ADVERTISEMENT

ಹರಿಹರ: ಮಾಜಿ ಸಚಿವ ಡಾ. ವೈ. ನಾಗಪ್ಪ ನಿಧನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 6:48 IST
Last Updated 27 ಅಕ್ಟೋಬರ್ 2020, 6:48 IST
ಡಾ. ವೈ.ನಾಗಪ್ಪ
ಡಾ. ವೈ.ನಾಗಪ್ಪ   

ಹರಿಹರ: ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಡಾ. ವೈ.ನಾಗಪ್ಪ (87) ಅವರು ಅನಾರೋಗ್ಯದಿಂದ ಮಂಗಳವಾರ ನಿಧನರಾದರು.

ಅವರಿಗೆ ಒಬ್ಬ ಪುತ್ರ, ಮೂವರು ಪುತ್ರಿಯರು ಇದ್ದಾರೆ. ಹರಿಹರದಲ್ಲಿ ಮಂಗಳವಾರ ಸಂಜೆ 5ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಹರಿಹರ ವಿಧಾನಸಭಾ ಕ್ಷೇತ್ರದಿಂದ 1989, 1999 ಹಾಗೂ 2004ರಲ್ಲಿ ನಾಗಪ್ಪ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ನಾಗಪ್ಪ ಅವರು ಸಮಾಜ ಕಲ್ಯಾಣ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಕೆ.ಎಸ್‌.ಎಸ್‌.ಐಡಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ADVERTISEMENT

ರಾಜಕೀಯ ಪ್ರವೇಶ: ವೈದ್ಯಕೀಯ ಶಿಕ್ಷಣ ಮುಗಿಸಿದ ಬಳಿಕ ಡಾ.ನಾಗಪ್ಪ ಅವರು 1976ರಿಂದ 1979ರವರೆಗೆ ದಾವಣಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದರು. 1980ರಲ್ಲಿ ಹರಿಹರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಡಾ.ನಾಗಪ್ಪ ಅವರನ್ನು ಆಗಿನ ಶಾಸಕರಾಗಿದ್ದ ಎಚ್‌. ಶಿವಪ್ಪ ಅವರು ಪದೇ ಪದೇ ವರ್ಗಾವಣೆ ಮಾಡಿಸುತ್ತಿದ್ದರು. ಇದರಿಂದ ಬೇಸತ್ತ ನಾಗಪ್ಪ ಅವರು, ಶಿವಪ್ಪ ಅವರ ವಿರುದ್ಧವೇ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಒಮ್ಮೆ ಸಚಿವರಾಗಿಯೂ ಕಾರ್ಯನಿರ್ವಹಿಸುವ ಮೂಲಕ ಹರಿಹರದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು.

1985ರಲ್ಲಿ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಕಾಂಗ್ರೆಸ್‌ನಿಂದ ಧುಮುಕಿದ್ದ ನಾಗಪ್ಪ ಅವರು, ಒಟ್ಟು ಆರು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು. 2008ರ ಚುನಾವಣೆಯಲ್ಲಿ ಸೋತ ಬಳಿಕ ರಾಜಕೀಯದಿಂದ ದೂರ ಉಳಿದಿದ್ದರು.

ಹಿಂದುಳಿದ ಸಮಾಜದ ಧ್ವನಿಯಾಗಿದ್ದ ನಾಗಪ್ಪ ಅವರು ಒಬ್ಬ ಕುಸ್ತಿ ಪಟುವೂ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.