ADVERTISEMENT

‘ಗ್ರಾಮ ಒನ್’ಗೆ ಉತ್ತಮ ಸ್ಪಂದನ; ಸರ್ವರ್‌ನದ್ದೇ ಸಮಸ್ಯೆ

ವಿದ್ಯುತ್‌ ಸಮಸ್ಯೆ ಬಗೆಹರಿಸಲು ಜನರ ಒತ್ತಾಯ

ಚಂದ್ರಶೇಖರ ಆರ್‌.
Published 25 ಜುಲೈ 2022, 4:44 IST
Last Updated 25 ಜುಲೈ 2022, 4:44 IST
ದೊಡ್ಡಬಾತಿಯ ಗ್ರಾಮ ಒನ್‌ ಕೇಂದ್ರದಲ್ಲಿ ಅರ್ಜಿ ಹಾಕುತ್ತಿರುವ ಗ್ರಾಮಸ್ಥರು ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್‌
ದೊಡ್ಡಬಾತಿಯ ಗ್ರಾಮ ಒನ್‌ ಕೇಂದ್ರದಲ್ಲಿ ಅರ್ಜಿ ಹಾಕುತ್ತಿರುವ ಗ್ರಾಮಸ್ಥರು ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್‌   

ದಾವಣಗೆರೆ:ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ‘ಗ್ರಾಮ ಒನ್’ ಸೇವೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನ ಇದೆ. ಆದರೆ, ಸರ್ವರ್‌ ಸಮಸ್ಯೆ, ವಿದ್ಯುತ್‌ ಸಮಸ್ಯೆಯಿಂದ ಹೊಸದಾಗಿ ಆರಂಭವಾದ ಕೇಂದ್ರಗಳಲ್ಲಿ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ.

ರಾಜ್ಯದಲ್ಲಿಯೇ ಮೊದಲ ಬಾರಿ ‘ಗ್ರಾಮ ಒನ್’ ಸೇವೆಗೆ ದಾವಣಗೆರೆ ತಾಲ್ಲೂಕಿನ ಮಾಗಾನಹಳ್ಳಿಯಲ್ಲಿ 2020ರ ನವೆಂಬರ್‌ 19ರಂದು ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು.

‘ಒಂದು ಊರು, ಸೇವೆ ಹಲವಾರು’ ಎಂಬ ಘೋಷವಾಕ್ಯದೊಂದಿಗೆ ಹಲವು ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ನಂತರ ರಾಜ್ಯದಾದ್ಯಂತ ಗ್ರಾಮಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿದೆ. ಆಧಾರ್‌ ತಿದ್ದುಪಡಿ, ಪಹಣಿ, ಜಾತಿ ಮತ್ತು ಪ್ರಮಾಣಪತ್ರ ಸೇರಿ ಸುಮಾರು 570 ಸೇವೆಗಳು ಈ ಕೇಂದ್ರದ ವ್ಯಾಪ್ತಿಗೆ ಬರುತ್ತವೆ. 6,500 ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಎರಡು ಕೇಂದ್ರಗಳು ಹಾಗೂ ಅದಕ್ಕಿಂತ ಕಡಿಮೆ ಇರುವ ಗ್ರಾಮಗಳಲ್ಲಿ ಒಂದು ಕೇಂದ್ರ ತೆರೆಯುವ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಜಿಲ್ಲೆಯಲ್ಲಿ 230ಕ್ಕೂ ಹೆಚ್ಚು ಕೇಂದ್ರಗಳನ್ನು ತೆರೆಯುವ ಗುರಿ ಹೊಂದಲಾಗಿದೆ. ಈಗಾಗಲೇ 192 ಕೇಂದ್ರಗಳು ಕಾರ್ಯಾರಂಭ ಮಾಡಿದ್ದು, ಇನ್ನೂ 53 ಕೇಂದ್ರಗಳಿಗೆ ಆಪರೇಟರ್‌ಗಳಿಂದ ಅರ್ಜಿ ಸಲ್ಲಿಕೆಯಾಗಿದೆ. ವಾರದಲ್ಲಿ ಉಳಿದೆಡೆ ಕೇಂದ್ರಗಳನ್ನು ತೆರೆಯಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಈ ಮೊದಲು ಪ್ರಮಾಣಪತ್ರಕ್ಕಾಗಿ ನಾಡಕಚೇರಿಗೆ ಅಲೆಯಬೇಕಾಗಿತ್ತು. ಈಗ ಗ್ರಾಮದಲ್ಲೇ ಕೇಂದ್ರ ತೆರೆದಿರುವುದರಿಂದಅಲೆದಾಟ ತಪ್ಪಿದೆ ಎಂಬುದು ಗ್ರಾಮಸ್ಥರ ಮಾತು.

‘ಮೊದಲು ಪಹಣಿ ಸೇರಿ ಹಲವು ಕೆಲಸಗಳಿಗೆ ನಾಡಕಚೇರಿಗೆ ಹೋಗಬೇಕಿತ್ತು. ಈಗ ನಮ್ಮ ಗ್ರಾಮದಲ್ಲೇ ಸೌಲಭ್ಯ ಇರುವುದರಿಂದ ಅನುಕೂಲ ಆಗಿದೆ’ ಎಂದರು ಬಾತಿ ಗ್ರಾಮದ ಹನುಮಂತಪ್ಪ.

‘ಕೆಲವೊಮ್ಮೆ ಸರ್ವರ್‌, ಕರೆಂಟ್‌ ಸಮಸ್ಯೆ ಇದೆ ಎಂದು ಅರ್ಜಿ ಹಾಕಿಸಲು ತಡ ಮಾಡುತ್ತಾರೆ. ಇದರಿಂದ ಮತ್ತೆ ಕಾಯುವಂತಾಗುತ್ತದೆ. ನಮ್ಮ ಊರಿನಲ್ಲೇ ಇರುವುದರಿಂದ ಮತ್ತೆ ಬರುತ್ತೇವೆ’ ಎಂದು ಮುದಹದಡಿ ಗ್ರಾಮದ ರೈತ ಹಾಲೇಶಪ್ಪ ಹೇಳಿದರು.

‘ಸರ್ಕಾರದ ಹೆಚ್ಚಿನ ಸೇವಾ ಸೌಲಭ್ಯಗಳ ಜಾಲತಾಣಗಳು ಒಟ್ಟಿಗೆ ಕಾರ್ಯನಿರ್ವಹಿಸುವುದರಿಂದ ಕೆಲವೊಮ್ಮೆ ಸರ್ವರ್‌ ಸಮಸ್ಯೆ ಇರುತ್ತದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಸಮಸ್ಯೆ ಸಾಮಾನ್ಯ.ಅದಕ್ಕೆ ಯುಪಿಎಸ್‌ ಇದೆ’ ಎಂದರು ದೊಡ್ಡಬಾತಿಯ ‘ಗ್ರಾಮ ಒನ್’ ಕೇಂದ್ರದ ಆಪರೇಟರ್ ಗಣೇಶ್‌ ಕೆ.ಎಸ್‌.

‘ಮುಂದಿನ ವಾರದಿಂದ ಬ್ಯಾಂಕಿಂಗ್‌ ಸೇವೆಗಳನ್ನೂ ಇಲ್ಲಿ ಪಡೆಯಬಹುದು. ಜಿಲ್ಲೆಯ 18 ಲಕ್ಷ ಜನಸಂಖ್ಯೆಯಲ್ಲಿ ಈಗಾಗಲೇ ಅಂದಾಜು 5.5 ಲಕ್ಷ ಜನ ಈ ಕೇಂದ್ರಗಳಿಂದ ಸೌಲಭ್ಯ ಪಡೆದಿದ್ದಾರೆ. ಸೇವೆ ಪಡೆದ ಜನರಿಗೆ ವಾರಕ್ಕೊಮ್ಮೆ ಕರೆ ಮಾಡಿ ಸೌಲಭ್ಯ ಪಡೆಯುವಾಗ ಸಮಸ್ಯೆಯಾಗಿದೆಯೇ ಎಂಬ ಬಗ್ಗೆ ವಿಚಾರಿಸಿದ್ದೇವೆ. ಹೆಚ್ಚುವರಿ ಶುಲ್ಕ ಸೇರಿ ಯಾವುದೇ ರೀತಿಯ ದೂರು ಬಂದರೆತಕ್ಷಣವೇ ಆಪರೇಟರ್‌ಗಳನ್ನು ವಜಾ ಮಾಡಿ, ಬೇರೆಯವರಿಗೆ ಅವಕಾಶ ನೀಡುತ್ತೇವೆ’ ಎಂದು ‘ಗ್ರಾಮ ಒನ್‌’ ಕೇಂದ್ರಗಳ ಜಿಲ್ಲಾ ಸಂಚಾಲಕ ಕೆ.ಆರ್‌. ಶಾಂತರಾಜು ಹೇಳಿದರು.

ಸರ್ವರ್‌ ಸಮಸ್ಯೆ: ಸರಿಪಡಿಸಲು ಕ್ರಮ
‘ಗ್ರಾಮ ಒನ್‌’ ಸೇವೆಗಳು ಒಂದೇ ‘ಸ್ಟೇಟ್‌ ಡಾಟಾ ಸೆಂಟರ್‌’ಗೆ ಸಂಪರ್ಕ ಹೊಂದಿರುವುದರಿಂದ ಸಮಸ್ಯೆ ಸಾಮಾನ್ಯ. ಅರ್ಜಿ ಹಾಕಿದ ಬಳಿಕ ಸರ್ವರ್‌ ನಿಂತರೆ ಅರ್ಜಿಯ ವಿವರಗಳನ್ನು ಮುಖ್ಯ ಸರ್ವರ್‌ನಲ್ಲಿ ಸೇವ್‌ ಮಾಡುವ ವ್ಯವಸ್ಥೆ ಇದೆ ಎಂದು ‘ಗ್ರಾಮ ಒನ್‌’ ಕೇಂದ್ರಗಳ ಸಂಚಾಲಕರು ತಿಳಿಸಿದರು.

ಬೇರೆ ಯಾವುದೇ ಸೇವೆಗಳಲ್ಲಿ ಲಭ್ಯವಿರದ ‘ಡಿ.ಜಿ. ಲಾಕರ್‌’ ಸೌಲಭ್ಯ ಇಲ್ಲಿದೆ. ಅರ್ಜಿ ಹಾಕುವುದಕ್ಕಾಗಿಯೇ ಜನರು ಪದೇಪದೇ ಕೇಂದ್ರಗಳಿಗೆ ಅಲೆಯಬೇಕಿಲ್ಲ. ಒಮ್ಮೆ ಅರ್ಜಿಯ ಮಾಹಿತಿ ಸೇವ್‌ ಆದರೆ ಅದನ್ನು ಯಾವಾಗ ಬೇಕಾದರೂ ಮುಂದಿನ ಸ್ಥಿತಿಗೆ ಕಳುಹಿಸಬಹುದು. ಎರಡೆರಡು ನೆಟ್‌ ಸಂಪರ್ಕ ಸೇರಿ ಪರ್ಯಾಯ ವ್ಯವಸ್ಥೆಯ ಮೂಲಕ ತಕ್ಷಣವೇ ಜನರಿಗೆ ಸೇವೆ ನೀಡಲು ಕ್ರಮ ವಹಿಸಲಾಗಿದೆ ಎಂದು ಅವರು ವಿವರಿಸಿದರು.

ತಪ್ಪಿದ ಅಲೆದಾಟ
–ಎನ್.ಕೆ. ಆಂಜನೇಯ
ಹೊನ್ನಾಳಿ:
ಸರ್ಕಾರದ ಸೌಲಭ್ಯಗಳ ಸೇವೆ ಪಡೆಯಲು ಈ ಮೊದಲು ಹೊನ್ನಾಳಿತಾಲ್ಲೂಕು ಕಚೇರಿ ಮತ್ತು ನಾಡಕಚೇರಿಗೆ ಬರಬೇಕಾಗಿತ್ತು. ಈಗ ಗ್ರಾಮ ಪಂಚಾಯಿತಿಯಲ್ಲಿಯೇಕೇಂದ್ರಗಳನ್ನು ಪ್ರಾರಂಭಿಸಿದ್ದರಿಂದ ಜನರು ಅಲೆಯುವುದು ತಪ್ಪಿದೆ.

ಕೆಲವೆಡೆ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಶುಲ್ಕ ಪಡೆಯುತ್ತಿರುವ ಆರೋಪಗಳಿವೆ. ಮತ್ತೆ ಕೆಲವೆಡೆ ಆಸನಗಳ ವ್ಯವಸ್ಥೆ ಕಲ್ಪಿಸಿಲ್ಲ. ಕೆಲವೆಡೆ ಬೆಳಿಗ್ಗೆ 10ರ ನಂತರ ಮತ್ತು ಸಂಜೆ 5ರೊಳಗೆ ಕೇಂದ್ರಕ್ಕೆ ಬೀಗ ಹಾಕುತ್ತಾರೆ. ಸೇವೆಯ ದರಪಟ್ಟಿ ಹಾಕಿಲ್ಲಎಂದು ಆಂಜನೇಯಸ್ವಾಮಿ ದೂರಿದರು.

‘ಮೊದಲು ಬೆಳೆ ವಿಮೆ ಕಟ್ಟಲು ಹೊನ್ನಾಳಿಗೆ ಹೋಗಬೇಕಾಗಿತ್ತು. ಈಗ ಇಲ್ಲೇ ಕಟ್ಟುತ್ತಿದ್ದೇವೆ’ ಎನ್ನುತ್ತಾರೆ ದೇವರಹೊನ್ನಾಳಿಯ ರೈತ ಗದ್ದಿಗೇಶಪ್ಪ.

ಹೆಚ್ಚಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಹಣಿ ಪಡೆಯಲು ತಾಲ್ಲೂಕು ಕೇಂದ್ರಕ್ಕೆ ಜನರು ಬರುತ್ತಿದ್ದರು. ಈಗ ಇಲ್ಲೇ ಪಡೆಯುತ್ತಿದ್ದಾರೆ ಎನ್ನುತ್ತಾರೆತಾಲ್ಲೂಕಿನ ಮಾಸಡಿ ಗ್ರಾಮದ‘ಗ್ರಾಮ ಒನ್’ ಕೇಂದ್ರದ ಆಪರೇಟರ್‌ ಶ್ರೀಕಾಂತ್.

ಯಾವುದೇ ನೆಟ್‌ವರ್ಕ್ ಸಮಸ್ಯೆ, ತಾಂತ್ರಿಕ ದೋಷ ಇಲ್ಲ. ಸುಗಮವಾಗಿ ಕೇಂದ್ರಗಳು ನಡೆಯುತ್ತಿವೆ ಎಂದು ತಹಶೀಲ್ದಾರ್
ಎಚ್.ಜೆ. ರಶ್ಮಿ ಹೇಳಿದರು.

ಹೆಚ್ಚಿದ ನೆಟ್‌ವರ್ಕ್ ಸಮಸ್ಯೆ
–ಎಚ್.ವಿ. ನಟರಾಜ್
ಚನ್ನಗಿರಿ:
ಜಿಲ್ಲೆಯ ಎರಡನೇ ದೊಡ್ಡ ತಾಲ್ಲೂಕಾದ ಚನ್ನಗಿರಿಯಲ್ಲಿ 55 ಗ್ರಾಮ ಒನ್ ಕೇಂದ್ರಗಳಿವೆ.

ಹಿಂದೆಲ್ಲಾ ಸರ್ಕಾರದ ವಿವಿಧ ಯೋಜನೆಗಳ ಸೇವೆ ಪಡೆಯಲು ಜನರು ನೆಮ್ಮದಿ ಕೇಂದ್ರ ಹಾಗೂ ನಾಡ ಕಚೇರಿಗಳಿಗೆ ಹೋಗಿ ಸರದಿ ಸಾಲಿನಲ್ಲಿ ನಿಲ್ಲಬೇಕಿತ್ತು. ಅದೂ ಕೆಲ ಗ್ರಾಮಗಳಲ್ಲಿ ಮಾತ್ರ ನಾಡ ಕಚೇರಿಗಳಿದ್ದವು. ಈಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಗ್ರಾಮ ಒನ್’ ಇರುವುದರಿಂದ ಅಲೆದಾಟ ತಪ್ಪಿದೆ. ಆದರೆ ನೆಟ್‌ವರ್ಕ್‌ ಸಮಸ್ಯೆ ಹೆಚ್ಚಿದೆ.

ಹಿಂದೆ ನೆಮ್ಮದಿ ಕೇಂದ್ರಗಳಲ್ಲೂ ಸರ್ವರ್ ಸಮಸ್ಯೆ ಪ್ರಮುಖವಾಗಿತ್ತು. ಈಗಲೂ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಜನರು ‘ಗ್ರಾಮ ಒನ್‌’ ‌ಕೇಂದ್ರಗಳ ಮುಂದೆ ಕಾಯಬೇಕಾಗಿದೆ.

ಆದರೆ, ಗ್ರಾಮದಲ್ಲೇ ಕೇಂದ್ರಗಳನ್ನು ತೆರೆದಿರುವುದರಿಂದ ಯಾವಾಗ ಬೇಕಾದರೂ ಹೋಗಿ ಸೇವೆಗಳನ್ನು ಪಡೆದುಕೊಳ್ಳಬಹುದು. ಕೇಂದ್ರಗಳಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿದರೆ ಅನುಕೂಲ ‌ಎನ್ನುತ್ತಾರೆ ಅರಳಿಕಟ್ಟೆ ಗ್ರಾಮದ ಸಂತೋಷ್.

ಆಪರೇಟರ್‌ ಸ್ನೇಹಿಯಾಗಲಿ
ಇನಾಯತ್‌ ಉ‌ಲ್ಲಾ ಟಿ.

ಹರಿಹರ: ‘ಗ್ರಾಮ ಒನ್’ ಕೇಂದ್ರಗಳಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲಕರವಾಗಿದೆ.

ಆದರೆ ಕೇಂದ್ರದ ಆಪರೇಟರ್‌ಗಳಿಗೆ ಅನಾನುಕೂಲ ಇದೆ. ಇ-ಸ್ಟ್ಯಾಂಪ್‌ ಪೇಪರ್ ಕೊಡಬೇಕೆಂದರೆ ಆಪರೇಟರ್‌ಗಳು ₹ 35,000 ಪಾವತಿಸಿ ಗುಣಮಟ್ಟದ ಪ್ರಿಂಟರ್ ಹೊಂದಿರಬೇಕಿದೆ. ಆದರೆ, ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.ಉಪಕರಣಗಳ ಖರೀದಿಗೆ ಆಪರೇಟರ್‌ಗಳಿಗೆ ಸಾಲ ಸೌಲಭ್ಯ ನೀಡಿದರೆ ಅನುಕೂಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆಪರೇಟರ್‌ ಒಬ್ಬರು ಹೇಳಿದರು.

‘ನಮ್ಮ ಕಾಲದಲ್ಲಿ ಹಳ್ಳಿಯಿಂದ ತಾಲ್ಲೂಕು ಕೇಂದ್ರಕ್ಕೆ ಬಂದು ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯುತ್ತಿದ್ದೆವು. ಅದಕ್ಕಾಗಿ ಗ್ರಾಮಸ್ಥರಿಗೆ ಒಂದು ದಿನದ ದುಡಿಮೆ ತಪ್ಪುತ್ತಿತ್ತು. ಈಗ ಅನುಕೂಲವಾಗಿದೆ. ತಾಂತ್ರಿಕ ತೊಂದರೆ ಕಂಡುಬಂದರೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ಬಗೆಹರಿಸುತ್ತಾರೆ’ ಎನ್ನುತ್ತಾರೆ ತಹಶೀಲ್ದಾರ್ ಡಾ.ಎಂ.ಬಿ. ಅಶ್ವತ್ಥ.

‘ಕೆಲವೊಮ್ಮೆ ಸರ್ವರ್‌ ಸಮಸ್ಯೆ ಎದುರಾದಾಗ ಅರ್ಜಿ ಹಾಕಲು ಬಂದವರು ನಮ್ಮ ಮೇಲೆ ರೇಗಾಡುತ್ತಾರೆ. ಒಂದು ಗಂಟೆಯೊಳಗೆ ಜಿಲ್ಲಾ ಕೇಂದ್ರದ ತಾಂತ್ರಿಕ ತಜ್ಞರು ಸರಿಪಡಿಸುತ್ತಾರೆ’ ಎನ್ನುತ್ತಾರೆ ಭಾನುವಳ್ಳಿ ಕೇಂದ್ರದ ಆಪರೇಟರ್‌ ಕೆಂಚಪ್ಪ.

ಈ ಮುಂಚೆ ಸರ್ಕಾರದ ಸೌಲಭ್ಯಕ್ಕೆ ಅರ್ಜಿ ಹಾಕಲು ದೂರದ ಹರಿಹರಕ್ಕೆ ಹೋಗಬೇಕಿತ್ತು. ಈಗ ಇಲ್ಲೇ ಎಲ್ಲ ಸೌಲಭ್ಯ ಸಿಗುತ್ತಿವೆ ಎನ್ನುತ್ತಾರೆ ಭಾನುವಳ್ಳಿಯ ರೈತ ಸಂಘ ಮುಖಂಡ ಎನ್. ಪ್ರಕಾಶ್.

**

ಜನರಿಂದ ಉತ್ತಮ ಪ್ರತಿಕ್ರಿಯೆ ಇದೆ. ಪ್ರತಿದಿನ 30ರಿಂದ 50 ಜನ ಬರುತ್ತಾರೆ. ಹೆಚ್ಚಿನ ಜನರು ಆದಾಯ ಮತ್ತು ಜಾತಿ ಪ್ರಮಾಣಪತ್ರ, ಆಧಾರ್‌ ಕಾರ್ಡ್‌ ತಿದ್ದುಪಡಿಗಾಗಿಯೇ ಬರುತ್ತಾರೆ.
ಗಣೇಶ್‌ ಕೆ.ಎಸ್‌., ಗ್ರಾಮ ಒನ್ ಕೇಂದ್ರದ ಆಪರೇಟರ್, ದೊಡ್ಡಬಾತಿ

**

ಗ್ರಾಮದಲ್ಲೇ ಕೇಂದ್ರ ತೆರೆದಿರುವುದರಿಂದ ಅನುಕೂಲವಾಗಿದೆ. ಮೊದಲು ಒಂದು ಅರ್ಜಿ ಹಾಕಲು ಪದೇ ಪದೇ ನಾಡಕಚೇರಿಗೆ ಹೋಗಬೇಕಿತ್ತು. ಈಗ ಎಲ್ಲ ಸೇವೆ ಇಲ್ಲಿ ಸಿಗುತ್ತಿರುವುದು ಪ್ರಯೋಜನವಾಗಿದೆ.
ವೀರೇಶಪ್ಪ, ದೊಡ್ಡಬಾತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.