ಚನ್ನಗಿರಿ: ಶತಮಾನ ಪೂರೈಸಿರುವ ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ತಾಲ್ಲೂಕಿನಲ್ಲಿಯೇ ಅತ್ಯಂತ ಹಳೇ ಶಾಲೆ. ಆದರೆ, ಪ್ರಸ್ತುತದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯ ವರ್ಷದಿಂದ ವರ್ಷಕ್ಕೆ ಕುಸಿದತ್ತ ಸಾಗಿದೆ.
1865ರಲ್ಲಿ ಪ್ರಾರಂಭವಾಗಿರುವ ಈ ಶಾಲೆ 157 ವಸಂತಗಳನ್ನು ಪೂರೈಸಿದ್ದು, ಸಾಮಾನ್ಯವಾಗಿ 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಿದ ದಾಖಲೆ ಇದೆ. ಆದರೆ ಈಗ 1ರಿಂದ 7ನೇ ತರಗತಿಯವರೆಗೆ ಕೇವಲ 48 ವಿದ್ಯಾರ್ಥಿಗಳಿದ್ದಾರೆ. ಪಟ್ಟಣದ ಬಹುತೇಕರು ಈ ಶಾಲೆಯಲ್ಲಿ ಓದಿ, ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈದ್ಯ ದಿ.ಡಾ.ಎ. ಬಸವಣ್ಣಯ್ಯ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಉಪಾಧ್ಯ, ಲಕ್ಷ್ಮೀನಾರಾಯಣ, ಕೃಷ್ಣಮೂರ್ತಿ, ಸಿ.ಕೆ.ಎಚ್. ಮಹೇಶ್ವರಪ್ಪ, ಹಿರಿಯ ಪತ್ರಕರ್ತರಾದ ದಿ.ಬುಳ್ಳಿ ಕರಿಯಪ್ಪ, ಬಾ.ರಾ. ಮಹೇಶ್, ಕನ್ನಡಪರ ಹೋರಾಟಗಾರ ಬುಳ್ಳಿ ನಾಗರಾಜ್ ಸೇರಿ ಸಾವಿರಾರು ಜನರಿಗೆ ವಿದ್ಯಾದಾನ ಮಾಡಿದ ಕೀರ್ತಿ ಶಾಲೆಗೆ ಇದೆ.
ಶಾಲೆಯಲ್ಲಿ ಒಟ್ಟು 11 ಕೊಠಡಿಗಳಿವೆ. 2010ರಲ್ಲಿ ಲಯನ್ಸ್ ಕ್ಲಬ್ ಸಹಕಾರದಲ್ಲಿ ಶೌಚಾಲಯ ಹಾಗೂ ವಿಶಾಲವಾದ ಕೊಠಡಿ ನಿರ್ಮಿಸಲಾಗಿದೆ. ಕೊಠಡಿಗಳ ಕೊರತೆ ಇಲ್ಲ. ಆದರೆ, ಕಟ್ಟಡವು ಹಳೆಯದಾಗಿರುವುದರಿಂದ ಮಳೆಗಾಲದಲ್ಲಿ ಸೋರುತ್ತದೆ. ಈ ಹಳೆಯ ಕಟ್ಟಡವನ್ನು ದುರಸ್ತಿಗೊಳಿಸಬೇಕಿದೆ. ಶತಮಾನ ಕಂಡ ಶಾಲೆಗಳ ಅಭಿವೃದ್ಧಿ ಯೋಜನೆ ರೂಪಿಸಿ ದುರಸ್ತಿ ಕೈಗೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷೆ ಕುತ್ ಹೀ ಜಲ್ ಖುಬ್ರಾ ಮನವಿ ಮಾಡಿದ್ದಾರೆ.
‘1ರಿಂದ 7ನೇ ತರಗತಿವರೆಗೆ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ. ನನಗೀಗ 70 ವರ್ಷ. ಶಾಲೆಯ ಬಗ್ಗೆ ಹೆಮ್ಮೆ ಇದೆ. ಕಾಲ ಕ್ರಮೇಣ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕುಸಿದಿದೆ. ತಾಲ್ಲೂಕಿಲ್ಲಿ ಆರಂಭವಾಗಿರುವ ಮೊದಲ ಸರ್ಕಾರಿ ಶಾಲೆ ಇದಾಗಿದ್ದು, ಶಾಲೆಯ ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ಇಲಾಖೆ ಅಥವಾ ಜನಪ್ರತಿನಿಧಿಗಳು ಮಂಜೂರು ಮಾಡಿಸಲು ಕ್ರಮ ವಹಿಸಬೇಕು’ ಎಂದು ಹಳೆಯ ವಿದ್ಯಾರ್ಥಿ ಸಿ.ಕೆ.ಎಚ್. ಮಹೇಶ್ವರಪ್ಪ ತಿಳಿಸಿದ್ದಾರೆ.
‘ಪಾಲಕರ ಖಾಸಗಿ ಶಾಲೆಗಳ ವ್ಯಾಮೋಹದಿಂದಾಗ ಈಗ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಶಾಲೆಯನ್ನು ಅಭಿವೃದ್ಧಿಪಡಿಸಿ, ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿದರೆ ದಾಖಲಾತಿ ಹೆಚ್ಚಲು ಅನುಕೂಲವಾಗಲಿದೆ’ ಎಂದು ಮುಖ್ಯಶಿಕ್ಷಕಿ ಜಿ.ಕೆ. ಶೋಭಾ ಅಭಿಪ್ರಾಯಪಟ್ಟರು.
*
ಪ್ರಸಕ್ತ ಸಾಲಿನಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ತಾಲ್ಲೂಕಿಗೆ ₹ 18 ಕೋಟಿ ಅನುದಾನ ಬಿಡುಗಡೆಯಾಗಿದೆ. ಶಿಥಿಲಗೊಂಡಿರುವ ಶಾಲೆಗಳನ್ನು ಗುರುತಿಸಿ ಹೊಸ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
–ಕೆ. ಮಂಜುನಾಥ್, ಬಿಇಒ, ಚನ್ನಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.