ಹರಿಹರ: ಮೇ 31ರಿಂದ 1ರಿಂದ 10ನೇ ತರಗತಿಯ ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಎಲ್ಲಾ ಶಾಲೆಗಳನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸೂಚಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹನುಮಂತಪ್ಪ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ 53 ಸರ್ಕಾರಿ ಕಿರಿಯ, 81 ಸರ್ಕಾರಿ ಹಿರಿಯ ಪ್ರಾಥಮಿಕ, 19 ಸರ್ಕಾರಿ ಪ್ರೌಢಶಾಲೆಗಳು, ತಲಾ 25 ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ, 20 ಅನುದಾನ ರಹಿತ ಕಿರಿಯ ಪ್ರಾಥಮಿಕ, 42 ಅನುದಾನ ರಹಿತ ಹಿರಿಯ ಪ್ರಾಥಮಿಕ ಹಾಗೂ 20 ಅನುದಾನ ರಹಿತ ಪ್ರೌಢಶಾಲೆಗಳು ಸೇರಿ ಒಟ್ಟು 285 ಶಾಲೆಗಳಿವೆ ಎಂದರು.
ಶಾಲಾ ಆವರಣ, ಕೊಠಡಿಗಳು, ಅಕ್ಷರ ದಾಸೋಹದ ಕೊಠಡಿಗಳ ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಸಿಂಗರಿಸಿ, ವಿದ್ಯಾರ್ಥಿಗಳಿಗೆ ಹೂ ನೀಡಿ, ಸಿಹಿ ಹಂಚುವ ಮೂಲಕ ಸ್ವಾಗತಿಸುವಂತೆ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಸಭೆಯಲ್ಲಿ ಸೂಚಿಸಲಾಗಿದೆ ಎಂದರು.
ಜೂನ್ ಮೊದಲ ವಾರದಲ್ಲಿ ಎಲ್ಲ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಶೇಷ ದಾಖಲಾತಿ ಆಂದೋಲನ, ಜಾಥಾ, ಪ್ರಭಾತ್‌ಪೇರಿ, ಮನೆ ಮನೆ ಭೇಟಿ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಅರ್ಹ ವಯಸ್ಸಿನ ಎಲ್ಲಾ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಉಚಿತ ಪಠ್ಯ ಪುಸ್ತಕ ಹಾಗೂ ಸಮವಸ್ತ್ರಗಳನ್ನು ಮಕ್ಕಳಿಗೆ ಶಾಲಾ ಪ್ರಾರಂಭದ ದಿನದಂದೇ ಎಸ್‌ಡಿಎಂಸಿ ಸದಸ್ಯರು ಮತ್ತು ಪಾಲಕರ ಸಮ್ಮುಖದಲ್ಲಿ ವಿತರಣೆ ಮಾಡಿ ಶಾಲಾ ಶೈಕ್ಷಣಿಕ ಚಟುವಟಿಕೆಗಳಾದ ಸೇತುಬಂಧ ಶಿಕ್ಷಣ ಮತ್ತು ವಿದ್ಯಾ ಪ್ರವೇಶ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.