ADVERTISEMENT

ಹರಿಹರ: ನೂತನ ಸೇತುವೆಗೆ ಅನುದಾನ ಬಿಡುಗಡೆಗೆ ಮೀನಮೇಷ

ಬೆಳ್ಳೂಡಿ-ರಾಮತೀರ್ಥ ಸೇತುವೆ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 7:15 IST
Last Updated 24 ಅಕ್ಟೋಬರ್ 2024, 7:15 IST
ಹರಿಹರ ತಾಲ್ಲೂಕಿನ ಹತ್ತಾರು ಗ್ರಾಮಗಳ ಸಂಪರ್ಕ ಕೊಂಡಿಯಾದ ಬೆಳ್ಳೂಡಿ-ರಾಮತೀರ್ಥ ನಡುವಿನ ಹಳ್ಳದ ಸೇತುವೆಯು ಪ್ರವಾಹದಿಂದಾಗಿ 2 ವರ್ಷಗಳ ಹಿಂದೆ ಕೊಚ್ಚಿ ಹೋಗಿರುವುದು
ಹರಿಹರ ತಾಲ್ಲೂಕಿನ ಹತ್ತಾರು ಗ್ರಾಮಗಳ ಸಂಪರ್ಕ ಕೊಂಡಿಯಾದ ಬೆಳ್ಳೂಡಿ-ರಾಮತೀರ್ಥ ನಡುವಿನ ಹಳ್ಳದ ಸೇತುವೆಯು ಪ್ರವಾಹದಿಂದಾಗಿ 2 ವರ್ಷಗಳ ಹಿಂದೆ ಕೊಚ್ಚಿ ಹೋಗಿರುವುದು    

ಹರಿಹರ: ತಾಲ್ಲೂಕಿನ ಬೆಳ್ಳೂಡಿ-ರಾಮತೀರ್ಥ ನಡುವಿನ ಡಿ.ಬಿ.ಕೆರೆ ಹಳ್ಳ (ಸೂಳೆಕೆರೆ ಹಳ್ಳ)ದ ಸೇತುವೆಯ ಒಂದು ಬದಿಯ ಮಣ್ಣಿನ ದಿಣ್ಣೆ ಪ್ರವಾಹದ ನೀರಲ್ಲಿ ಹರಿದು ಹೋಗಿ 2.4 ವರ್ಷಗಳಾಗಿದ್ದು, ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಕಾರಣ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಈ ಹಿಂದೆ ಹರಿದ್ರಾವತಿ ನದಿಯಾಗಿದ್ದು, ಈಗ ಹಳ್ಳವೆಂದು ಕರೆಯಲಾಗುವ ಈ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ಚೆಕ್ ಡ್ಯಾಂ ಕಂ ಬಿಡ್ಜ್ ನಿರ್ಮಿಸಿ, ನಿರ್ವಹಣೆಯನ್ನು ಪಂಚಾಯತ್ ರಾಜ್ (ಪಿಆರ್‌ಇ) ಇಲಾಖೆಗೆ ವಹಿಸಲಾಗಿದೆ.

ದೇವರಬೆಳೆಕೆರೆ ಪಿಕ್‌ಅಪ್‌ ಹಾಗೂ ಸಾವಿರಾರು ಎಕರೆ ಜಮೀನುಗಳ ಬಸಿ ನೀರು ಹಾಗೂ ಮಳೆ ನೀರು ಈ ಹಳ್ಳಕ್ಕೆ ಹರಿಯುತ್ತದೆ. ಪಿಕ್‌ಅಪ್‌ನಿಂದ ಏಳೆಂಟು ಕಿ.ಮೀ. ಉದ್ದಕ್ಕೆ ಹರಿಯುವ ಈ ಹಳ್ಳ ಹರಿಹರ ಸಮೀಪದ ತುಂಗಭದ್ರಾ ನದಿಗೆ ಸೇರುತ್ತದೆ.

ADVERTISEMENT

2022ರ ಜೂನ್ ತಿಂಗಳಲ್ಲಿ ಮಳೆಯಿಂದಾಗಿ ಉಂಟಾದ ಪ್ರವಾಹದದಲ್ಲಿ ಸೇತುವೆಯ ಬೆಳ್ಳೂಡಿ ಭಾಗದಲ್ಲಿ ಮಣ್ಣು ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿತು. ಕೆಲವು ವರ್ಷಗಳ ಹಿಂದೆ ಮತ್ತೆ ಮಣ್ಣು ಕೊಚ್ಚಿ ಹೋದಾಗ ಮತ್ತೊಮ್ಮೆ ಮಣ್ಣು ಹಾಕಿಸಿ ಸಂಪರ್ಕ ಜೋಡಿಸಲಾಗಿತ್ತು. ಮಳೆಗಾಲದಲ್ಲಿ ನೀರಿನ ಮೂಲಕ ಹರಿದು ಬರುವ ಮರದ ಟೊಂಗೆ, ರೆಂಬೆ, ದಿಮ್ಮಿಗಳು ಸೇತುವೆಯ ಕಣ್ಣುಗಳಿಗೆ ಅಡ್ಡಲಾಗಿ ನಿಂತು ನೀರು ಹರಿದು ಹೋಗಲು ಜಾಗವಿಲ್ಲದೇ ಸೇತುವೆ ಬದಿಯ ಮಣ್ಣು ಕೊರಕಲಾಗಿ ಈ ಸಮಸ್ಯೆ ಎದುರಾಗಿದೆ.

ತಾಲ್ಲೂಕಿನ ರಾಮತೀರ್ಥ, ನಾಗೇನಹಳ್ಳಿ, ಭಾನುವಳ್ಳಿ, ಲಕ್ಕಶೆಟ್ಟಿಹಳ್ಳಿ, ಯಲವಟ್ಟಿ, ಸಿರಿಗೆರೆ, ಕಮಲಾಪುರ, ಎರೆಹೊಸಳ್ಳಿ, ನಂದಿಗಾವಿ, ಧೂಳೆಹೊಳೆ, ಎಳೆಹೊಳೆ, ಹುಲಗಿನಹೊಳೆ, ಮಳಲಹಳ್ಳಿ, ನಂದಿಗಾವಿ ಹಾಗೂ ಇತರೆ ಗ್ರಾಮಗಳ ಜನರು, ರೈತರು, ವಿದ್ಯಾರ್ಥಿಗಳಿಗೆ ಹರಿಹರ-ದಾವಣಗೆರೆಗೆ ಬಂದು ಹೋಗಲು ಈ ಸೇತುವೆ ರಸ್ತೆ ಹತ್ತಿರದ ದಾರಿಯಾಗಿದೆ. ಸುತ್ತು, ಬಳಸಿ ಸಂಚರಿಸುವುದು ಒಂದು ತೊಂದರೆಯಾದರೆ, ಸದಾ ಭಾರಿ ವಾಹನಗಳ ಸಂಚಾರ ದಟ್ಟಣೆ ಇರುವ ಹೆದ್ದಾರಿಯಲ್ಲಿ ಆಟೊ, ಬೈಕ್‌ಗಳಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಬೇಕು ಎಂದು ಈ ಭಾಗದ ಜನರು ಒತ್ತಾಯಿಸಿದ್ದಾರೆ.

ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಇಲಾಖೆ ಸಚಿವರು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಉಪಯೋಗವಾಗಿಲ್ಲ.
ಬಿ.ಪಿ.ಹರೀಶ್ ಶಾಸಕ 
ಹರಿಹರ ದಾವಣಗೆರೆಗೆ ಬಂದು ಹೋಗಲು ಬೆಳ್ಳೂಡಿ ಹಳ್ಳದ ಸೇತುವೆ ರಸ್ತೆ ಅತ್ಯಗತ್ಯ. ಜನಪ್ರತಿನಿಧಿಗಳ ಜೊತೆಗೆ ಮಠಾಧೀಶರೂ ಸರ್ಕಾರದ ಮೇಲೆ ಒತ್ತಡ ಹಾಕಬೇಕು.
ಬೆಳ್ಳೂಡಿ ಬಸವರಾಜ್ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ 
ವಿಶಾಲ ಹಾಗೂ ಪ್ರವಾಹದ ಒತ್ತಡ ತಡೆಯುವ ಹೊಸ ಸೇತುವೆ ನಿರ್ಮಾಣಕ್ಕೆ ತಜ್ಞರಿಂದ ಸಮೀಕ್ಷೆ ನಡೆಸಿ ₹ 5 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಸಿಕ್ಕ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು.
ಹನುಮಂತಪ್ಪ ಎಇ ಪಿಆರ್‌ಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.