ ಸಮಸ್ಯೆ ಎನ್ನುವುದು ಇದ್ದಕ್ಕಿದ್ದಂತೆ ಸೃಷ್ಟಿಯಾಗುವಂತದ್ದಲ್ಲ. ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ, ಅವಲಂಬನೆ ಲೆಕ್ಕಾಚಾರ ಮಾಡಿಯೇ ಮಳೆಗಾಲ ಮತ್ತು ಬೇಸಿಗೆ ಕಾಲದ ನೀರಿನ ವೇಳಾಪಟ್ಟಿಯನ್ನು ನಿಗದಿಪಡಿಸಬೇಕಾಗುತ್ತದೆ. ಐಸಿಸಿ ಸಭೆಯಲ್ಲಿ ನೀರಾವರಿ ಎಂಜಿನಿಯರ್‌ಗಳ ಮೌನ ರೈತರಿಗೆ ಸಂಕಷ್ಟವಾಗಿ ಪರಿಣಮಿಸಿದೆ. 

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರೈತರ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿರುವುದು ಆಡಳಿತದ ವೈಖರಿಯನ್ನು ಬಿಂಬಿಸುತ್ತದೆ’ ಎಂದು ರೈತ ಷಣ್ಮುಖ ಸ್ವಾಮಿ ಆರೋಪ ಮಾಡಿದರು.

‘ಒಣಗುತ್ತಿರುವ ಬೆಳೆಗಳು ಆಡಳಿತ ನಡೆಸುವವರಿಗೆ ಕಾಣದೇ ಇರುವುದು ಆಕ್ರೋಶವನ್ನು ಹೆಚ್ಚಿಸುತ್ತಿದೆ’ ಎಂದು ಸಂಘದ ಉಪಾಧ್ಯಕ್ಷ ಕೆ.ಎನ್. ಮಂಜುನಾಥ್ ತಿಳಿಸಿದರು.

ಡಿ.ಮಲ್ಲೇಶಪ್ಪ, ಮಹೇಶ್ವರಪ್ಪ, ಗೋಪಾಲ್, ಕಲ್ಲೇಶಪ್ಪ, ಅರವಿಂದ್, ದಿನೇಶ್, ನಿರಂಜನ್ ಮೂರ್ತಿ, ಸಿರಿಗೆರೆ ಪ್ರಭು, ಕಿರಣ್,  ಹರೀಶ್, ಜಿಸಿ ಮಂಜುನಾಥ್, ಗಂಗಾಧರ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.