ADVERTISEMENT

ದಾವಣಗೆರೆ: ಜಿ.ಎಂ. ಸಿದ್ದೇಶ್ವರ ಬದಲು ಅವರ ಪತ್ನಿಗೆ ಬಿಜೆಪಿ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 15:55 IST
Last Updated 13 ಮಾರ್ಚ್ 2024, 15:55 IST
ಗಾಯತ್ರಿ ಸಿದ್ದೇಶ್ವರ
ಗಾಯತ್ರಿ ಸಿದ್ದೇಶ್ವರ   

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯು ಅಚ್ಚರಿಯ ಅಭ್ಯರ್ಥಿಯನ್ನು ಘೋಷಿಸಿದೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಹೈಕಮಾಂಡ್‌ ಟಿಕೆಟ್‌ ನೀಡಿದೆ.    

ಶಿವಮೊಗ್ಗ ನಗರದಲ್ಲಿ 1955ರ ಏಪ್ರಿಲ್‌ 16ರಂದು ಜನಿಸಿರುವ ಗಾಯತ್ರಿ ಸಿದ್ದೇಶ್ವರ, ಪಿಯುಸಿವರೆಗೆ ಓದಿದ್ದಾರೆ. 1976ರಲ್ಲಿ ಜಿ.ಎಂ.ಸಿದ್ದೇಶ್ವರ ಜೊತೆ ವಿವಾಹವಾಗಿದ್ದ ಇವರು ಚುನಾವಣೆ ವೇಳೆ ಮಾವ ಮಲ್ಲಿಕಾರ್ಜುನಪ್ಪ ಹಾಗೂ ಪತಿಯ ಪರವಾಗಿ ಪ್ರಚಾರ ನಡೆಸಿದ್ದು ಬಿಟ್ಟರೆ, ರಾಜಕೀಯದಲ್ಲಿ ಪರಿಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿಲ್ಲ.

ಜಿ.ಎಂ.ಹಾಲಮ್ಮ ಚಾರಿಟಬಲ್‌ ಟ್ರಸ್ಟ್‌ ಮೂಲಕ ಉದ್ಯೋಗ ಮೇಳ, ಆರೋಗ್ಯ ಶಿಬಿರ ಹಾಗೂ ಮಹಿಳಾ ಸಂಘಗಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಮನೆ ಹಾಗೂ ತೋಟದ ನಿರ್ವಹಣೆಯ ಜವಾಬ್ದಾರಿಯನ್ನು ಇವರು ನೋಡಿಕೊಳ್ಳುತ್ತಿದ್ದರು.

ADVERTISEMENT

ವಯಸ್ಸಿನ ಕಾರಣ ಈ ಬಾರಿ ಸಿದ್ದೇಶ್ವರ ಅವರಿಗೆ ಟಿಕೆಟ್‌ ಕೈತಪ್ಪಲಿದೆ ಎಂದು ಹೇಳಲಾಗಿತ್ತು. ನನಗೆ ಟಿಕೆಟ್‌ ಸಿಗದಿದ್ದರೂ  ಕುಟುಂಬದ ಯಾರಿಗಾದರೂ ಟಿಕೆಟ್ ತರುತ್ತೇನೆ ಎಂದು ಸಿದ್ದೇಶ್ವರ ಪದೇ ಪದೇ ಹೇಳುತ್ತಿದ್ದರು. ಅವರ ಪುತ್ರ ಜಿ.ಎಸ್‌. ಅನಿತ್‌ಕುಮಾರ್‌ ಆಗಾಗ್ಗೆ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದುದರಿಂದ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದೆಂಬ ನಿರೀಕ್ಷೆ ಗರಿಗೆದರಿತ್ತು. ಕೊನೆ ಕ್ಷಣದಲ್ಲಿ ಸಿದ್ದೇಶ್ವರ ಅವರ ಸಹೋದರ ಜಿ.ಎಂ. ಲಿಂಗರಾಜು ಅವರ ಹೆಸರೂ ಮುನ್ನೆಲೆಗೆ ಬಂದಿತ್ತು. ಆದರೆ ಹೈಕಮಾಂಡ್‌ ಗಾಯತ್ರಿ ಅವರಿಗೆ ಟಿಕೆಟ್‌ ಘೋಷಿಸಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ. 

‘ಅವಕಾಶ ನೀಡಿದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ. ದೇಶ ಸೇವೆಯ ಅವಕಾಶ ಸಿಕ್ಕರೆ, ಯಾರು ಬೇಡವೆನ್ನುತ್ತಾರೆ. ಪತಿ ಜಿ.ಎಂ‌‌.ಸಿದ್ದೇಶ್ವರ ಅವರಿಗೆ ಅಪಾರ ಅನುಭವ ಇದೆ. ಅವರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸುತ್ತೇನೆ’ ಎಂದು ಮಂಗಳವಾರ ಗಾಯತ್ರಿ ಅವರು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು.

‘ಮಾಧ್ಯಮಗಳಲ್ಲಿ ನೋಡಿದ ಮೇಲೆಯೇ ಟಿಕೆಟ್‌ ಸಿಕ್ಕಿರುವ ವಿಚಾರ ಗೊತ್ತಾಯಿತು. ನಾಲ್ಕು ಸಲ ಸಂಸದರಾಗಿರುವ ಪತಿ ಜೊತೆಗಿದ್ದಾರೆ. ನನಗೆ ಯಾರೂ ರಾಜಕಾರಣ ಹೇಳಿಕೊಡುವುದು ಬೇಡ. ಪತಿ ಹಾಕಿಕೊಟ್ಟ ದಾರಿಯಲ್ಲೇ ನಡೆಯುತ್ತೇನೆ. ಮನೆ, ತೋಟದ ಜವಾಬ್ದಾರಿಯನ್ನೂ ನಿಭಾಯಿಸುತ್ತೇನೆ’ ಎಂದು ಗಾಯತ್ರಿ ಸಿದ್ದೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಬಿಜೆಪಿ ಟಿಕೆಟ್ ಪಡೆಯಲು ದೆಹಲಿಮಟ್ಟದಲ್ಲಿ ಲಾಬಿ ನಡೆಸಿದರೂ ಹೈಕಮಾಂಡ್ ಅವರಿಗೆ ಮಣೆ ಹಾಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.