ಹೊನ್ನಾಳಿ: ತಾಲ್ಲೂಕಿನಲ್ಲಿ ಮಂಗಳವಾರ ಸಂಜೆ ಬಿರುಸಿನ ಮಳೆ ಸುರಿದಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನೀರು ನುಗ್ಗಿತ್ತು. ಇದರಿಂದ ರೋಗಿಗಳು ತೊಂದರೆ ಅನುಭವಿಸುವಂತಾಯಿತು.
ಸಂಜೆ 5.40 ಕ್ಕೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಪಟ್ಟಣದ ಹಲವು ರಸ್ತೆಗಳು ಜಲಾವೃತಗೊಂಡಿದ್ದವು. ಬಡಾವಣೆಯ ಬೀದಿಗಳಲ್ಲೂ ಮೊಳಕಾಲುದ್ದ ನೀರು ನಿಂತಿತ್ತು. ಖಾಸಗಿ ಬಸ್ ನಿಲ್ದಾಣದಲ್ಲಿ ಎರಡು ಅಡಿಯಷ್ಟು ನೀರಿತ್ತು.
ಮಳೆಯ ನೀರು ಕ್ರೀಡಾಂಗಣದಿಂದ ಸಾರ್ವಜನಿಕ ಆಸ್ಪತ್ರೆಯತ್ತ ಹರಿಯಿತು. ಕಟ್ಟಡ ಕಾಮಗಾರಿಯ ಪರಿಣಾಮವಾಗಿ ಮಳೆ ನೀರಿನ ಹರಿವು ದಿಕ್ಕು ಬದಲಾಗಿ ಆಸ್ಪತ್ರೆಗೆ ನುಗ್ಗಿತು. ಇದರಿಂದ ಶಸ್ತ್ರಚಿಕಿತ್ಸಾ ಕೊಠಡಿ, ಔಷಧ ವಿತರಣಾ ಕೊಠಡಿ, ಹೆರಿಗೆ ವಾರ್ಡ್, ಐಸಿಯು ಘಟಕದ ಕೇಂದ್ರಕ್ಕೆ ನೀರು ನುಗ್ಗಿತು. ಹೆರಿಗೆ ವಾರ್ಡ್‌ನಲ್ಲಿದ್ದ ಬಾಣಂತಿಯರು ಹಾಗೂ ಐಸಿಯು ಘಟಕದಲ್ಲಿನ ರೋಗಿಗಳನ್ನು ಬೆರೆಡೆಗೆ ಸ್ಥಳಾಂತರಿಸಲಾಯಿತು ಎಂದು ವೈದ್ಯ ಡಾ.ಸಂತೋಷ್ ತಿಳಿಸಿದ್ದಾರೆ.
ಮಳೆ ನೀರು ಏಕಾಏಕಿ ಆಸ್ಪತ್ರೆಗೆ ನುಗ್ಗಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆಸ್ಪತ್ರೆಯ ಸಿಬ್ಬಂದಿ ನೀರು ಹೊರಹಾಕುವ ಕಾರ್ಯವನ್ನು ರಾತ್ರಿಯವರೆಗೆ ನಡೆಸಿದರು.
ಹಳ್ಳದಲ್ಲಿ ಕೊಚ್ಚಿಹೋದ ಎಮ್ಮೆ
ಆರುಂಡಿ (ನ್ಯಾಮತಿ): ಗ್ರಾಮದಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಹಳ್ಳದ ನೀರು ಹರಿದು ಎಮ್ಮೆಯೊಂದು ಕೊಚ್ಚಿಹೋಗಿದೆ.
ಗ್ರಾಮದ ರೈತ ಮುಳುಗಪ್ಪ ಮಲ್ಲೇಶಪ್ಪ ಎಂಬುವರ ಎಮ್ಮೆ ಮೇಯಲು ಹೋಗಿದ್ದಾಗ ಹಳ್ಳದಲ್ಲಿ ನೀರಿನಲ್ಲಿ ಸಿಲುಕಿತ್ತು. ರಭಸವಾಗಿ ನುಗ್ಗಿದ ನೀರಿನ ಸೆಳೆತಕ್ಕೆ ಸಿಕ್ಕಿ ಮೃತಪಟ್ಟಿದೆ. ನ್ಯಾಮತಿ ತಾಲ್ಲೂಕಿನ ವಿವಿಧೆಡೆ ಒಂದು ಗಂಟೆಗೂ ಹೆಚ್ಚುಹೊತ್ತು ಬಿರುಸಿನ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.