ದಾವಣಗೆರೆ: ‘ಮಹಿಳೆಯರ ಸುರಕ್ಷತೆಗಾಗಿ ಹಲವು ಕಾನೂನುಗಳನ್ನು ಜಾರಿಗೊಳಿಸಿದ್ದು, ಮಹಿಳೆಯರು ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ನೆರವು ಪಡೆದು ನ್ಯಾಯ ಪಡೆಯಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಸಲಹೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಗುರುವಾರ ನಡೆದ ಮಹಿಳೆಯರಿಗೆ ಕಾನೂನು ಅರಿವು, ಮಹಾನ್ ನಾಯಕರ ಕುರಿತ ವಿಚಾರ ಸಂಕಿರಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರತಿ ಹಂತದಲ್ಲೂ ಮಹಿಳೆಯರ ಮೇಲೆ ಶೋಷಣೆ, ದೌರ್ಜನ್ಯ ನಡೆಯುತ್ತಿತ್ತು, ಇದನ್ನು ಗಮನಿಸಿ ವರದಕ್ಷಿಣೆ ನಿಷೇಧ, ಬಾಲ್ಯ ವಿವಾಹ ಕಾಯ್ದೆ ನಿಷೇಧ, ಪೋಕ್ಸೊ ಮೊದಲಾದ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಇವುಗಳನ್ನು ಅರಿತುಕೊಂಡರೆ ಮಹಿಳೆಯರಿಗೆ ಶ್ರೀರಕ್ಷೆಯಾಗಲಿವೆ’ ಎಂದು ಹೇಳಿದರು.
‘ಶ್ರೇಣೀಕೃತ ಸಮಾಜದಲ್ಲಿ ಮಹಿಳೆ ಮತ್ತು ದಲಿತರು ಒಂದಲ್ಲಾ ಒಂದು ರೀತಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಸ್ವಾತಂತ್ರ‍್ಯಾ ನಂತರ ಎಲ್ಲರಿಗೂ ಸಮಪಾಲು-ಸಮಬಾಳು ನೀಡುವ ಉದ್ದೇಶದಿಂದ ಹಲವಾರು ಕಾನೂನು ಜಾರಿಗೊಳಿಸಲಾಗಿದೆ. ಮಹಿಳೆಯರು ಕಾನೂನು ಅರಿವು ಪಡೆದು, ಅನ್ಯಾಯಗಳ ವಿರುದ್ಧ ಧ್ವನಿಯೆತ್ತಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಸಲಹೆ ನೀಡಿದರು.
‘ಸ್ವಾತಂತ್ರ‍್ಯ ಇದೆ ಎಂದು ಸ್ವೇಚ್ಛೆಯಿಂದ ವರ್ತಿಸಬಾರದು. ನೀವು ಮಾಡುವ ಕೆಲಸದಿಂದ ಬೇರೆಯವರಿಗೆ ತೊಂದರೆಯಾದರೆ ಅನುಭವಿಸಿದ ವ್ಯಕ್ತಿಯ ಸ್ವಾತಂತ್ರ‍್ಯಕ್ಕೆ ಧಕ್ಕೆಯಾದಂತೆಯೇ ಅರ್ಥ. ಅದೇ ರೀತಿ ಕಾನೂನುಗಳೇ ಇಲ್ಲದಿದ್ದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಹಿಂದಿನಿಂದಲೂ ದೌರ್ಜನ್ಯಕ್ಕೆ ಒಳಗಾಗುತ್ತಾ ಬಂದಿರುವ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಕಾನೂನು ಜಾರಿಗೊಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಉಮಾ ಪ್ರಶಾಂತ್ ಹೇಳಿದರು.
ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮ. ಕರೆಣ್ಣವರ್ ಮಾತನಾಡಿ, ‘ದೇಶದ ಮಹಾನ್ ನಾಯಕರ ಆದರ್ಶಗಳನ್ನು ಪಾಲಿಸಿದ್ದಲ್ಲಿ ಪ್ರಗತಿ ಸಾಧ್ಯ. ವಿದ್ಯಾರ್ಥಿಗಳು ದೇಶದ ಸಂವಿಧಾನವನ್ನು ಓದಬೇಕು. ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕೆ ನಾವು ಏನು ಕೊಡುಗೆ ನೀಡುತ್ತೇವೆ ಎನ್ನುವುದು ಮುಖ್ಯ’ ಎಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎ. ಜಿಗಳಿ ಹಾಲೇಶ್ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ. ನಾಗರಾಜ್, ದಸಂಸ ರಾಜ್ಯ ಸಂಚಾಲಕ ಎಚ್. ಮಲ್ಲೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.