ದಾವಣಗೆರೆ: ‘ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯು ಕೇವಲ ಅಡುಗೆ ಮಾಡಲು ಲಾಯಕ್ಕು’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ‘ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದು, ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ, ಸಮರ್ಥವಾಗಿ ಅಧಿಕಾರವನ್ನೂ ನಡೆಸುತ್ತಾರೆ’ ಎಂದು ಹೇಳಿದ್ದಾರೆ.
ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ ಮಾತನಾಡಿದ ಅವರು, ‘ಅಡುಗೆ ಮಾಡಿ ಕೈತುತ್ತು ಕೊಡುವ ಪ್ರೀತಿ ಅವರಿಗೆ ಗೊತ್ತಿಲ್ಲ. ಮಹಿಳೆ ಅಡುಗೆಯನ್ನೂ ಮಾಡುತ್ತಾಳೆ, ಆಕಾಶದಲ್ಲೂ ಹಾರಾಡುತ್ತಾಳೆ. ಮೋದಿ ಅವರು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಇಂಥವರು ಮಹಿಳೆಯರಿಗೆ ಅಪಮಾನ ಮಾಡುತ್ತಾರೆ’ ಎಂದು ಶಿವಶಂಕರಪ್ಪ ವಿರುದ್ಧ ಕಿಡಿಕಾರಿದರು.
ಈಚೆಗೆ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ, ‘ಬಿಜೆಪಿ ಅಭ್ಯರ್ಥಿ ದಾವಣಗೆರೆಯಿಂದ ಗೆದ್ದು ಪ್ರಧಾನಿ ಮೋದಿಗೆ ಕಮಲದ ಹೂವು ಅರ್ಪಿಸುತ್ತೇನೆ ಎನ್ನುತ್ತಾರೆ. ಈ ಹಿಂದೆ ಗೆದ್ದಿದ್ದು ನೀವೇ (ಜಿ.ಎಂ.ಸಿದ್ದೇಶ್ವರ) ಅಲ್ಲವೇ? ಆಗ ಹೂವನ್ನು ಕಳುಹಿಸಿದ್ರಾ’ ಎಂದು ಪ್ರಶ್ನಿಸಿದ್ದರು.
‘ಹೂವನ್ನು ಕಳುಹಿಸಿದರೆ ಅಭಿವೃದ್ಧಿ ಆಗುವುದಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು, ಕೇವಲ ಮೋದಿ ಮೋದಿ ಎನ್ನುವುದಲ್ಲ, ಎದುರಾಳಿ ಅಭ್ಯರ್ಥಿಗೆ ಜನರ ಮಧ್ಯೆ ಮಾತನಾಡಲು ಬರಲ್ಲ, ಅವರು ಕೇವಲ ಅಡುಗೆ ಮಾಡಲು ಲಾಯಕ್ಕು’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.