ದಾವಣಗೆರೆ: ದೇಶಭಕ್ತಿ ಎಂದರೆ ಕೇವಲ ಘೋಷಣೆಯಲ್ಲ. ಹೃದಯದಿಂದ ಬರಬೇಕು. ಕೊರೊನಾ ಸೇರಿ ಯಾವುದೇ ವಿಪತ್ತು ಬಂದಾಗ ಜನರ ಸೇವೆ ಮಾಡುವುದೇ ನಿಜವಾದ ದೇಶಭಕ್ತಿ ಎಂದು ಎಸ್‌ಡಿಪಿಐ ಮುಖಂಡ ಫಯಾಜ್ ಅಹ್ಮದ್ ಹೇಳಿದರು.
ನಗರದ ಬೂದಾಳ್ ರಸ್ತೆಯ ತಾಜ್ ಪ್ಯಾಲೇಸ್ ಕೋಡ್ ಆರೈಕೆ ಕೇಂದ್ರದಲ್ಲಿ ಭಾನುವಾರ ಕೋವಿಡ್ ವಾರಿಯರ್‌ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆಲವರ ದೇಶಭಕ್ತಿ ಕೇವಲ ಘೊಷಣೆಗೆ ಸೀಮಿತವಾಗಿದೆ. ಆದರೆ, ಕೊರೊನಾ ಸಂದರ್ಭದಲ್ಲಿ ಪಿಎಫ್‍ಐ, ಎಸ್ಡಿಪಿಐ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಜನರ ಸೇವೆ ಮಾಡಿ, ಕೊರೊನಾ ವಿರುದ್ಧ ಹೋರಾಟ ನಡೆಸಿವೆ. ಇದೇ ನಿಜವಾದ ದೇಶಭಕ್ತಿಯಾಗಿದೆ ಎಂದುಹೇಳಿದರು.
ಕೆಲವರ ದೇಶ ಪ್ರೇಮ ನಾಲಿಗೆಗೆ ಸೀಮಿತವಾಗಿದೆ. ಜಾತಿ, ಧರ್ಮದ ಭೇದ, ಭಾವ ಮರೆತು ಒಂದಾಗಿ ಹೋರಾಡಿದರೆ ಕೊರೊನಾ ಮಾತ್ರವಲ್ಲ ಶತ್ರುಗಳು ಬಂದರೂ ಓಡಿಸಬಹುದು ಎಂದರು.
ಮುಸ್ಲಿಂ ಧರ್ಮಗುರು ಮೌಲಾನಾ ಹನೀಫ್ ರಜ್ಹಾ, ‘ಹಿಂದೂ, ಮುಸ್ಲಿಂ ಎಂಬ ಭೇದ ಇಲ್ಲದೇ ತಾಜ್ ಪ್ಯಾಲೇಸ್‌ನ ಕೋವಿಡ್ ಆರೈಕೆ ಕೇಂದ್ರದಲ್ಲಿ ಸೇವೆ ನೀಡಿ, ಎಲ್ಲಾ ವರ್ಗದವರ ಪ್ರಾಣ ರಕ್ಷಣೆ ಮಾಡಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಜೆ. ಅಮಾನುಲ್ಲಾ ಖಾನ್, ‘ಈ ಕೋವಿಡ್ ಆರೈಕೆ ಕೇಂದ್ರದಲ್ಲಿ 127 ಜನರು ಉಪಯೋಗ ಪಡೆದುಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.
ಕೊರೊನಾ ವಿರುದ್ಧ ಹೋರಾಡಿದ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಸ್ವಯಂ ಸೇವಕರನ್ನು ತಹಶೀಲ್ದಾರ್ ಗಿರೀಶ್ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಸಯದ್ ಚಾರ್ಲಿ, ಸಯದ್ ರಜ್ಹಾ, ದಾದಾಪೀರ್, ಟಾರ್ಗೆಟ್ ಅಸ್ಲಾಂ, ಸಿಪಿಐ ಗಜೇಂದ್ರಪ್ಪ, ಡಾ.ಮಂಜುಳಾ, ಕೋಳಿ ಇಬ್ರಾಹಿಂ ಸಾಬ್, ಕಬೀರ್, ಇಸ್ಮಾಯಿಲ್ ಅವರೂ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.