ADVERTISEMENT

ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ ಸಿಎಂ ಒಲವು: ಕೆನಡಿ ಶಾಂತಕುಮಾರ್‌

ಕ್ರಿಶ್ಚಿಯನ್ ಅಭಿವೃದ್ಧಿ ಕೌನ್ಸಿಲ್ ಅಧ್ಯಕ್ಷ ಜೆ. ಕೆನಡಿ ಶಾಂತಕುಮಾರ್

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 2:34 IST
Last Updated 14 ಜನವರಿ 2023, 2:34 IST
ಕೆನಡಿ ಶಾಂತಕುಮಾರ್
ಕೆನಡಿ ಶಾಂತಕುಮಾರ್   

ದಾವಣಗೆರೆ: ‘ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಅಥವಾ ಮಂಡಳಿ ರಚಿಸಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದು, ಶೀಘ್ರವೇ ಅದು ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ’ ಎಂದು ಕ್ರಿಶ್ಚಿಯನ್ ಅಭಿವೃದ್ಧಿ ಕೌನ್ಸಿಲ್ ಅಧ್ಯಕ್ಷ ಜೆ. ಕೆನಡಿ ಶಾಂತಕುಮಾರ್ ಹೇಳಿದರು.

‘ರಾಜ್ಯ ಸರ್ಕಾರ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಮೂಲಕ ಕ್ರೈಸ್ತ ಸಮುದಾಯದ ರಚನಾತ್ಮಕ ಅಭಿವೃದ್ಧಿ ಕಾರ್ಯಕ್ಕೆ ಸಾಕಷ್ಟು ಅನುದಾನ ಒಳಗೊಂಡಂತೆ ಎಲ್ಲ ನೆರವು ನೀಡುತ್ತಿದೆ. ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಮಾದರಿಯಲ್ಲೇ ಅಭಿವೃದ್ಧಿ ನಿಗಮ ಅಥವಾ ಮಂಡಳಿ ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದ್ದು, ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಕೌನ್ಸಿಲ್ ರಚನೆಯಾಗಿತ್ತು. ನಿಗಮ ಅಥವಾ ಮಂಡಳಿ ಮಾಡಬೇಕು ಎಂಬ ಪ್ರಯತ್ನ ನಡೆದು ಶೇ 60ರಷ್ಟು ಕೆಲಸ ಆಗಿತ್ತು. ಆರ್ಥಿಕ ಇಲಾಖೆಗೂ ಕಳುಹಿಸಲಾಗಿತ್ತು. ಆದರೆ ನಂತರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ಮಾಡಲಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಕ್ರಿಶ್ಚಿಯನ್ ಸಮುದಾಯದ ಸ್ಥಿತಿಗತಿ ಅರಿಯುವ ಉದ್ದೇಶದಿಂದ ಕುಲಶಾಸ್ತ್ರ ಅಧ್ಯಯನದ ಅಗತ್ಯವಿದ್ದು, ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದೇವೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಸಮುದಾಯ ಭವನ, ಚರ್ಚ್, ಸ್ಮಶಾನ ಅಭಿವೃದ್ಧಿ, ಕಾಂಪೌಂಡ್, ಅನಾಥಾಶ್ರಮ, ವೃದ್ಧಾಶ್ರಮ ನಿರ್ಮಾಣ ಒಳಗೊಂಡಂತೆ ₹ 28 ಕೋಟಿಯ 147 ಪ್ರಸ್ತಾವಗಳು ಸಿಎಂ ಪರಿಶೀಲನೆಯಲ್ಲಿವೆ. ದಾವಣಗೆರೆ ಜಿಲ್ಲೆಯಲ್ಲಿ ಸಮುದಾಯದ 20-22 ಸಂಸ್ಥೆಗಳು ಸೌಲಭ್ಯ ಪಡೆದಿವೆ. ಸರ್ಕಾರದ ಸೌಲಭ್ಯಗಳು ಕಟ್ಟ ಕಡೆಯ ಅಲ್ಪಸಂಖ್ಯಾತರಿಗೂ ಸಿಗಬೇಕು ಎಂಬ ಆಶಯದೊಂದಿಗೆ ತಾವು ರಾಜ್ಯ ಪ್ರವಾಸ ಮಾಡುತ್ತಿದ್ದು, ಇದುವರೆಗೆ 22 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ’ ಎಂದರು.

‘ಸರ್ಕಾರದ 13 ಇಲಾಖೆಗಳಲ್ಲಿ ಅಲ್ಪಸಂಖ್ಯಾತರಿಗಾಗಿ ಕಾರ್ಯಕ್ರಮಗಳಿವೆ. ಜಿಲ್ಲಾವಾರು ಜಾಗೃತಿ ಸಮಾವೇಶ, ಸಭೆಗಳನ್ನು ಆಯೋಜಿಸಿ ಅವುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸಮುದಾಯದ ಧಾರ್ಮಿಕ ಮುಖಂಡರನ್ನು ಭೇಟಿ ಮಾಡುತ್ತಿದ್ದೇನೆ’ ಎಂದು ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಲ್ಲಿಕಾರ್ಜುನ ವಿ. ಮಠದ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕಾರಿ ಸೈಯದ್ ಜುನೇದ್, ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಶಾಮೀರ್ ಆಲಂ ಖಾನ್ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.