ಹೊನ್ನಾಳಿ: ತಾಲ್ಲೂಕಿನ ಹೊಳೆಹರಳಹಳ್ಳಿ ಸಮೀಪದ ತುಂಗಭದ್ರಾ ನದಿಯಲ್ಲಿ ಮೀನು ಹಿಡಿಯುವ ಸಂದರ್ಭ ಸಿಡಿಮದ್ದು ಸಿಡಿಸುವ ವೇಳೆ ಸಂಭವಿಸಿದ ದುರಂತದಲ್ಲಿ ಒಬ್ಬರು ಭಾನುವಾರ ಜಲಸಮಾಧಿಯಾಗಿದ್ದಾರೆ.
ರಟ್ಟೇಹಳ್ಳಿ ತಾಲ್ಲೂಕು ಚಿಕ್ಕಕಬ್ಬಾರ್ ಗ್ರಾಮದ ದಾದಾಪೀರ್ (40) ಮೃತಪಟ್ಟವರು. ಇವರ ಜೊತೆಯಲ್ಲಿದ್ದ ಮತ್ತೊಬ್ಬರು ಭಯದಿಂದ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಚಿಕ್ಕಕಬ್ಬಾರ್ ಗ್ರಾಮದ ದಾದಾಪೀರ್ ಸ್ನೇಹಿತನೊಂದಿಗೆ ಹೊಳೆಹರಳಹಳ್ಳಿ ಗ್ರಾಮಕ್ಕೆ ಸಮೀಪದ ನರಸಿಂಹಸ್ವಾಮಿ ದೇವಸ್ಥಾನದ ಬಳಿ ತುಂಗಭದ್ರಾ ನದಿಯಲ್ಲಿ ಮೀನು ಹಿಡಿಯಲು ಬಂದಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಮೀನು ಲಭಿಸುತ್ತವೆ ಎಂಬ ದುರಾಸೆಯಿಂದ ನದಿ ನೀರಿನಲ್ಲಿ ಸಿಡಿಮದ್ದು ಸಿಡಿಸಲು ಮುಂದಾಗಿದ್ದಾರೆ. ಈ ವೇಳೆ ಜಲಸಮಾಧಿಯಾಗಿದ್ದಾರೆ.
ಭಾನುವಾರ ಸಂಜೆಯಿಂದ ಹೊನ್ನಾಳಿಯ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ದಾದಾಪೀರ್ ಶವಕ್ಕಾಗಿ ಹುಡುಕಾಟ ನಡೆಸಿದ್ದು, ಸೋಮವಾರ ಸಂಜೆ ಶವ ಪತ್ತೆಯಾಗಿದೆ.
ದಾದಾಪೀರ್‌ಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.