ದಾವಣಗೆರೆ: ಅಗ್ನಿನಂದಕ ಉಪಕರಣಗಳ ಬಳಕೆಯ ತರಬೇತಿ ಪಡೆದ ವರ್ತಕರಿಗೆ ಮಾತ್ರ ದೀಪಾವಳಿ ಹಬ್ಬದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಪಟಾಕಿ ಅವಘಡಗಳನ್ನು ನಿಭಾಯಿಸುವ ತರಬೇತಿ ಪೂರೈಸಿದವರಿಗೆ ಆದ್ಯತೆ ಮೆರೆಗೆ ತಾತ್ಕಾಲಿಕ ಪರವಾನಗಿ ಸಿಗುತ್ತಿದೆ.
ಹಾವೇರಿ ಹಾಗೂ ಬೆಂಗಳೂರಿನಲ್ಲಿ 2023ರಲ್ಲಿ ಸಂಭವಿಸಿದ ಪಟಾಕಿ ದುರಂತದಿಂದ ಎಚ್ಚೆತ್ತುಕೊಂಡ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆ ಇದೇ ಮೊದಲ ಬಾರಿಗೆ ಇಂತಹದೊಂದು ಷರತ್ತು ವಿಧಿಸಿದೆ. ತಿಂಗಳಿಗೂ ಮೊದಲೇ ಕಾರ್ಯಾಗಾರ ಆಯೋಜಿಸಿ ಜಿಲ್ಲೆಯ ವರ್ತಕರಿಗೆ ತರಬೇತಿ ನೀಡಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ತರಬೇತಿ ಪಡೆದ ವರ್ತಕರಿಗೂ ನಿರಾಕ್ಷೇಪಣ ಪತ್ರ ನೀಡಲಾಗಿದೆ.
ದೀಪಾವಳಿ ಹಬ್ಬದಲ್ಲಿ ಪಟಾಕಿ ಮಾರಾಟಕ್ಕೆ ಕಂದಾಯ ಇಲಾಖೆ ವರ್ತಕರಿಗೆ ತಾತ್ಕಾಲಿಕ ಪರವಾನಗಿ ನೀಡುತ್ತದೆ. ಅವಕಾಶ ಕೋರಿ ಅರ್ಜಿ ಸಲ್ಲಿಸುವ ವರ್ತಕರು ಪೊಲೀಸ್ ಹಾಗೂ ಅಗ್ನಿಶಾಮಕ ಠಾಣೆಯಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯ. ಎನ್‌ಒಸಿಗೆ ಅಗ್ನಿನಂದಕ ಉಪಕರಣಗಳ ಬಳಕೆಯ ಕುರಿತು ತರಬೇತಿ ಪಡೆದವರನ್ನು ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆ ಪರಿಗಣಿಸಿದೆ.
‘ಪಟಾಕಿ ದುರಂತ ಸಂಭವಿಸದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ವರ್ತಕರಿಗೆ ತರಬೇತಿ ನೀಡಲಾಗಿದೆ. ಅಗ್ನಿನಂದಕ ಉಪಕರಣಗಳನ್ನು ಹೇಗೆ ಬಳಕೆ ಮಾಡಬೇಕು ಎಂಬ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಅಗ್ನಿ ಅವಘಡಗಳನ್ನು ತಪ್ಪಿಸುವ ರೀತಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ಮಾಹಿತಿ ನೀಡಲಾಗಿದೆ. ತರಬೇತಿ ಪಡೆದವರನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುತ್ತಿದೆ. ಆದರೆ, ಇದನ್ನು ಕಡ್ಡಾಯಗೊಳಿಸಿಲ್ಲ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್.ಅಶೋಕಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಲ್ಲೆಯಲ್ಲಿ 170ಕ್ಕೂ ಹೆಚ್ಚು ಪಟಾಕಿ ವರ್ತಕರಿದ್ದಾರೆ. ಇವರಲ್ಲಿ ಕೆಲವರು ಮಾತ್ರ ಅಗ್ನಿನಂದಕ ಉಪಕರಣಗಳ ಬಳಕೆಯ ಕುರಿತು ಈ ಮೊದಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿ ತರಬೇತಿ ಪಡೆದಿದ್ದರು. ಉಳಿದ ವರ್ತಕರಿಗೆ ನಗರದ ಬಿ.ಎಸ್.ಚನ್ನಬಸಪ್ಪ ಪ್ರಥಮದರ್ಜೆ ಕಾಲೇಜಿನಲ್ಲಿ ಸೆ.30ರಂದು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ಕೋರಿ ಬಂದಿದ್ದ 98 ಅರ್ಜಿಗಳಲ್ಲಿ 74 ಜನರಿಗೆ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆ ನಿರಾಕ್ಷೇಪಣ ಪತ್ರ ನೀಡಿದೆ.
ಅಗ್ನಿನಂದಕ ಉಪಕರಣಗಳ ತರಬೇತಿಯಿಂದ ಅನುಕೂಲವಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾರಾಟಕ್ಕೆ 6 ದಿನ ಅವಕಾಶ ಸಿಕ್ಕಿದ್ದರೆ ಅನುಕೂಲವಾಗುತ್ತಿತ್ತು.ಪಿ.ಜಿ.ಶ್ರೀನಿವಾಸ್, ಅಧ್ಯಕ್ಷರು, ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘ
‘ಬಯಲು ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡಲು ಅವಕಾಶವಿದೆ. ನಿಯಮಗಳಿಗೆ ಅನುಗುಣವಾಗಿ ಕಂದಾಯ ಇಲಾಖೆ ಸ್ಥಳ ಗುರುತಿಸುತ್ತದೆ. 10X10 ಅಡಿಯಲ್ಲಿ ನಿರ್ಮಿಸುವ ಮಳಿಗೆಗಳ ನಡುವೆ 3 ಮೀಟರ್ ಅಂತರವಿರಬೇಕು. ಪ್ರತಿ ಮಳಿಗೆಯಲ್ಲಿ 1,000 ಕೆ.ಜಿ. ತೂಕದ ಮದ್ದಿನಿಂದ ತಯಾರಿಸಿದ ಪಟಾಕಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಅನುಮತಿ ಇದೆ’ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್.ಅಶೋಕಕುಮಾರ್.
ಪ್ರತಿ ಮಳಿಗೆ ಅಗ್ನಿನಂದಕ ಉಪಕರಣ ಹೊಂದುವುದು ಕಡ್ಡಾಯ. ಈ ಉಪಕರಣ ಬಳಕೆಯ ಕೌಶಲವನ್ನು ವರ್ತಕರು ಅರಿತಿರಬೇಕು. 500 ಲೀಟರ್ ಸಾಮರ್ಥ್ಯದ ನೀರು ಸಂಗ್ರಹ ಹಾಗೂ ಮರಳನ್ನು ಮಳಿಗೆಗಳಲ್ಲಿ ಇಟ್ಟುಕೊಂಡಿರಬೇಕು. ಮುನ್ನೆಚ್ಚರಿಕೆಯ ಕ್ರಮವಾಗಿ ಅಗ್ನಿನಂದಕ ವಾಹನ ಹಾಗೂ ಸಿಬ್ಬಂದಿಯನ್ನು ಈ ಸ್ಥಳದಲ್ಲಿ ನಿಯೋಜಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.