ADVERTISEMENT

ಶಿಕಾರಿಪುರ ಸೌಂದರ್ಯಕ್ಕೆ ಧಕ್ಕೆ ತಂದ ತ್ಯಾಜ್ಯ

ಎಚ್.ಎಸ್.ರಘು
Published 20 ಮೇ 2024, 7:40 IST
Last Updated 20 ಮೇ 2024, 7:40 IST
ಶಿಕಾರಿಪುರದ ಮಾಸೂರು ಸರ್ಕಲ್ ಸಮೀಪದ ರಸ್ತೆ ಪಕ್ಕ ಪುರಸಭೆ ಹಾಕಿದ ದಂಡ ಹಾಕುವ ನಾಮಫಲಕದ ಕೆಳಗೆ ಕಸದ ರಾಶಿ ಹಾಕಿರುವುದು
ಶಿಕಾರಿಪುರದ ಮಾಸೂರು ಸರ್ಕಲ್ ಸಮೀಪದ ರಸ್ತೆ ಪಕ್ಕ ಪುರಸಭೆ ಹಾಕಿದ ದಂಡ ಹಾಕುವ ನಾಮಫಲಕದ ಕೆಳಗೆ ಕಸದ ರಾಶಿ ಹಾಕಿರುವುದು   

ಶಿಕಾರಿಪುರ: ಪಟ್ಟಣದ ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಕಸದ ರಾಶಿ (ತ್ಯಾಜ್ಯ ವಸ್ತು) ಬಿದ್ದಿದ್ದು, ಪಟ್ಟಣದ ಸುಂದರ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಮಾತ್ರವಲ್ಲದೇ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಪಟ್ಟಣದ ಮಿಡ್ಲ್ ಸ್ಕೂಲ್ ರಸ್ತೆ, ಮಂಡಿಪೇಟೆ ರಸ್ತೆ ಬದಿಯಲ್ಲಿ ನಿತ್ಯವೂ ಮನೆ ಹಾಗೂ ವಾಣಿಜ್ಯ ಮಳಿಗೆಗಳ ತ್ಯಾಜ್ಯ ವಸ್ತುಗಳನ್ನು ಹಾಕಲಾಗುತ್ತಿದೆ. ಮನೆಯಲ್ಲಿ ಉಳಿದ ಆಹಾರ ಪದಾರ್ಥ, ಪ್ಲಾಸ್ಟಿಕ್ ಕವರ್ ಸೇರಿದಂತೆ ವಿವಿಧ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಈ ಕಸದ ರಾಶಿ ಪಟ್ಟಣದ ನೈರ್ಮಲ್ಯಕ್ಕೆ ಅಡ್ಡಿಯಾಗುತ್ತಿದೆ. ಪುರಸಭೆಯು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿರುವ ಮನೆಗಳಿಂದ ಹಸಿ ಕಸ ಹಾಗೂ ಒಣಕಸ ಸಂಗ್ರಹಿಸಲು ಧ್ವನಿವರ್ಧಕ ಹೊಂದಿದ 8 ವಾಹನಗಳನ್ನು ನಿತ್ಯ ಮನೆ ಬಾಗಿಲಿಗೆ ಕಳುಹಿಸುತ್ತಿದೆ.

ಮನೆ ಬಾಗಿಲಿಗೆ ವಾಹನ ಬಂದರೂ, ಕೆಲವು ಮನೆಗಳ ಮಾಲೀಕರು ವಾಹನ ಬರುವ ಸಮಯಕ್ಕೆ ಕಸವನ್ನು ವಾಹನಗಳಿಗೆ ನೀಡದೇ ನಿರ್ಲಕ್ಷ್ಯ ಮಾಡುವ ಮೂಲಕ ರಾತ್ರಿ ಸಮಯದಲ್ಲಿ ಕಸವನ್ನು ರಸ್ತೆ ಬದಿಯಲ್ಲಿ ಹಾಕುವ ದೃಶ್ಯ ಕಾಣಸಿಗುತ್ತಿದೆ.

ADVERTISEMENT

ತ್ಯಾಜ್ಯ ಸಂಗ್ರಹಿಸಲು ಕನಕ ಪಾರ್ಕ್ ಮುಂಭಾಗ ಪುರಸಭೆ ಸಿಬ್ಬಂದಿ ಟ್ರ್ಯಾಕ್ಟರ್ ಟ್ರ್ಯಾಲಿ ನಿಲ್ಲಿಸಿದರೂ, ಸಾರ್ವಜನಿಕರು ಅದರೊಳಗೆ ಕಸ ಹಾಕದೇ ಟ್ರ್ಯಾಲಿ ಪಕ್ಕದ ಖಾಲಿ ಜಾಗದಲ್ಲಿ ಹಾಕುತ್ತಿದ್ದಾರೆ. ಅಲ್ಲಿನ ಆಹಾರ ಪದಾರ್ಥವನ್ನು ಜಾನುವಾರುಗಳು, ಹಂದಿಗಳು ಹಾಗೂ ನಾಯಿಗಳು ತಿನ್ನುವ ಸಂದರ್ಭದಲ್ಲಿ ಸುತ್ತ ಮುತ್ತಲಿನ ವಾತಾವರಣವನ್ನು ಗಲೀಜು ಮಾಡುತ್ತಿದ್ದು, ರೋಗಗಳು ಹರಡುವ ಸಾಧ್ಯತೆ ಇದೆ.

ಪುರಸಭೆ ಸಿಬ್ಬಂದಿಯು ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕಿದರೆ ₹ 500ರಿಂದ ₹ 5,000 ದಂಡ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯ ನಾಮಫಲಕವನ್ನು ಅಳವಡಿಸುವ ಕಾರ್ಯ ಮಾಡಿದೆ. ಆದರೆ, ಕೆಲವು ನಾಗರಿಕರು ಈ ನಾಮಫಲಕದ ಕೆಳಗಡೆಯೇ ತ್ಯಾಜ್ಯ ಹಾಕುತ್ತಿದ್ದಾರೆ.

ಪುರಸಭೆ ಅಧಿಕಾರಿಗಳು ಪಟ್ಟಣದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಾಗರಿಕರಿಗೆ ಜಾಗೃತಿ ಮೂಡಿಸುವ ಅಗತ್ಯತೆ ಇದೆ.

ರುದ್ರಭೂಮಿ ಮುಂಭಾಗ ಕಸದ ರಾಶಿ:

ಶಿಕಾರಿಪುರ ಪಟ್ಟಣಕ್ಕೆ ಆಗಮಿಸುವ ಜನರಿಗೆ ಕಸದ ರಾಶಿಗಳೇ ಸ್ವಾಗತ ಮಾಡುವ ದೃಶ್ಯ ಕಂಡು ಬರುತ್ತಿದೆ. ಪಟ್ಟಣದ ಹೊನ್ನಾಳಿ ರಸ್ತೆ, ಮಾಸೂರು ರಸ್ತೆ, ಶಿವಮೊಗ್ಗ ರಸ್ತೆ ಪಕ್ಕದ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಸದ ರಾಶಿ ಕಾಣಸಿಗುತ್ತದೆ. ಹೊನ್ನಾಳಿ ರಸ್ತೆ ಪಕ್ಕದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಆಗಮಿಸುವ ಮೃತರ ಸಂಬಂಧಿಕರು ರುದ್ರಭೂಮಿ ಮುಂಭಾಗ ರಸ್ತೆ ಪಕ್ಕದಲ್ಲಿಯೇ ಮೃತರು ಉಪಯೋಗಿಸಿದ ಹಾಸಿಗೆ ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಹಾಕಿ ಹೋಗಿರುವುದು ಕಾಣಸಿಗುತ್ತಿದೆ.

ಶಿಕಾರಿಪುರ ಪಟ್ಟಣದಲ್ಲಿ ಕಸ ಸಂಗ್ರಹಿಸಲು ಮನೆ ಬಾಗಿಲಿಗೆ ಆಗಮಿಸುವ ಪುರಸಭೆ ವಾಹನ
ಶಿಕಾರಿಪುರದ ಹೊನ್ನಾಳಿ ರಸ್ತೆ ಪಕ್ಕದಲ್ಲಿ (ರುದ್ರಭೂಮಿ ಮುಂಭಾಗ) ಕಾಣಸಿಗುವ ತ್ಯಾಜ್ಯ ವಸ್ತುಗಳ ದೃಶ್ಯ
ನಾಗರಿಕರು ಪಟ್ಟಣದ ಸ್ಬಚ್ಛತೆ ಕಾಪಾಡಲು ಪುರಸಭೆಗೆ ಸಹಕರಿಸಬೇಕು. ಸ್ವಚ್ಛತೆ ಕಾಪಾಡುವಲ್ಲಿ ತಮ್ಮ ಪಾತ್ರವಿದೆ ಎಂಬುದನ್ನು ನಾಗರಿಕರು ಅರಿಯಬೇಕು. ಕಸ ಹಾಕಿದವರ ಮಾಹಿತಿ ಸಿಕ್ಕ ಕೂಡಲೇ ದಂಡ ಹಾಕಲಾಗುತ್ತಿದೆ
ಭರತ್ ಮುಖ್ಯಾಧಿಕಾರಿ ಪುರಸಭೆಶಿಕಾರಿಪುರ
ಪುರಸಭೆ ಅಧಿಕಾರಿ ಸಿಬ್ಬಂದಿ ನಾಗರಿಕರಲ್ಲಿ ಸ್ವಚ್ಛಗೆ ಬಗ್ಗೆ ಹೆಚ್ಚು ಅರಿವು ಮೂಡಿಸಲು ಮುಂದಾಗಬೇಕು. ಮನೆ ಬಾಗಿಲಿಗೆ ಆಗಮಿಸುವ ಪುರಸಭೆ ವಾಹನಗಳಿಗೆ ನಾಗರಿಕರು ತ್ಯಾಜ್ಯ ವಸ್ತುಗಳನ್ನು ಹಾಕಬೇಕು
ರಮೇಶ್ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.