ADVERTISEMENT

ಗ್ಯಾರಂಟಿಯಿಂದ ಆಲಸ್ಯ, ರೈತರಿಗೆ ಸಿಗದ ಕೂಲಿಕಾರರು: ವೀರಸೋಮೇಶ್ವರ ಸ್ವಾಮೀಜಿ

ರಂಭಾಪುರಿ ಶ್ರೀ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 16:02 IST
Last Updated 10 ಜುಲೈ 2024, 16:02 IST
ರಂಭಾಪುರಿ ಶ್ರೀ
ರಂಭಾಪುರಿ ಶ್ರೀ   

ಹರಿಹರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಶ್ರಮಪಡುವ ಮನೋಭಾವ ಜನರಲ್ಲಿ ಮಾಯವಾಗುತ್ತಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗ್ಯಾರಂಟಿ ಯೋಜನೆಗಳು ದುರ್ಬಳಕೆಯಾಗುತ್ತಿವೆ. ಕೃಷಿ ಕಾರ್ಯಕ್ಕೆ ಕೂಲಿಕಾರರು ಸಿಗದೆ ರೈತರು ತೊಂದರೆ ಎದುರಿಸುವಂತಾಗಿದೆ ಎಂದು ಇಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಶ್ರಮ ಇಲ್ಲದೆ ಸಂಪತ್ತು ಬರುವುದರಿಂದ ಆಲಸ್ಯ ಉಂಟಾಗುತ್ತದೆ. ಗ್ಯಾರಂಟಿ ಬದಲು ಇದೇ ಅನುದಾನವನ್ನು ನಿರ್ಗತಿಕರು, ನಿಶ್ಯಕ್ತರನ್ನು ಸಬಲರನ್ನಾಗಿ ಮಾಡಲು ಬಳಸಿಕೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು.

ADVERTISEMENT

ಸರ್ಕಾರದ ಕೆಲವು ಸವಲತ್ತುಗಳು ಮೇಲ್ಜಾತಿಯ ಬಡವರಿಗೆ ತಲುಪುತ್ತಿಲ್ಲ. ಇದನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಮೇಲ್ಜಾತಿಯಲ್ಲೂ ಬಹಳಷ್ಟು ಬಡವರು ಇದ್ದಾರೆ. ಎಲ್ಲಾ ವರ್ಗಗಳಲ್ಲಿ ಇರುವ ಬಡವರನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಪಠ್ಯ ಪರಿಷ್ಕರಣೆ ವೇಳೆ 9ನೇ ತರಗತಿ ಪಠ್ಯದ ಬಸವಣ್ಣನ ಚರಿತ್ರೆ ವಿಷಯದಲ್ಲಿ ವೀರಶೈವ ಪದ ತೆಗೆದು ಲಿಂಗಾಯತ ಪದ ಬಳಕೆ ಮಾಡಿರುವುದು ಸರಿಯಲ್ಲ. ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಮತ್ತು ಬಿ.ಸಿ.ನಾಗೇಶ್ ಶಿಕ್ಷಣ ಮಂತ್ರಿಗಳಾಗಿದ್ದ ಅವಧಿಯಲ್ಲಿ ಪಠ್ಯ ಪರಿಷ್ಕರಣೆ ವೇಳೆ ಈ ಬದಲಾವಣೆ ಮಾಡಲಾಗಿದೆ. ವೀರಶೈವ ಪದ ಸೇರ್ಪಡೆಗೆ ಕಾಂಗ್ರೆಸ್‌ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ವೀರಶೈವ ಲಿಂಗಾಯತ ಸಮಾಜವು ದಶಕಗಳಿಂದ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದೆ. ಆದರೆ, ಈ ರೀತಿ ಮಾಡಿರುವುದು ಸರಿಯಲ್ಲ. ಈ ಮೂಲಕ ಸಮಾಜಕ್ಕೆ ಅಪಚಾರ ಎಸಗಿದಂತಾಗಿದೆ. ಇದನ್ನು ನಮ್ಮ ಪೀಠ ಸೇರಿ ಪಂಚಪೀಠಗಳು ಈಗಾಗಲೇ ವಿರೋಧಿಸಿವೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದು, ಇದುವರೆಗೂ ಕ್ರಮ ಕೈಗೊಂಡಿಲ್ಲ. ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಸರ್ಕಾರ ಅಥವಾ ಯಾವುದೇ ವ್ಯಕ್ತಿಗಳು ಪಠ್ಯ ಪರಿಷ್ಕರಣೆಯ ಸಂದರ್ಭದಲ್ಲಿ ಇತಿಹಾಸಕ್ಕೆ ಅಪಮಾನ ಮಾಡದಂತೆ, ಶರಣರ ಚರಿತ್ರೆಗಳಿಗೆ ಚ್ಯುತಿ ಬಾರದಂತೆ ಮೂಲ ಚರಿತ್ರೆಯನ್ನು ಮರೆಮಾಚದಂತೆ ಸತ್ಯವನ್ನು ಸೇರ್ಪಡೆ ಮಾಡಬೇಕು. ರಾಜಕೀಯ ಕಾರಣಗಳಿಗೆ ಈ ರೀತಿ ಮಾಡಿದ್ದರೆ ಅಕ್ಷಮ್ಯ ಎಂದರು.

ವೀರಶೈವ ಪದ ತೆಗೆದ ಪ್ರಕರಣದ ಬಗ್ಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ತಮ್ಮ ನಿಲುವು ಏನೆಂಬುದನ್ನು ಬಹಿರಂಗ ಪಡಿಸಬೇಕು. ವೀರಶೈವ ಪದ ಸೇರಿಸಲು ಅವರು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.