ADVERTISEMENT

‌ಬೈಸಿಕಲ್‌ ಶೇರಿಂಗ್‌ಗೆ ಉತ್ತಮ ಸ್ಪಂದನ

ನಗರಕ್ಕೆ ಬಂತು ಪರಿಸರ ಸ್ನೇಹಿ ಬೈಸಿಕಲ್ l ವಾಯುವಿಹಾರಿಗಳಿಗೂ ಅನುಕೂಲ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 7:56 IST
Last Updated 18 ಫೆಬ್ರುವರಿ 2021, 7:56 IST
 ರವೀಂದ್ರ ಮಲ್ಲಾಪುರ 
 ರವೀಂದ್ರ ಮಲ್ಲಾಪುರ    

ದಾವಣಗೆರೆ: ನಗರ ಸ್ಮಾರ್ಟ್ ಸಿಟಿಯಾಗುವತ್ತ ಹೆಜ್ಜೆ ಹಾಕಿದೆ. ಸ್ಮಾರ್ಟ್‌ ಸಿಟಿಗೆ ತಕ್ಕಂತೆ ವಾಯುಮಾಲಿನ್ಯ ತಗ್ಗಿಸಲು, ಜನರ ಆರೋಗ್ಯ ದೃಷ್ಟಿಯಿಂದನಗರದಲ್ಲಿ ಬೈಸಿಕಲ್‌ ಶೇರಿಂಗ್‌ ವ್ಯವಸ್ಥೆ ಬಂದಿದೆ. ಈಗಾಗಲೇ ನಗರದ 15 ಕಡೆ ಡಾಕ್‌ ಸ್ಟೇಷನ್‌ಗಳಲ್ಲಿ ಸೈಕಲ್‌ ಬಂದಿದ್ದು, ಜನರಿಂದ ಉತ್ತಮ ಸ್ಪಂದನ ವ್ಯಕ್ತವಾಗಿದೆ.

ನಗರದ ಎಲ್ಲೆಡೆ ಜನರು ಸೈಕಲ್‌ ಮೂಲಕ ಓಡಾಡಬಹುದು. ಪೆಡಲ್‌ ತುಳಿಯಲು ಆಗದವರಿಗೆ ಎಲೆಕ್ಟ್ರಾನಿಕ್ ಬೈಸಿಕಲ್ ಇದೆ. ವಾಯುವಿಹಾರಕ್ಕೆ, ದೈನಂದಿನ ಕೆಲಸಗಳಿಗೆ, ಆರೋಗ್ಯವೃದ್ಧಿಯ ಭಾಗವಾಗಿಯೂ ಸೈಕಲ್‌ ಬಳಸಬಹುದು. ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ. ಈಗಾಗಲೇ 400ಕ್ಕೂ ಹೆಚ್ಚು ಜನ ಈ ವ್ಯವಸ್ಥೆಯಲ್ಲಿ ಪ್ರತಿದಿನ ಸೈಕಲ್‌ ಬಳಸುತ್ತಿರುವುದು ಗಮನಾರ್ಹ.

ನಗರದ 18 ಕಡೆ ಕಾಂಕ್ರೀಟ್ ಫ್ಲೋರ್ ಹಾಕಿದ ಬಸ್‌ ನಿಲ್ದಾಣದ ಮಾದರಿಯ ಡಾಕ್ ಸ್ಟೇಷನ್ (ಬೈಸಿಕಲ್‌ ನಿಲುಗಡೆಯ ಸ್ಥಳ)ಗಳು ಇವೆ. 20 ಸ್ಟೇಷನ್‌ಗಳ ನಿರ್ಮಾಣ ಗುರಿ ಇತ್ತು. ಸದ್ಯ 18 ಕಡೆ ನಿರ್ಮಾಣವಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಹಾಗೂ ಹಳೇ ಬಸ್‌ ನಿಲ್ದಾಣಗಳಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಬಳಿಕ ಡಾಕ್‌ ಸ್ಷೇಷನ್‌ ನಿರ್ಮಾಣವಾಗಲಿದೆ. ಈಗಾಗಲೇ 15 ಸ್ಥಳಗಳಲ್ಲಿ ಪೆಡಲ್‌ ತುಳಿಯುವ ಸೈಕಲ್‌ಗಳನ್ನು ಇಡಲಾಗಿದೆ.

ADVERTISEMENT

‘ಬೈಸಿಕಲ್‌ ಶೇರಿಂಗ್‌ಗೆ ಬೇಡಿಕೆ ಹೆಚ್ಚಾಗಿದೆ. 100 ಸೈಕಲ್‌ಗಳು ಬಂದಿವೆ. ಇ–ಬೈಸಿಕಲ್‌ಗಳು ಸಿಂಗಪುರದಿಂದ ಬರಬೇಕಿದೆ. ಕೆಲ ಮಾರ್ಗಸೂಚಿಗಳ ಕಾರಣ ತಡವಾಗಿದೆ. ಡಾಕ್‌ ಸ್ಷೇಷನ್‌ ನಿರ್ವಹಣೆ ಸಂಬಂಧ ₹ 9.09 ಕೋಟಿಗೆ 10 ವರ್ಷಗಳ ಅವಧಿಗೆ ಮುಂಬೈ ಕಂಪನಿ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ’ ಎಂದು ಸ್ಮಾರ್ಟ್‌ ಸಿಟಿವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಜನರಿಂದ ಉತ್ತಮ ಸ್ಪಂದನ ಇದೆ. ಈಗಾಗಲೇ 1500ಕ್ಕೂ ಅಧಿಕ ಜನ‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. 400ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸಿಕೊಂಡು ಪ್ರತಿದಿನ ಸೈಕಲ್‌ ಬಳಸುತ್ತಿದ್ದಾರೆ. ಬಿಐಇಟಿ ಕಾಲೇಜಿನಿಂದ ರೈಲ್ವೆ ನಿಲ್ದಾಣ ಹಾಗೂ ಜಿಎಂಐಟಿ ಕಾಲೇಜಿನಿಂದರೈಲ್ವೆ ನಿಲ್ದಾಣ ಮಾರ್ಗದಲ್ಲಿ ಹೆಚ್ಚು ಜನರು ಸೈಕಲ್‌ ಬಳಸುತ್ತಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು ಸ್ಮಾರ್ಟ್‌ ಸಿಟಿ ಕಿರಿಯ ಎಂಜಿನಿಯರ್‌ ಪ್ರಮೋದ್‌ ಪಿ.

‘50 ಎಲೆಕ್ಟ್ರಿಕ್‌ ಸೈಕಲ್‌ಗಳು‌ ಬಂದಿದ್ದು, ಇನ್ನೂ 50 ಬರಬೇಕಿದೆ. ಬಂದಿರುವ 50 ಇ–ಸೈಕಲ್‌ಗಳನ್ನು ಸರ್ವೀಸ್‌ಗೆ ಬಿಡಲಾಗಿದೆ. ಒಂದು ತಿಂಗಳಲ್ಲಿ ಅವು ಬಳಕೆಗೆ ಬರಲಿವೆ’ ಎಂದು ಅವರು ತಿಳಿಸಿದರು.

ಬೈಸಿಕಲ್‌ ಪಡೆಯುವುದು ಹೇಗೆ?: ಸೈಕಲ್‌ ಪಡೆಯಲು ಮೊದಲು ಪ್ಲೇ ಸ್ಟೋರ್‌ನಿಂದ ಕೂ ರೈಡ್ಸ್‌ (Coo Rides) ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ನಿಮ್ಮ ಹೆಸರು, ಕೆವೈಸಿ ಪೂರ್ಣಗೊಳಿಸಿ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಹತ್ತಿರದ ಡಾಕ್‌ ಸ್ಟೇಷನ್‌ಗೆ ಹೋಗಿ ಸೈಕಲ್‌ ಅನಲಾಕ್‌ ಮಾಡಿಕೊಳ್ಳಬೇಕು. ಗಂಟೆಗೆ ಅಥವಾ ನೀವು ಬಳಸಿದ ಅವಧಿಗೆ ಶುಲ್ಕ ಇರುತ್ತದೆ. ತಿಂಗಳು, ಮೂರು ತಿಂಗಳು ಹೀಗೆ ನಿಮ್ಮ ಆಯ್ಕೆಗೆ ಬೇಕಾದಂತೆ ಚಂದಾದಾರರಾಗುವ ಸೌಲಭ್ಯವೂ ಇದೆ. 30 ದಿನಕ್ಕೆ ₹ 100, 3 ತಿಂಗಳಿಗೆ ₹ 250 ಹೀಗೆ ಶುಲ್ಕ ಇದೆ. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಸೈಕಲ್‌ ಬಳಸಬಹುದು. ಇ–ಸೈಕಲ್‌ಗೆ ಪ್ರತ್ಯೇಕ ಶುಲ್ಕ ಇದೆ. ಬಳಸಿದ ಬಳಿಕ ನಿಮಗೆ ಹತ್ತಿರವಿರುವ ಡಾಕ್‌ ಸ್ಟೇಷನ್‌ನಲ್ಲಿ ಸೈಕಲ್‌ ಬಿಡಬಹುದು. ಇಲ್ಲಿಯೇ ಬಿಡಬೇಕು ಎಂಬ ನಿಯಮ ಇಲ್ಲ. ಆ್ಯಪ್‌ನಲ್ಲಿ ನಿಲ್ದಾಣಗಳ ಮಾಹಿತಿಯೂ ಇರಲಿದೆ.

ಎಲ್ಲೆಲ್ಲಿ ಡಾಕ್ ಸ್ಟೇಷನ್‌

ಬಾಪೂಜಿ ಎಂಜಿನಿಯರಿಂಗ್ ಕಾಲೇಜು, ಕಾಲೇಜಿನ ಹಿಂದಿನ ದ್ವಾರ, ನೂತನ್ ಕಾಲೇಜು, ವಿದ್ಯಾನಗರ, ಡಿ.ಆರ್.ಆರ್. ಪಾಲಿಟೆಕ್ನಿಕ್‌ ಕಾಲೇಜು, ಡಿ.ಆರ್‌.ಎಂ. ಕಾಲೇಜು, ಗುಂಡಿ ಸರ್ಕಲ್, ರೈಲ್ವೆ ನಿಲ್ದಾಣ, ಜಿಎಂಐಟಿ, ಜಿಲ್ಲಾಧಿಕಾರಿ ಕಚೇರಿ, ಬಿಎಸ್‌ಎನ್‌ಎಲ್ ಕಚೇರಿ, ಅಗ್ನಿಶಾಮಕ ಠಾಣೆ ಮುಂಭಾಗ, ಒಳಾಂಗಣ ಕ್ರೀಡಾಂಗಣ, ರಿಂಗ್ ರೋಡ್ (ಗಡಿಯಾರ ಸರ್ಕಲ್), ಲಕ್ಷ್ಮಿ ಫ್ಲೋರ್ ಮಿಲ್‌, ಜಯನಗರ, ಎಸ್‌.ಎಸ್. ಆಸ್ಪತ್ರೆ ಸೇರಿ 18 ಕಡೆ ಡಾಕ್‌ ಸ್ಟೇಷನ್‌ ನಿರ್ಮಾಣವಾಗಿವೆ.

***

ಬೈಸಿಕಲ್‌ ಶೇರಿಂಗ್‌ ವ್ಯವಸ್ಥೆಯ ಭಾಗವಾಗಿ ನಗರದಲ್ಲಿ 100 ಬೈಸಿಕಲ್‌ಗಳು ಬಂದಿವೆ. ಜನರಿಂದ ಉತ್ತಮ ಪ್ರತಿಕ್ರಿಯೆ ಇದೆ. ಮಾರ್ಚ್‌ ತಿಂಗಳ ಅಂತ್ಯಕ್ಕೆ ಇ– ಬೈಸಿಕಲ್‌ಗಳೂ ಲಭ್ಯವಾಗಲಿವೆ.

ರವೀಂದ್ರ ಮಲ್ಲಾ‍‍ಪುರ, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.