ADVERTISEMENT

ಪ್ರಜಾವಾಣಿ ಫೋನ್‌ ಇನ್: ಫಲಾನುಭವಿ ತಂದೆ ಅಪಘಾತದಲ್ಲಿ ಸತ್ತರೆ ₹ 4 ಲಕ್ಷ ಪರಿಹಾರ

ಭಾಗ್ಯಲಕ್ಷ್ಮಿ ಬಾಂಡ್‌ ಹೊಂದಿದ ಹೆಣ್ಣುಮಕ್ಕಳ ತಂದೆಯ ಸಹಜ ಸಾವಿಗೆ ಎರಡು ಲಕ್ಷ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 10:49 IST
Last Updated 1 ಫೆಬ್ರುವರಿ 2020, 10:49 IST
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಅವರು ಕರೆ ಮಾಡಿದ ಓದುಗರ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಅವರು ಕರೆ ಮಾಡಿದ ಓದುಗರ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಜಾವಾಣಿ ಚಿತ್ರ   

ದಾವಣಗೆರೆ: ಭಾಗ್ಯಲಕ್ಷ್ಮಿ ಯೋಜನೆಯನ್ನು ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಜೊತೆಗೆ ವಿಲೀನಗೊಳಿಸಿರುವುದರಿಂದ ಫಲಾನುಭವಿಯ ತಂದೆ ಅಪಘಾತದಲ್ಲಿ ಮೃತಪಟ್ಟರೆ ತಾಯಿ ಹಾಗೂ ಮಗಳಿಗೆ ₹ 4 ಲಕ್ಷ ಪರಿಹಾರ ಸಿಗಲಿದೆ. ಸಹಜವಾಗಿ ಮೃತಪಟ್ಟರೆ₹2 ಲಕ್ಷ ಪರಿಹಾರ ಲಭಿಸಲಿದೆ’ ಎಂದು ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ತಿಳಿಸಿದರು.

ಶುಕ್ರವಾರ ನಡೆದ ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ‘ಭಾಗ್ಯಲಕ್ಷ್ಮಿ’ ಯೋಜನೆ ಕುರಿತ ಪ್ರಶ್ನೆಗಳಿಗೆ ಅವರು ಮಾಹಿತಿ ನೀಡಿದರು.

‘ಈ ಮೊದಲು ಆಮ್‌ ಆದ್ಮಿ ಬಿಮಾ ಯೋಜನೆ (ಎಎಬಿವೈ) ಅಡಿ ಪೋಷಕರ ಮರಣ ವಿಮೆ ಪಾವತಿಸಲಾಗುತ್ತಿತ್ತು. ಆಗ ತಂದೆಯ ಸಹಜ ಸಾವಿಗೆ ₹30 ಸಾವಿರ ಹಾಗೂ ಅಪಘಾತ ಸಾವಿಗೆ ₹75 ಸಾವಿರ ಪರಿಹಾರ ಕೊಡಲಾಗುತ್ತಿತ್ತು. 2017ರ ಜುಲೈನಿಂದ ಪಿಎಂಜೆಜೆಬಿವೈ ಜೊತೆಗೆ ವಿಲೀನಗೊಳಿಸಲಾಗಿದ್ದು, ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ. ತಂದೆ ಮೃತಪಟ್ಟ ಬಳಿಕ ಮರಣ ಪ್ರಮಾಣಪತ್ರ, ಎಫ್‌ಐಆರ್‌ ಪ್ರತಿ, ಆಧಾರ್‌ ಲಿಂಕ್‌ ಇರುವ ಬ್ಯಾಂಕ್‌ ಸಂಖ್ಯೆಯ ವಿವರಗಳ ಜೊತೆಗೆ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಪರಿಹಾರ ಹಣವನ್ನು ಈಗಲೇ ನೀಡಲಾಗುತ್ತದೆ. ಹೆಣ್ಣುಮಗುವಿಗೆ 18 ವರ್ಷ ತುಂಬಿದ ಬಳಿಕ ₹ 1 ಲಕ್ಷವನ್ನೂ ಕೊಡಲಾಗುತ್ತದೆ. ಒಂದೊಮ್ಮೆ 18 ವರ್ಷದೊಳಗೆ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಿದರೆ ಭಾಗ್ಯಲಕ್ಷ್ಮಿ ಬಾಂಡ್‌ನ ₹ 1 ಲಕ್ಷ ಸಿಗುವುದಿಲ್ಲ’ ಎಂದರು.

ADVERTISEMENT

ಬಿಪಿಎಲ್‌ ಕುಟುಂಬದವರಿಗೆ ಎರಡು ಹೆಣ್ಣುಮಗುವಿಗೆ ₹ 1 ಲಕ್ಷ ಮೊತ್ತದ ‘ಭಾಗ್ಯಲಕ್ಷ್ಮಿ’ ಬಾಂಡ್‌ ಮಾಡಿಸಲು ಅವಕಾಶವಿದೆ. ಈ ಮೊದಲು ಹೆಣ್ಣುಮಗು ಜನಿ ಸಿದ ಒಂದು ವರ್ಷದೊಳಗೆ ‘ಭಾಗ್ಯಲಕ್ಷ್ಮಿ’ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಬೇಕಾಗಿತ್ತು. ಈಗ ನಿಯಮಾವಳಿ ತಿದ್ದುಪಡಿ ಮಾಡಲಾಗಿದ್ದು, 2018ರ ಫೆಬ್ರುವರಿ 24ರ ನಂತರ ಜನಿಸಿದ ಹೆಣ್ಣು ಮಗುವಿಗೆ ಎರಡು ವರ್ಷಗಳ ಒಳಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

‘ಮಗಳನ್ನು ಮುಂದಿನ ವರ್ಷ ಒಂದನೇ ತರಗತಿಗೆ ಸೇರಿಸಬೇಕಾಗಿದೆ. ಸರ್ಕಾರಿ ಶಾಲೆಗೆ ಸೇರಿಸದೇ ಇದ್ದರೆ ಭಾಗ್ಯಲಕ್ಷ್ಮಿ ಬಾಂಡ್‌ನ ಹಣ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರಿ ಶಾಲೆಗೆ ಕಡ್ಡಾಯವಾಗಿ ಸೇರಿಸಲೇಬೇಕಾ’ ಎಂದು ನ್ಯಾಮತಿ ತಾಲ್ಲೂಕಿನ ಫಲವನಹಳ್ಳಿಯ ಮಂಜುನಾಥ ನಾಯ್ಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯಕುಮಾರ್‌,

‘ಭಾಗ್ಯಲಕ್ಷ್ಮಿ ಬಾಂಡ್‌ ಸೌಲಭ್ಯ ಪಡೆದ ಹೆಣ್ಣು ಮಕ್ಕಳನ್ನುಸರ್ಕಾರಿ ಶಾಲೆಗೇ ಕಡ್ಡಾಯವಾಗಿ ಸೇರಿಸಬೇಕು ಎಂಬ ನಿಯಮ ಇಲ್ಲ. ಸರ್ಕಾರಿ ಶಾಲೆಗೆ ಮಕ್ಕಳು ಹೆಚ್ಚು ಬರಲಿ ಎಂಬ ಕಾರಣಕ್ಕೆ ಸ್ಥಳೀಯವಾಗಿ ಅಧಿಕಾರಿಗಳು ಈ ರೀತಿ ಹೇಳಿರಬಹುದು’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.