ಮಲೇಬೆನ್ನೂರು: ಬೇಸಿಗೆಯ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಹೋಬಳಿ ವ್ಯಾಪ್ತಿಯ ಜಲಮೂಲಗಳಾದ ಕೆರೆ, ಹೊಂಡ, ತೆರೆದ ಬಾವಿ, ಕೊಳವೆಬಾವಿ ಬತ್ತುತ್ತಿದ್ದು, ತೋಟಗಳ ರಕ್ಷಣೆಗೆ ಕೃಷಿಕರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಭದ್ರಾ ನಾಲೆಯಿಂದ ವರ್ಷಪೂರ್ತಿ ಬೆಳೆಗಳಿಗೆ ನೀರು ಲಭ್ಯವಾಗುತ್ತಿತ್ತು. ಪ್ರಸಕ್ತ ವರ್ಷ ಮಳೆ ಕೊರತೆಯಿಂದಾಗಿ ಭದ್ರಾ ಜಲಾಶಯ ಭರ್ತಿಯಾಗಲಿಲ್ಲ. ಮಳೆಗಾಲದಲ್ಲಿ ರೈತರು ಹಾಗೂಹೀಗೂ ಸಂಭಾಳಿಸಿದರು. ಆದರೆ, ಶಿವರಾತ್ರಿಗೂ ಮುನ್ನವೇ ಜಲಕ್ಷಾಮದ ಬಿಸಿ ತಟ್ಟಿದೆ.
ದೇವರ ಬೆಳೆಕೆರೆ ಪಿಕಪ್ ಜಲಾಶಯದ ಹೊರಹರಿವು ಸ್ಥಗಿತವಾಗಿ ಸೂಳೆಕೆರೆ ಹಳ್ಳ ಸಂಪೂರ್ಣ ಒಣಗಿದೆ. ಹಳ್ಳದ ಸಾಲಿನ ವೀಳ್ಯದೆಲೆ ಹಾಗೂ ಅಡಿಕೆ ತೋಟಗಳು ನೀರಿನ ಕೊರತೆ ಎದುರಿಸುತ್ತಿವೆ. ಆದರೆ ಹೊಳೆ ಸಾಲಿನ ಭತ್ತದ ಗದ್ದೆ, ತೋಟಗಳಿಗೆ ಅಷ್ಟಾಗಿ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಕೊಮಾರನಹಳ್ಳಿ, ಹೆಳವನಕಟ್ಟೆ ಕೆರೆ ಮಧ್ಯೆದಲ್ಲಿ ನಿಂತಿರುವ ಅಲ್ಪಸ್ವಲ್ಪ ನೀರು ಕಾಡುಪ್ರಾಣಿಗಳು ಹಾಗೂ ಜಾನುವಾರುಗಳ ಬಾಯಾರಿಕೆ ನೀಗಿಸುತ್ತಿದೆ. ಈ ನಡುವೆ, ಬತ್ತಿರುವ ಕೆರೆಯಲ್ಲಿ ಕೆರೆಹೂಳೆತ್ತುವ ಕೆಲಸ ಭರದಿಂದ ಸಾಗಿದೆ.
ಹೋಬಳಿ ವ್ಯಾಪ್ತಿಯಲ್ಲಿ 12,000 ಹೆಕ್ಟರ್ ಭತ್ತ ಬೆಳೆಯುವ ಪ್ರದೇಶವಿದೆ. ಈ ಪೈಕಿ, ಕೊಳವೆಬಾವಿ ಆಶ್ರಿತ ಹಾಗೂ ನೀರಿನ ಆಸರೆಯಿರುವ ಹಡ್ಲು, ಹೊಳೆಸಾಲು, ಡಿ.ಬಿ. ಕೆರೆ ಪಿಕಪ್ ಪ್ರದೇಶದ ಅಂದಾಜು 1,000 ಹೆಕ್ಟೇರ್‌ನಲ್ಲಿ ಮಾತ್ರ ಈ ಬಾರಿ ಭತ್ತ ನಾಟಿ ಮಾಡಲಾಗಿದೆ. ಅಂದಾಜು 5,000 ಹೆಕ್ಟೇರ್‌ನಲ್ಲಿ ತೋಟದ ಬೆಳೆಗಳನ್ನು ಬೆಳೆಯಲಾಗುತ್ತಿದೆ ಎಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಮೂಲಗಳು ತಿಳಿಸಿವೆ.
ತೋಟ ಉಳಿಸಿಕೊಳ್ಳಲು ಹೆಚ್ಚು ಆಳದ ಕೊಳವೆ ಬಾವಿ ಕೊರೆಸುವುದು, ಪೈಪ್‌ಲೈನ್ ನಿರ್ಮಾಣ, ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳುವ ಚಿತ್ರಣ ಈ ಭಾಗದಲ್ಲಿ ಸಾಮಾನ್ಯ ಎಂಬಂತಾಗಿದೆ. 500 ರಿಂದ 600 ಅಡಿ ಕೊರೆಸಿದರೂ ಕೊಳವೆಬಾವಿಗಳಲ್ಲಿ ನೀರು ಲಭ್ಯವಾಗುತ್ತಿಲ್ಲ. ಬೋರ್‌ವೆಲ್ ವೈಫಲ್ಯ ಪ್ರಮಾಣವೇ ಹೆಚ್ಚಾಗಿರುವುದು ಕೃಷಿಕರನ್ನು ಚಿಂತೆಗೀಡು ಮಾಡಿದೆ. ಮಲೆನಾಡಿನ ಸೆರಗಿನ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವ ದಿನಗಳು ದೂರವಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.
ಬಹುತೇಕ ತೋಟಗಳು ಕೊಳವೆಬಾವಿ ನೀರಿನ ಆಶ್ರಯ ಪಡೆದಿವೆ. ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿತವಾಗಿದ್ದು ಚಿಂತೆಗೀಡು ಮಾಡಿದೆಐರಣಿ ಅಣ್ಣೇಶ್ ಕೊಮಾರನಹಳ್ಳಿಯ ರೈತ
ತೋಟ ಉಳಿಸುಕೊಳ್ಳುವ ಸವಾಲು ಎದುರಾಗಿದೆ. 4 ಎಕರೆಯ ಅಡಿಕೆ ತೋಟದ ಬೆಳೆಯನ್ನು ರಕ್ಷಿಸಿಕೊಳ್ಳಲು ಪ್ರತಿನಿತ್ಯ ಹನುಮನಹಳ್ಳಿ ಕೆರೆಯಿಂದ 6 ಟ್ಯಾಂಕರ್ ನೀರನ್ನು ತೋಟದ ಕೃಷಿ ಹೊಂಡಕ್ಕೆ ತುಂಬಿಸಿಕೊಳ್ಳುತ್ತಿದ್ದೇವೆಮರುಳಸಿದ್ದಪ್ಪ ಕೊಪ್ಪ ಗ್ರಾಮದ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.