ADVERTISEMENT

ಸರ್ವರಿಗೂ ಶಿಕ್ಷಣ, ಉದ್ಯೋಗದ ಖಾತರಿ: ಕೆಆರ್‌ಎಸ್‌ ಯುವ ಪ್ರಣಾಳಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 19:50 IST
Last Updated 12 ಜನವರಿ 2023, 19:50 IST
ಕರ್ನಾಟಕ ರಾಜ್ಯ ಸಮಿತಿ ಪಕ್ಷದ (ಕೆಆರ್‌ಎಸ್ ಪಕ್ಷ) ರಾಜ್ಯಮಟ್ಟದ ಯುವ ಸಮಾವೇಶದ ಅಂಗವಾಗಿ ದಾವಣಗೆರೆಯ ಮೋತಿ ವೀರಪ್ಪ ಮೈದಾನದಲ್ಲಿ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಕೆಆರ್‌ಎಸ್ ಪಕ್ಷದ ಆಡಿಯೊ ಬಿಡುಗಡೆಗೊಳಿಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಕರ್ನಾಟಕ ರಾಜ್ಯ ಸಮಿತಿ ಪಕ್ಷದ (ಕೆಆರ್‌ಎಸ್ ಪಕ್ಷ) ರಾಜ್ಯಮಟ್ಟದ ಯುವ ಸಮಾವೇಶದ ಅಂಗವಾಗಿ ದಾವಣಗೆರೆಯ ಮೋತಿ ವೀರಪ್ಪ ಮೈದಾನದಲ್ಲಿ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಕೆಆರ್‌ಎಸ್ ಪಕ್ಷದ ಆಡಿಯೊ ಬಿಡುಗಡೆಗೊಳಿಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಉನ್ನತ ಶಿಕ್ಷಣದವರೆಗೆ ಎಲ್ಲರಿಗೂ ಉಚಿತ ಶಿಕ್ಷಣ, 18 ವರ್ಷ ದಾಟಿದ ಎಲ್ಲರಿಗೂ ಉದ್ಯೋಗ, ನೌಕರಿಯಲ್ಲಿ ಗುತ್ತಿಗೆ ಪದ್ಧತಿ ಪದ್ಧತಿ ರದ್ದತಿ ಸೇರಿದಂತೆ ಯುವಜನರಿಗಾಗಿ ಅನೇಕ ಯೋಜನೆಗಳಿರುವ ಪ್ರಣಾಳಿಕೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷ ಬಿಡುಗಡೆ ಮಾಡಿದೆ.

ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಕೆಆರ್‌ಎಸ್‌ ಪಕ್ಷವು ಇಲ್ಲಿನ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಯುವ ಸಮಾವೇಶದಲ್ಲಿ ಯುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.

ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕಲು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2 ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಪಾರದರ್ಶಕವಾಗಿ, ಭ್ರಷ್ಟಾಚಾರರಹಿತವಾಗಿ ನೇಮಕ ಮಾಡಲಾಗುವುದು. ಖಾಸಗಿ ವಲಯಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸಲಾಗುವುದು. ಸ್ಥಳೀಯ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಮಾದಕ ವಸ್ತುಗಳ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗುವುದು. ಚುನಾವಣೆಯಲ್ಲಿ ಸ್ಪರ್ಧಿಸಲು ಯುವಜನರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಘೋಷಿಸಲಾಗಿದೆ.

ADVERTISEMENT

ಅಕ್ಷರ ದಾಸೋಹ ಕಾರ್ಯಕ್ರಮವನ್ನು ಸ್ನಾತಕೋತ್ತರ ಪದವಿವರೆಗೆ ವಿಸ್ತರಣೆ, ಹೋಬಳಿಗೊಂದು ಕೌಶಲ ತರಬೇತಿ ಕೇಂದ್ರಸ್ಥಾಪನೆ, ಕೆಪಿಎಸ್‌ಸಿ ಅಕ್ರಮಕ್ಕೆ ಕಡಿವಾಣ, ಕೃಷಿ, ಹೈನುಗಾರಿಕೆಗೆ ಪ್ರೋತ್ಸಾಹ, ಹೋಬಳಿಗೊಂದು ಕ್ರೀಡಾ ತರಬೇತಿ ಅಕಾಡೆಮಿ ಸ್ಥಾಪನೆ ಸಹಿತ ಹಲವು ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

‘ಜೆಸಿಬಿ’ಯಿಂದ ಯುವಜನರಿಗೆ ಸಂಕಷ್ಟ: ‘ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ (ಜೆಸಿಬಿ) ಯಿಂದ ಯುವಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿರಿಯರು ಯುವಜನರ ಭವಿಷ್ಯ ವಿನಾಶದತ್ತ ಸಾಗುತ್ತಿದೆ. 2050ರ ನಂತರ ಕೋಟಿ ಕೋಟಿ ಯುವಜನರು ಸಾಯುವ ಸನ್ನಿವೇಶ ನಿರ್ಮಾಣವಾಗಲಿದೆ. ಕೆಆರ್‌ಎಸ್‌ ಈ ಬಗ್ಗೆ ಎಚ್ಚರಿಸುವ ಪ್ರಯತ್ನ ಮಾಡುತ್ತಿದೆ. ಯುವಜನರು ಎಚ್ಚೆತ್ತುಕೊಳ್ಳದೇ ಇದ್ದರೆ ವಿನಾಶ ಖಂಡಿತ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಎಚ್ಚರಿಸಿದರು.

‘ಮೂರು ಪಕ್ಷಗಳ ಶಾಸಕರಿಗೆ ಐಎಎಸ್‌ ಅಧಿಕಾರಿಗಳತ್ತ ಕೆಲಸ ಮಾಡಿಸುವುದಿರಲಿ, ತಾಲ್ಲೂಕಿನ ತಹಶೀಲ್ದಾರ್‌ ಜತೆಗೆ ಕಾನೂನು ಹೀಗಿದೆ ಎಂದು ಹೇಳುವ ಧೈರ್ಯವೂ ಇಲ್ಲ. ಏಕೆಂದರೆ ಅಷ್ಟು ನೀಚ ಕೆಲಸಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಹೆಂಡ, ಹಣ, ಚಮಚಾಗಿರಿ, ಗುಲಾಮಗಿರಿಯೇ ಆ ಪಕ್ಷಗಳ ಬಂಡವಾಳ’ ಎಂದು ಟೀಕಿಸಿದರು.

ಈ ಸಮಾಜದಲ್ಲಿ ಭ್ರಷ್ಟರು, ಅಧಮರು, ನೀಚರು ತುಂಬಿ ಹೋಗಿದ್ದಾರೆ. ಅವರೇ ರಾಜಕೀಯ ಮಾಡುತ್ತಿದ್ದಾರೆ. ಆದರ್ಶ, ನೈತಿಕತೆ ಇಲ್ಲದ ಪಕ್ಷಗಳನ್ನು ದಿಕ್ಕರಿಸಿ ಕೆಆರ್‌ಎಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ರವಿಕೃಷ್ಣಾರೆಡ್ಡಿ ಮುಖ್ಯಮಂತ್ರಿಯಾಗಬೇಕು ಎಂದು ಯುವ ಘಟಕದ ರಾಜ್ಯಾಧ್ಯಕ್ಷ ರಘು ಜಾಣಗೆರೆ ಆಗ್ರಹಿಸಿದರು.

ಕೆಆರ್‌ಎಸ್‌ ಮುಖಂಡರಾದ ಜ್ಞಾನಸಿಂಧು ಸ್ವಾಮಿ, ತೇಜಸ್ವಿ, ನಿರೂಪಾದಿ, ಜೀವನ್‌, ಜನನಿ ವತ್ಸಲಾ, ಚರಣ್‌ಕುಮಾರ್‌, ಲಿಂಗೇಗೌಡ ಮುಂತಾದವರು ಮಾತನಾಡಿದರು.

ಜಿಲ್ಲಾಧ್ಯಕ್ಷ ಸುರೇಶ ಸಂಗಾಹಳ್ಳಿ, ಮುಖಂಡರಾದ ಜಿ.ಎಂ.ಮಂಜುನಾಥ, ಚಂದ್ರಶೇಖರ, ವೀರಭದ್ರಪ್ಪ, ಸೈಯದ್ ಸಮೀವುಲ್ಲಾ, ಕೃಷ್ಣ, ಯುವ ಘಟಕದ ಜಿಲ್ಲಾಧ್ಯಕ್ಷ ಅಭಿಷೇಕ್‌ ಸಹಿತ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.