ದಾವಣಗೆರೆ: ವಧು–ವರರ ಆಯ್ಕೆಯ ಜಾಲತಾಣವಾದ ‘ಮ್ಯಾಟ್ರಿಮೋನಿ’ಯಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಮದುವೆಗೂ ಮುನ್ನ ಸರ್ಕಾರಿ ಉದ್ಯೋಗ ಕೊಡಿಸುವ ನಂಬಿಕೆ ಹುಟ್ಟಿಸಿ ಹಲವರಿಗೆ ₹ 62 ಲಕ್ಷ ವಂಚಿಸಿದ್ದ ಆರೋಪಿಯನ್ನು ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ತಾಲ್ಲೂಕಿನ ಮಾಚಹಳ್ಳಿಯ ಎಂ.ಮಧು (31) ಬಂಧಿತ ಆರೋಪಿ. ವರನ ಸೋಗಿನಲ್ಲಿ ರಾಜ್ಯದ ಹಲವೆಡೆ ಯುವತಿಯರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ.
‘ಕನ್ನಡ ಮ್ಯಾಟ್ರಿಮೋನಿ’ ಜಾಲತಾಣದಲ್ಲಿ ನಗರದ ಯುವತಿಯೊಬ್ಬರನ್ನು ಆರೋಪಿ ಪರಿಚಯಿಸಿಕೊಂಡಿದ್ದ. ವಿವಾಹವಾಗುವ ನಂಬಿಕೆ ಗಿಟ್ಟಿಸಿಕೊಂಡು ರೈಲ್ವೆ ಇಲಾಖೆಯ ಮೈಸೂರಿನ ವರ್ಕ್‌ಶಾಪ್‌ನಲ್ಲಿ ಉದ್ಯೋಗ ಕೊಡಿಸುವ ಭರವಸೆ ಮೂಡಿಸಿದ್ದ. ನಯವಾದ ಮಾತುಗಳಿಗೆ ಮಾರುಹೋದ ಯುವತಿ ಹಂತಹಂತವಾಗಿ ಆರೋಪಿಯ ಬ್ಯಾಂಕ್ ಖಾತೆಗೆ ₹ 21 ಲಕ್ಷ ಹಣ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆಗೆ ಒಳಗಾದ ಯುವತಿ ಮೇ 4ರಂದು ಸಿಇಎನ್ ಠಾಣೆಗೆ ದೂರು ನೀಡಿದ್ದರು. ದೂರಿನ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಯ ವಂಚನೆಯ ಜಾಲ ಬೆಳಕಿಗೆ ಬಂದಿದೆ. ‘ಮ್ಯಾಟ್ರಿಮೋನಿ’ ಜಾಲತಾಣದಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡುತ್ತಿರುವುದು ತನಿಖೆಯಿಂದ ಗೊತ್ತಾಗಿದೆ.
ಚಿಕ್ಕಮಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ₹ 3.8 ಲಕ್ಷ, ಮಂಡ್ಯ ಸಿಇಎನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ₹ 26 ಲಕ್ಷ, ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ₹ 1.5 ಲಕ್ಷ, ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ₹ 1.3 ಲಕ್ಷ, ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆ ಪ್ರಕರಣದಲ್ಲಿ ₹ 2.8 ಲಕ್ಷ, ಮೈಸೂರು ಸಿಇಎನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ₹ 90 ಸಾವಿರ ಹಾಗೂ ಕೆ.ಆರ್.ನಗರ ಪೊಲೀಸ್ ಠಾಣೆ ಪ್ರಕರಣದಲ್ಲಿ ₹ 5.5 ಲಕ್ಷ ವಂಚನೆ ಮಾಡಿದ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೆಟ್ರೋಮೊನಿ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು ನಯವಾಗಿ ಮಾತನಾಡಿ ವಂಚಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು.ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.