ದಾವಣಗೆರೆ: ‘ಸುಳ್ಳು ಗ್ಯಾರಂಟಿಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. 9 ತಿಂಗಳಾದರೂ ಸರ್ಕಾರ ಟೇಕಾಫ್ ಆಗಿಲ್ಲ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.
‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ರಾಜ್ಯ ಸರ್ಕಾರದ ವಿರುದ್ಧ ಶೇ 40 ಕಮಿಷನ್ ಆರೋಪ ಮಾಡಿದ್ದಾರೆ. ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ದೂರಿದ್ದಾರೆ. ಬೆಂಗಳೂರಿನ ಗುತ್ತಿಗೆದಾರರೂ ಪರ್ಸಂಟೇಜ್ ಬಗ್ಗೆ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧವೂ ಕೆಂಪಣ್ಣ ಆರೋಪ ಮಾಡಿದಾಗ ಪೇಸಿಎಂ ಅಭಿಯಾನ ಮಾಡಿದ್ದರು. ಈಗ ಏನು ಹೇಳುತ್ತಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.
‘ಕೆಂಪಣ್ಣ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಹೇಳುತ್ತಾರೆ. ಇದಕ್ಕೆ ಮುಖ್ಯಮಂತ್ರಿ ಉತ್ತರ ನೀಡಲೇಬೇಕು. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
‘ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಎಲ್ಲ ಸಚಿವರೂ ಡಿಸಿಎಂ ಆಗಬೇಕು ಎನ್ನುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಫೇಲ್ ಆಗಿವೆ. ಜನರು ಸಮಸ್ಯೆ ಎದುರಿಸುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಬಸ್‌ಗಳ ಕೊರತೆ ಇದೆ. ಇದರಿಂದ ಜನರು ಪರದಾಡುವಂತಾಗಿದೆ. ಯುವನಿಧಿ ಯೋಜನೆಯ ಹಣ ಬಂದಿಲ್ಲ’ ಎಂದು ದೂರಿದರು.
‘ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ವಿರುದ್ಧ ಸುಳ್ಳಿನ ಪತ್ರ ಬಿಡುಗಡೆ ಮಾಡಿದ್ದಾರೆ. ಸುಳ್ಳು ಹೇಳುವುದರಲ್ಲಿ ಅವರಿಗೆ ಡಾಕ್ಟರೇಟ್ ಕೊಡಬೇಕು. ಬರ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿಯೇ ಜನ ಸ್ಪಂದನ ಮಾಡುತ್ತಿದ್ದಾರೆ. ಹಾಗಾದರೆ ಅವರಿಗೆ ಶಾಸಕರು, ಸಚಿವರು, ಅಧಿಕಾರಿಗಳ ಬಗ್ಗೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದರು.
‘ಇಂಡಿಯಾ ಒಕ್ಕೂಟ ಈಗಾಗಲೇ ಛಿದ್ರವಾಗಿದೆ. ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರವೂ ಆಂತರಿಕ ಕಚ್ಚಾಟದಿಂದ ಪತನವಾಗಲಿದೆ’ ಎಂದರು.
‘ಲೋಕಸಭಾ ಚುನಾವಣೆಗೆ ನಿಲ್ಲಿಸಲು ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳೇ ಇಲ್ಲ. ಸೋಲಿನ ಭೀತಿಯಿಂದ ಸ್ಪರ್ಧೆ ಮಾಡಲು ಎಲ್ಲರೂ ಹಿಂಜರಿಯುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಈಶ್ವರಪ್ಪ ಕಟ್ಟಾ ಹಿಂದುತ್ವವಾದಿ. ದೇಶ ವಿಭಜನೆ ಮಾಡಬೇಕು ಎಂದರೆ ಯಾರು ಸುಮ್ಮನೆ ಇರುತ್ತಾರೆ. ದೇಶದ್ರೋಹಿಗಳ ವಿರುದ್ಧ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ’ ಎಂದು ರೇಣುಕಾಚಾರ್ಯ ಸಮರ್ಥಿಸಿಕೊಂಡರು.
‘ಜಿಲ್ಲಾ ಬಿಜೆಪಿಯಲ್ಲಿ ಬಣ ರಾಜಕೀಯ ಇಲ್ಲ. ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಯಾರು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ಯಾರೇ ಅಭ್ಯರ್ಥಿಯಾದರೂ ಎಲ್ಲರೂ ಒಮ್ಮತದಿಂದ ಅವರ ಪರ ಕೆಲಸ ಮಾಡುತ್ತೇವೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಮುಖಂಡರಾದ ಕೆ.ಪಿ. ಕಲ್ಲಿಂಗಪ್ಪ, ಮಂಜಣ್ಣ, ಪ್ರತಾಪ್, ಪ್ರವೀಣ್ ಜಾಧವ್, ರಾಜು ವೀರಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.