ದಾವಣಗೆರೆ: ಸಮೀಪದ ಬೇತೂರು ಗ್ರಾಮದ ಕೆರೆಯಲ್ಲಿ ₹5 ಲಕ್ಷ ಮೌಲ್ಯದ ಸುಮಾರು 4 ಟನ್‌ಗಳಷ್ಟು ಮೀನುಗಳು ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಮೀನುಗಳು ಹಾಗೂ ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಮೀನುಗಳು ಈ ರೀತಿ ಸಾಯಲು ಏನು ಕಾರಣ ಎಂಬುದು ಇನ್ನೂ ಖಚಿತವಾಗಿಲ್ಲ. ಕೆರೆಯ ಬಳಿ ವಿಷದ ಬಾಟಲಿಯೊಂದು ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.
‘ಬಿಸಿಲಿನ ಬೇಗೆ, ನೀರು ಕಡಿಮೆ ಇರುವುದರಿಂದ ಆಮ್ಲಜನಕದ ಕೊರತೆಯಾಗಿ ಮೀನುಗಳು ಸಾವಿಗೀಡಾಗಿರಬಹುದು. ಕೆರೆಯ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿದ್ದು, ದಾವಣಗೆರೆಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಮೀನುಗಳ ಮಾದರಿಯನ್ನು ಮಂಗಳೂರಿನ ಮೀನುಗಾರಿಕಾ ಕಾಲೇಜಿಗೆ ಕಳಿಸಲಾಗುತ್ತಿದೆ. ಪ್ರಯೋಗಾಲಯದ ವರದಿ ಬಂದ ನಂತರ ಘಟನೆಗೆ ಖಚಿತ ಕಾರಣ ತಿಳಿದು ಬರಲಿದೆ’ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಆರ್.ಎಸ್. ಮಲ್ಲೇಶ ನಾಯ್ಕ ತಿಳಿಸಿದರು.
ತಾಲ್ಲೂಕಿನ ಬೇತೂರು ಗ್ರಾಮದ ಕೆರೆಯನ್ನು ಅದೇ ಗ್ರಾಮದ ಹನುಮಂತಪ್ಪ, ಮಂಜಪ್ಪ ಹಾಗೂ ಸಿದ್ದಪ್ಪ ಎಂಬುವರು 5 ವರ್ಷಗಳಿಂದ ಕೆರೆಯನ್ನು ಗುತ್ತಿಗೆ ಪಡೆದಿದ್ದು, ₹ 4 ಲಕ್ಷ ಖರ್ಚು ಮಾಡಿ ಮೀನುಮರಿ ಬಿಟ್ಟಿದ್ದರು. ಬುಧವಾರ ಬೆಳಿಗ್ಗೆ ಅಂದಾಜು 3ರಿಂದ 4 ಕ್ವಿಂಟಲ್ ಮೀನನ್ನು ಮಾರಾಟ ಮಾಡಿದ್ದರು. ಮಧ್ಯಾಹ್ನದ ವೇಳೆಗೆ ಕೆರೆಯಲ್ಲಿ ನೋಡಿದಾಗ ಮೀನುಗಳು ಸತ್ತು ಬಿದ್ದಿದ್ದವು.
‘5 ವರ್ಷಗಳಿಂದ ನಾವೇ ಗುತ್ತಿಗೆ ಪಡೆದಿದ್ದು, ಯಾವ ವರ್ಷವೂ ಈ ರೀತಿ ಆಗಿರಲಿಲ್ಲ. ಜೂನ್ ತಿಂಗಳ ವೇಳೆಗೆ ಗುತ್ತಿಗೆ ಕರಾರು ಮುಗಿಯುತ್ತಿತ್ತು. 2ಕೆ.ಜಿಯಿಂದ 15 ಕೆ.ಜಿ.ವರೆಗೆ ಮೀನುಗಳು ಮೃತಪಟ್ಟಿವೆ. ಸುಮಾರು ₹ 5 ಲಕ್ಷ ನಷ್ಟವಾಗಿದೆ. ಕೆರೆಯ ಬದಿ ವಿಷದ ಬಾಟಲಿ ಬಿದ್ದಿವೆ. ಯಾರ ಮೇಲೆ ದೂರು ಕೊಡುವುದು ತಿಳಿಯುತ್ತಿಲ್ಲ’ ಎಂದು ಗುತ್ತಿಗೆ ಪಡೆದ ಮಂಜಪ್ಪ ತಿಳಿಸಿದರು.
ಮೀನು ಹಿಡಿಯಲು ಮಾಗಾನಹಳ್ಳಿ ಶ್ರೀ ವೆಂಕಟೇಶ್ವರ ಮೀನುಗಾರರ ಸಹಕಾರ ಸಂಘಕ್ಕೆ ಗುತ್ತಿಗೆ ನೀಡಲಾಗಿದೆ. ಕೆರೆಯಲ್ಲಿ ಕಾಟ್ಲಾಲ, ಗೌರಿ, ರೋಹು, ಮೃಗಾಲ್, ಹುಲ್ಲುಗೆಂಡೆ ಮುಂತಾದ ತಳಿಯ ಮೀನುಗಳಿವೆ. ಸತ್ತ ಮೀನುಗಳು ಕೆರೆಯ ದಡದಲ್ಲಿ ತೇಲುತ್ತಿದ್ದು ದುರ್ವಾಸನೆ ಬರುತ್ತಿದೆ.
ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಗುರುವಾರ ಕೆರೆಗೆ ಭೇಟಿ ನೀಡಿದ್ದರು. ಮೀನುಗಳ ಸಾವಿನ ಕುರಿತು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.