ಸಂತೇಬೆನ್ನೂರು: ಮೂರು ವರ್ಷಗಳಿಂದ ಒಂದಲ್ಲಾ ಒಂದು ಕಾರಣದಿಂದ ಮಾವು ಬೆಳೆ ನಿರೀಕ್ಷಿತ ಫಲ ನೀಡಿಲ್ಲ. ಸಮೃದ್ಧ ಫಸಲು ನಿರೀಕ್ಷಿಸಿದ ರೈತರಿಗೆ ಈ ಬಾರಿ ನುಸಿ ಕೀಟಗಳ ಬಾಧೆ ಇಳುವರಿ ಕೊರತೆಗೆ ಕಾರಣವಾಗಿದ್ದು, ಅನಿಶ್ಚಿತ ವಾತಾವರಣ ನಿರ್ಮಿಸಿದೆ.
ದಾವಣಗೆರೆ ಜಿಲ್ಲೆಯಲ್ಲಿ ಸಂತೇಬೆನ್ನೂರು ಹೋಬಳಿ ಮಾವು ಬೆಳೆಗೆ ಪ್ರಸಿದ್ಧ. ಬಯಲು ಸೀಮೆಯಲ್ಲಿ ಮಾವು ಬೆಳೆ ರೈತರಿಗೆ ಆಶಾದಾಯಕ ವರಮಾನ ನೀಡುತ್ತಿತ್ತು. ಮೂರು ವರ್ಷಗಳಿಂದ ಅತಿವೃಷ್ಟಿ, ಬರಗಾಲ ಇತ್ಯಾದಿ ಹವಾಮಾನ ವೈಪರಿತ್ಯಗಳ ಕಾರಣ ಈಗೀಗ ಮಾವು ಬೆಳೆಯ ಮೆರಗು ಕಳೆಗುಂದಿದೆ.
ಈ ಬಾರಿ ಡಿಸೆಂಬರ್‌ನಲ್ಲಿ ಸಮೃದ್ಧ ಹೂ ಗೊಂಚಲು ಕಾಣಿಸಿಕೊಂಡಿತ್ತು. ಆದರೆ, ಲಿಪಾಪರಸ್ ನುಸಿ ಕೀಟಗಳಿಂದ ಹೂ ಗೊಂಚಲು ಒಣಗಿದೆ. ಒಂದು ಮರದಲ್ಲಿ ಸರಾಸರಿ 800ರಿಂದ 1000 ಕಾಯಿಗಳು ಇರಬೇಕು. ಆದರೆ, ಪ್ರೌಢಾವಸ್ಥೆಯ ಮರದಲ್ಲಿ 20ರಿಂದ 30 ಕಾಯಿಗಳು ಮಾತ್ರ ಇವೆ. ನುಸಿ ಹೂಗೊಂಚಲಿನ ರಸ ಹೀರಿ, ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುವುದರಿಂದ ಹೂವು ಅಂಟು ಒಣಗುತ್ತಿವೆ ಎಂದು ದೊಡ್ಡಬ್ಬಿಗೆರೆ ರೈತ ಪ್ರಸನ್ನ ತಿಳಿಸಿದರು.
‘ಬಿಪರ್ ಜಾಯ್ ಚಂಡಮಾರುತದ ಪ್ರಭಾವದಿಂದ ಜನವರಿ ತಿಂಗಳಲ್ಲಿ ಮಾವಿನ ಮರಗಳಲ್ಲಿ ಮರು ಚಿಗುರು, ಹೂವು ಕಾಣಿಸಿಕೊಂಡಿದೆ. ಕಾಯಿ ಬಲಿತುಕೊಳ್ಳುವ ಸ್ಥಿತಿಯಲ್ಲಿ ಮರು ಚಿಗುರು ಮತ್ತಷ್ಟು ಇಳುವರಿ ಕುಗ್ಗಿಸಿದೆ. ಜನವರಿಯಲ್ಲಿ ಹೂವು ಬಿಟ್ಟರೆ ಮಾವಿನ ಹಣ್ಣು ಮಾರುಕಟ್ಟೆ ಬರುವ ವೇಳೆಗೆ ಮುಂಗಾರು ಪ್ರವೇಶಿಸುತ್ತದೆ. ಮಳೆ ಬಿದ್ದರೆ ಹಣ್ಣಿನಲ್ಲಿ ಹುಳುಗಳು ಹೆಚ್ಚುತ್ತವೆ. ಹೊರ ರಾಜ್ಯಗಳಲ್ಲಿ ಬೇಡಿಕೆ ಕುಸಿಯುತ್ತದೆ. ಕೋವಿಡ್ ಸಂದರ್ಭದಲ್ಲಿ ಉತ್ತಮ ಇಳುವರಿ ಇತ್ತು. ಸ್ವಂತ ಮಾರುಕಟ್ಟೆ ಸೃಷ್ಟಿಸಿ ಉತ್ತಮ ಲಾಭ ಗಳಿಸಿದ್ದೆ. ಈ ಬಾರಿ ಮಾವು ಬೆಳೆ ನಷ್ಟದ ಹಾದಿ ಹಿಡಿದಿದೆ’ ಎಂದು ಬೆಳೆಗಾರ ತಿಪ್ಪೆಸ್ವಾಮಿ ತಿಳಿಸಿದರು.
ಹಲವೆಡೆ ರೈತರಿಗೆ ಮುಂಗಡ ಪಾವತಿಸಿ ಮಾವಿನ ತೋಟಗಳ ಗೇಣಿ ಹಿಡಿಯಲಾಗಿದೆ. 12 ಎಕರೆ ಮಾವು ಬೆಳೆಗೆ ಔಷಧ ಸಿಂಪಡಣೆಗೆ ₹ 1 ಲಕ್ಷ ಖರ್ಚು ಮಾಡಲಾಗಿದೆ. ಆದರೂ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಫಸಲು ತೀವ್ರ ಇಳಿಮುಖಗೊಂಡಿದೆ ಎಂದು ಗೇಣಿದಾರ ಲಾಲ್ ಖಾನ್ ಬೇಸರ ವ್ಯಕ್ತಪಡಿಸಿದರು.
ಹೋಬಳಿ ವ್ಯಾಪ್ತಿಯಲ್ಲಿ 1,000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಆಲ್ಫೋನ್ಸೊ, ರಸಪೂರಿ, ಸೆಂದೂರ ಮತ್ತಿತರ ಉತ್ಕೃಷ್ಟ ತಳಿಗಳನ್ನು ಈ ಭಾಗದಲ್ಲಿ ಬೆಳೆಯಲಾಗುತ್ತದ. ಆಲ್ಫೋನ್ಸೊ ತಳಿಯ ಮಾವು ಇಳುವರಿ ಹೆಚ್ಚು ಮತ್ತು ತಿನ್ನಲು ರುಚಿಕರ. ಮಾವಿನ ಋತುವಿನಲ್ಲಿ ನಿತ್ಯ ಟನ್‌ಗಟ್ಟಲೆ ಮಾವು ಹೊರ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿತ್ತು. ಹಾಗಾಗಿ ಮಾವು ಖರೀದಿ ಕೇಂದ್ರಗಳು ತಲೆ ಎತ್ತಿದ್ದವು. ವಹಿವಾಟು ಕುಸಿದಿದ್ದರಿಂದ ಮಾರುಕಟ್ಟೆ ತಲ್ಲಣಗೊಂಡಿದೆ ಎಂದು ಖರೀದಿ ಕೇಂದ್ರದ ಮಾಲೀಕರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.