ದಾವಣಗೆರೆ: ತಾಲ್ಲೂಕಿನ ಗೋಪನಾಳ್ ಗ್ರಾಮದಲ್ಲಿ ಬೂದುಗುಂಬಳ ಬೆಳೆದ ರೈತರೊಬ್ಬರು ಉತ್ತಮ ಬೆಲೆ ಸಿಗದೇ ಇರುವುದರಿಂದ ಮಾರುಕಟ್ಟೆಗೆ ಒಯ್ಯದೇ ಬೆಳೆ ನಾಶಪಡಿಸಲು ಮುಂದಾಗಿದ್ದಾರೆ.
ರೈತ ರವಿಶಂಕರ್ ಮೂರೂವರೆ ಎಕರೆ ಜಮೀನಿನಲ್ಲಿ ಬೂದುಗುಂಬಳ ಬೆಳೆದಿದ್ದಾರೆ. ಭರಪೂರ ಬೆಳೆಯೇನೋ ಬಂದಿದೆ. ದಾವಣಗೆರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ ₹ 2ರಿಂದ ₹ 3 ಬೆಲೆ ಇದೆ. ಮಾರುಕಟ್ಟೆಗೆ ಒಯ್ದು ಮಾರಾಟ ಮಾಡಿದರೆ ಕೂಲಿ ಹಣವೂ ಸಿಗದಿರುವುದರಿಂದ ದಿಕ್ಕು ತೋಚದಂತಾಗಿದ್ದಾರೆ.
ಕೊರೊನಾ ಎರಡನೇ ಅಲೆ ಕಾರಣ ಮದುವೆ ಕಾರ್ಯಗಳಿಗೆ ನಿರ್ಬಂಧ ಹೇರಲಾಗಿದೆ. ಹಾಸ್ಟೆಲ್‌ಗಳೂ ಮುಚ್ಚಿವೆ. ಈ ಕಾರಣದಿಂದಾಗಿ ಬೇಡಿಕೆ ಇಲ್ಲದಂತಾಗಿದೆ. ಸದ್ಯ, ಏಳು ಟನ್ ಕುಂಬಳವನ್ನು ಕೊಯ್ಲುಮಾಡಲಾಗಿದೆ.
‘ಬೆಳೆಗೆ ರಸಗೊಬ್ಬರ, ಔಷಧ ಹಾಗೂ ಕೂಲಿಗಾಗಿ ₹ 60 ಸಾವಿರ ಖರ್ಚಾಗಿದೆ. ಕೆ.ಜಿ.ಗೆ ₹ 3ರಂತೆಏಳು ಟನ್ ಮಾರಾಟವಾದರೂ ಕೇವಲ ₹ 21 ಸಾವಿರ ಸಿಗುತ್ತದೆ. ಕೊಯ್ಲು ಮಾಡಲು ಒಬ್ಬರಿಗೆ ದಿನಕ್ಕೆ ₹ 300 ಕೂಲಿ ಇದ್ದು, ₹ 30 ಸಾವಿರ ಖರ್ಚಾಗುತ್ತದೆ‘ ಎಂದು ರವಿಶಂಕರ್ ಅಳಲು ತೋಡಿಕೊಂಡರು.
‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ದನೆಯ ಬೂದುಗುಂಬಳಕ್ಕೆ ಮಾತ್ರ ಬೇಡಿಕೆ ಇದೆ. ನಮ್ಮದು ದುಂಡನೆಯ ಬೂದುಗುಂಬಳ. ಅಲ್ಲಿಗೆ ಕೊಂಡೊಯ್ಯಲು ಸಾರಿಗೆ ವೆಚ್ಚ ಹೆಚ್ಚಾಗಲಿದೆ. ಮದುವೆಯ ಸೀಸನ್‌ನಲ್ಲಿ ಉತ್ತಮ ಬೆಲೆ ಸಿಗಬಹುದು ಎಂದುಕೊಂಡಿದ್ದೆ. ಆದರೆ, ಕುಸಿದ ದರವು ನಿರಾಸೆ ಮೂಡಿಸಿದೆ’ ಎನ್ನುತ್ತಾರೆ ರವಿಶಂಕರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.