ADVERTISEMENT

ಹರಿಹರ | ಇಂಧನ ಬೆಲೆ ಏರಿಕೆ: ಶಾಸಕರ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 16:21 IST
Last Updated 22 ಜೂನ್ 2024, 16:21 IST
ಇಂಧನ ಬೆಲೆ ಏರಿಕೆ ಖಂಡಿಸಿ ಶನಿವಾರ ಹರಿಹರದ ಶಿವಮೊಗ್ಗ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಶಾಸಕ ಬಿ.ಪಿ.ಹರೀಶ್ ಹಾಗೂ ಮುಖಂಡರು ಭಾಗವಹಿಸಿದ್ದರು
ಇಂಧನ ಬೆಲೆ ಏರಿಕೆ ಖಂಡಿಸಿ ಶನಿವಾರ ಹರಿಹರದ ಶಿವಮೊಗ್ಗ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಶಾಸಕ ಬಿ.ಪಿ.ಹರೀಶ್ ಹಾಗೂ ಮುಖಂಡರು ಭಾಗವಹಿಸಿದ್ದರು    

ಹರಿಹರ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಹರಿಹರದ ಶಿವಮೊಗ್ಗ ವೃತ್ತದಲ್ಲಿ ಶನಿವಾರ ಶಾಸಕ ಬಿ.ಪಿ.ಹರೀಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.

ವಿವಿಧ ಪದಾರ್ಥಗಳ ಬೆಲೆ ಏರಿಕೆ, ಮುಂಗಾರು ಮಳೆಯ ಕೊರತೆಯಿಂದ ಈಗಾಗಲೇ ಜನ ಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಈ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಸಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಶಾಸಕ ಬಿ.ಪಿ.ಹರೀಶ್ ಟೀಕಿಸಿದರು.

ಇಂಧನ ಬೆಲೆ ಏರಿಸಿದಾಗ ಅದು ಇಂಧನ ಬಳಕೆದಾರರಿಗೆ ಬಿಸಿ ಮುಟ್ಟಿಸುವ ಜೊತೆಗೆ ಎಲ್ಲಾ ಆಹಾರ, ಪದಾರ್ಥಗಳ ಬೆಲೆಯಲ್ಲಿ ಏರಿಕೆಗೆ ಕಾರಣವಾಗುತ್ತದೆ. ಕೂಡಲೇ ಇಂಧನ ಬೆಲೆ ಏರಿಕೆ ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅಪಾರ ಮೊತ್ತದ ಅನುದಾನವನ್ನು ರಾಜ್ಯ ಸರ್ಕಾರ ಅನ್ಯ ಕಾರ್ಯಕ್ಕೆ ಬಳಕೆ ಮಾಡುವ ಮೂಲಕ ಆ ವರ್ಗದವರ ಶ್ರೇಯೋಭಿವೃದ್ಧಿಗೆ ತೊಡರನ್ನುಂಟು ಮಾಡಿದೆ’ ಎಂದರು.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿಲ್ಲ ಎಂದು ಇಂಧನ ಬೆಲೆ ಏರಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಯ ಮೇಲೆ ಸೇಡು ತೀರಿಸಿಕೊಂಡಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ್ ಆರೋಪಿಸಿದರು.

ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಆಟೊ ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣೇಶ್ ಐರಣಿ, ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಪ್ರಧಾನ ಕಾರ್ಯದರ್ಶಿಗಳಾದ ತುಳಜಪ್ಪ ಭೂತೆ, ವೀರೇಶ್ ಆದಾಪುರ, ಪಕ್ಷದ ಮುಖಂಡರಾದ ಚಂದ್ರಶೇಖರ ಪೂಜಾರ್, ಐರಣಿ ನಾಗರಾಜ್, ಸುರೇಶ್ ತೆರದಹಳ್ಳಿ, ವಾಸು ಚಂದಾಪೂರ, ಸನಾಉಲ್ಲಾ, ಸಂತೋಷ್ ಗುಡಿಮನಿ, ರಾಜೇಶ್ ವರ್ಣೇಕರ್, ಗುರುನಾಥ್, ಹಳ್ಳದಕೇರಿ ಗಿರೀಶ್, ರವಿ, ಕಾರ್ತಿಕ್, ರಾಜು ಖಿರೋಜಿ, ಗೋಪಿನಾಥ್, ಬೆಣ್ಣೆ ಸಿದ್ದಣ್ಣ, ಮಾರುತಿ ಶೆಟ್ಟಿ, ಜಿ.ಎಂ.ಪ್ರಶಾಂತ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.