ದಾವಣಗೆರೆ: ಸ್ಪರ್ಧಾತ್ಮಕ ಪರೀಕ್ಷೆಗಳ ಕನಸು ಹೊತ್ತು, ಐಎಎಸ್, ಐಪಿಎಸ್ ಅಧಿಕಾರಿಯಾಗಬೇಕೆಂಬ ಆಕಾಂಕ್ಷೆಯಿಂದ ಯುವ ಮನಸುಗಳು ಅಲ್ಲಿ ಸೇರಿದ್ದವು. ಉನ್ನತ ಹುದ್ದೆಗೇರಿದ ಅಧಿಕಾರಿಗಳ ಅನುಭವದ ಮಾತು ಕೇಳಲು ಸಾವಿರಾರು ಆಕಾಂಕ್ಷಿಗಳ ಕುತೂಹಲ ಗರಿಗೆದರಿತ್ತು.
ಸಂಪನ್ಮೂಲ ವ್ಯಕ್ತಿಗಳು ಅವರಿಗೆ ಮಾರ್ಗದರ್ಶನ ನೀಡಿ, ಅವರ ಸಂದೇಹ ನಿವಾರಿಸುವ ಪ್ರಯತ್ನ ಮಾಡಿದರು. ಐಎಎಸ್, ಐಪಿಎಸ್ ಅಧಿಕಾರಿ ಆಗುವ ಕನಸು ಹೊತ್ತು ಬಂದಿದ್ದವರ ಕಣ್ಣುಗಳಲ್ಲಿ ಹೊಳಪು ಮೂಡಿತು. ಕನಸು ನನಸಾಗುವ ಹಂಬಲ ಮತ್ತಷ್ಟು ಹೆಚ್ಚಾಯಿತು. ಬಂದಿದ್ದವರು ಹೊಸ ಭರವಸೆಗಳೊಂದಿಗೆ ಹೆಜ್ಜೆ ಹಾಕಿದರು.
ನಗರದ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ‘ಪ್ರಜಾವಾಣಿ‘, ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ‘ಇನ್‌ಸೈಟ್ಸ್ ಐಎಎಸ್’ ಅಕಾಡೆಮಿಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಗೈಡಿಂಗ್ ಫೋರ್ಸ್’ ಕಾರ್ಯಕ್ರಮವು ಸಾಧನೆಯ ಹಂಬಲದೊಂದಿಗೆ ಬಂದಿದ್ದ ವಿದ್ಯಾರ್ಥಿಗಳ ಕನಸಿಗೆ ಏಣಿಯಾಗುವಲ್ಲಿ ಯಶಸ್ವಿಯಾಯಿತು.
ಐಎಎಸ್, ಐಪಿಎಸ್, ಕೆಎಎಸ್ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹೇಗೆ? ದಿನಕ್ಕೆ ಎಷ್ಟು ಗಂಟೆಗಳ ಅಧ್ಯಯನ ಅವಶ್ಯ? ಅಧ್ಯಯನ ಸಾಮಗ್ರಿಗಳ ಆಯ್ಕೆ ಹೇಗೆ? ಯಾವೆಲ್ಲ ದಿನಪತ್ರಿಕೆ, ನಿಯತಕಾಲಿಕೆ ಓದಬೇಕು? ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿನ ಸೂತ್ರ ಏನು? ಇಂತಹ ಹತ್ತಾರು ಪ್ರಶ್ನೆಗಳಿಗೆ ಸಾಧಕರು ಹಾಗೂ ವಿಷಯತಜ್ಞರು ಮನಮುಟ್ಟುವಂತೆ ತಿಳಿಸಿ, ಪರೀಕ್ಷಾರ್ಥಿಗಳಲ್ಲಿ ಹೊಸ ಚೈತನ್ಯ ತುಂಬಿದರು.
ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಗೆ ಅಣಿಯಾಗಲಿರುವ ಅಭ್ಯರ್ಥಿಗಳನ್ನು ಗಮನದಲ್ಲಿ ಇರಿಸಿಕೊಂಡು ರೂಪಿಸಿದ್ದ ಕಾರ್ಯಕ್ರಮಕ್ಕೆ ಬೆಳಿಗ್ಗೆ 9ರಿಂದಲೇ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ತಂಡೋಪತಂಡವಾಗಿ ಬಂದರು. ಜಿಲ್ಲೆ ಮಾತ್ರವಲ್ಲದೇ ಚಿತ್ರದುರ್ಗ, ಹಾವೇರಿ, ವಿಜಯನಗರ ಜಿಲ್ಲೆಗಳ ವಿವಿಧ ತಾಲ್ಲೂಕುಗಳಿಂದಲೂ ನೂರಾರು ವಿದ್ಯಾರ್ಥಿಗಳು, ಪದವೀಧರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕಿಕ್ಕಿರಿದ ಸಭಾಭವನ:
ಪ್ರವೇಶ ದ್ವಾರದ ಬಳಿ ನೋಂದಣಿ ಪ್ರಕ್ರಿಯೆ ಮುಗಿಸಿ ಒಳಬಂದ ಸಾವಿರಾರು ವಿದ್ಯಾರ್ಥಿಗಳಿಂದ ಸಭಾಂಗಣ ಕಿಕ್ಕಿರಿದು ತುಂಬಿತ್ತು. ವಿಶಾಲ ಸಭಾಂಗಣದ ಎಲ್ಲ ಆಸನಗಳೂ ಭರ್ತಿಯಾದ ಬಳಿಕ ಹೊರಗಡೆ ವ್ಯವಸ್ಥೆ ಮಾಡಲಾಗಿದ್ದ ಆಸನಗಳಲ್ಲಿ ಕುಳಿತು ಎಲ್‌ಇಡಿ ಪರದೆಯ ಮೂಲಕ ಕಾರ್ಯಕ್ರಮ ವೀಕ್ಷಿಸಿದರು. ಅಲ್ಲಿಯೂ ಆಸನ ಭರ್ತಿಯಾದ್ದರಿಂದ ಕೆಲ ವಿದ್ಯಾರ್ಥಿಗಳು ವೇದಿಕೆಯ ಮೇಲೇರಿ ಕುಳಿತರೆ, ಇನ್ನೂ ಕೆಲವರು ನಿಂತುಕೊಂಡೇ ವಿಷಯತಜ್ಞರ ಭಾಷಣ ಆಲಿಸಿದರು. ವಿವಿಧ ಕಾಲೇಜುಗಳ ಉಪನ್ಯಾಸಕರು, ಪ್ರಾಚಾರ್ಯರೂ ಉತ್ಸಾಹದಿಂದ ಪಾಲ್ಗೊಂಡಿದ್ದರು.
ವಿಷಯ ತಜ್ಞರೊಂದಿಗೆ ಸಂವಹನ:
ಕಾರ್ಯಕ್ರಮವು ಏಕಮುಖ ಭಾಷಣಕ್ಕೆ ಮಾತ್ರ ಸೀಮಿತವಾಗಲಿಲ್ಲ. ವಿಷಯ ತಜ್ಞರೊಂದಿಗೆ ಚರ್ಚೆ ನಡೆಸಲೂ ವಿದ್ಯಾರ್ಥಿಗಳಿಗೆ ಅವಕಾಶ ದೊರಕಿತು. ಸಂಪನ್ಮೂಲ ವ್ಯಕ್ತಿಗಳ ಭಾಷಣದ ಬಳಿಕ ವಿದ್ಯಾರ್ಥಿಗಳು ಹತ್ತಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.
ಕೀಳರಿಮೆ ಬಿಡಿ, ಮಹಾತ್ವಾಕಾಂಕ್ಷೆ ಇರಲಿ:
ವಿದ್ಯಾರ್ಥಿಗಳು ಅದರಲ್ಲೂ ಗ್ರಾಮೀಣ ಪ್ರದೇಶದವರು ಕೀಳರಿಮೆ ಬಿಟ್ಟು ಹೊರಬಂದರೆ ಸಾಧನೆ ಸಾಧ್ಯ ಎಂದು ಸಲಹೆ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ತಮ್ಮ ಬಾಲ್ಯ, ಪರೀಕ್ಷೆಯಲ್ಲಿನ ಯಶೋಗಾಥೆಯ ಬಗ್ಗೆ ಹಾಗೂ ಐಎಎಸ್ ಮಾಡಲು ಪ್ರೇರಣೆಯಾದ ಹಿನ್ನೆಲೆಯನ್ನು ವಿವರಿಸಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ಮಹಾತ್ವಾಕಾಂಕ್ಷೆ ಬೆಳೆಸಿಕೊಳ್ಳಬೇಕು. ಆಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಿಗದಿದ್ದರೂ ಜೀವನದ ಹಲವು ಮಜಲುಗಳಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಸಲಹೆ ನೀಡಿದರು.
ಪದವಿ ನಂತರ ಮುಂದೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಮೂಡುವುದು ಸಹಜ. ಬಯಸಿದ ಉದ್ಯೋಗ ಗಳಿಸಬೇಕು ಎಂಬ ಆಲೋಚನೆ, ಕನಸು ಸಹಜ. ಆ ಆಲೋಚನೆಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರಯತ್ನ ಇದ್ದರೆ ವಿದ್ಯಾರ್ಥಿಗಳು ಐಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬಹುದು. ಅಂಥವರಿಗೆ ಇಂತಹ ವೇದಿಕೆಗಳು ಮಾರ್ಗದರ್ಶನ ನೀಡುತ್ತವೆ. ದಾವಣಗೆರೆಯಲ್ಲಿ ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
‘ದೂರದೃಷ್ಟಿ ಇದ್ದರೆ ಸಾಧನೆ ಸಾಧ್ಯ. ಯುಪಿಎಸ್‌ಸಿ ಪರೀಕ್ಷೆ ಇತರ ಪರೀಕ್ಷೆಗಳಿಗಿಂತ ಭಿನ್ನ. ಇಲ್ಲಿ ಸ್ಪರ್ಧೆ ಜಾಸ್ತಿ. ನಮ್ಮ ಕಲಿಕಾ ಸಾಮರ್ಥ್ಯ, ಓದುವ ರೀತಿ, ಹವ್ಯಾಸಗಳನ್ನು ಉತ್ತಮ ರೀತಿಯಲ್ಲಿ ಒರೆಗೆ ಹಚ್ಚಬೇಕು. ವಿಷಯವನ್ನು ಮನನ ಮಾಡಿಕೊಳ್ಳಬೇಕು. ಸೋಲನ್ನೂ ಆತ್ಮವಿಶ್ವಾಸದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಏಕಾಗ್ರತೆಯಿಂದ ಕೂಡಿದ ಸತತ ಪ್ರಯತ್ನ ಮುಖ್ಯ. ಕಷ್ಟದ ಸ್ಥಿತಿ ಎದುರಿಸುವ ಮನೋಸ್ಥೈರ್ಯ, ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳ ಓದಿನಿಂದ ಮಾನಸಿಕ ಖಿನ್ನತೆ ದೂರವಾಗುತ್ತದೆ ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಜಿಲ್ಲಾಧಿಕಾರಿ ಮಾರ್ಗದರ್ಶನ ಮಾಡಿದರು.
ಆಲೋಚನೆಗಳಿಗೆ ವಿಶ್ಲೇಷಣೆ ಮೂಲಕ ಶಕ್ತಿ ತುಂಬೇಕು. ಹೊಸ ಅಲೋಚನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಒಂದು ವಿಷಯದ ಓದು, ಮನನ, ಬರೆದು ಅಭ್ಯಾಸದ ಜತೆಗೆ ವಿಶ್ಲೇಷಣೆಯೂ ಬೇಕು. ಸೂರ್ಯನ ಬೆಳಕಿನಲ್ಲಿ ಅಧ್ಯಯನ ಮಾಡಬೇಕು. ಬಾಹ್ಯ ಹಾಗೂ ಆಂತರಿಕವಾಗಿ ಪ್ರೇರಣೆ ಪಡೆದು ಯಶಸ್ಸು ಸಾಧಿಸಿ ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ‘ಪ್ರಜಾವಾಣಿ’ ಬ್ಯೂರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ, ‘ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳನ್ನು ಮಾತ್ರ ಓದದೇ ಸಾಹಿತ್ಯ ಕೃತಿಗಳ ಅಧ್ಯಯನ ನಡೆಸಬೇಕು. ನಿತ್ಯವೂ ನಡೆಯುವ ಆಗುಹೋಗುಗಳನ್ನು ಅರಿಯಲು ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳನ್ನು ತಪ್ಪದೇ ಓದಿದಲ್ಲಿ ಜ್ಞಾನ ಹೆಚ್ಚಿಸಿಕೊಂಡು, ಬಯಸಿದ ಉದ್ಯೋಗ ಪಡೆಯಬಹುದು’ ಎಂದು ಸಲಹೆ ನೀಡಿದರು.
‘ಇನ್‌ಸೈಟ್ಸ್ ಐಎಎಸ್’ ಅಕಾಡೆಮಿಯ ಸಂಸ್ಥಾಪಕ ಜಿ.ಬಿ. ವಿನಯಕುಮಾರ್, ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಪ್ರದೀಪ್ ಕೃಷ್ಣ, ಶಮಂತ್‌ಗೌಡ, ‘ಪ್ರಜಾವಾಣಿ’ ಪ್ರಸರಣ ವಿಭಾಗದ ವಿವಿಧ ವಲಯಗಳ ಮುಖ್ಯಸ್ಥರಾದ ಪ್ರಕಾಶ್ ನಾಯಕ್, ಮುರಳೀಧರ್ ಜಿ.ಎಸ್., ನಂದಗೋಪಾಲ್, ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ಪ್ರಮೋದ್ ಭಾಗವತ್, ಮುದ್ರಣ ವಿಭಾಗದ ವ್ಯವಸ್ಥಾಪಕ ಮುರಳೀಧರ ಟಿ., ‘ಡೆಕ್ಕನ್ ಹೆರಾಲ್ಡ್’ ಮುಖ್ಯ ವರದಿಗಾರ ನೃಪತುಂಗ ಎಸ್.ಕೆ. ಇದ್ದರು.
ದೀಕ್ಷಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಶರಣಕುಮಾರ್ ಎಲ್.ಎಂ. ಪ್ರಾರ್ಥಿಸಿದರು. ಅನಿತಾ ಎಚ್. ವಂದಿಸಿದರು.
‘ಸ್ಪರ್ಧಾ ವಾಣಿ’ ಓದಿ
‘ಪ್ರಜಾವಾಣಿ‘ ಬಳಗದಿಂದ ಹೊರತಂದಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಕೈಪಿಡಿ ‘ಸ್ಪರ್ಧಾವಾಣಿ’ ಮಾಸಿಕ ಪತ್ರಿಕೆ ಉತ್ತಮ ಅಧ್ಯಯನ ಸಾಮಗ್ರಿ. ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು ಇದನ್ನು ಓದುವ ಅಭ್ಯಾಸ ರೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಸಲಹೆ ನೀಡಿದರು. ‘ಸ್ಪರ್ಧಾವಾಣಿ’ಯನ್ನು ನಾನು ಅವಲೋಕಿಸಿದ್ದೇನೆ. ಇದು ಅತ್ಯಂತ ಉಪಯುಕ್ತ ಪತ್ರಿಕೆ. ಪ್ರತಿ ಗ್ರಾಮ ಮಟ್ಟದಲ್ಲಿಯೂ ಈ ಪತ್ರಿಕೆ ದೊರೆಯುವಂತಾಗಬೇಕು. ಆಗ ಇದು ರಾಜ್ಯದ ವಿದ್ಯಾರ್ಥಿಗಳಿಗೆ ಕಲ್ಪವೃಕ್ಷವಾಗಲಿದೆ. ಪ್ರತಿ ಸರ್ಕಾರಿ ಶಾಲೆಗೆ ಇದು ತಲುಪಬೇಕು ಎಂದು ಅವರು ಆಶಿಸಿದರು.
ಪರಿಶ್ರಮ ಇದ್ದರೆ ಯಶಸ್ಸು ಖಚಿತ
ಯುಪಿಎಸ್‌ಸಿ ಪರೀಕ್ಷೆಯ ರೂಪುರೇಷೆ ತಯಾರಿ ಯಾವ ವಿಷಯಗಳು ಇರುತ್ತವೆ ಎಂಬ ಬಗ್ಗೆ ಸವಿಸ್ತಾರವಾಗಿ ತಿಳಿಸಿದ ಇನ್‌ಸೈಟ್ಸ್ ಐಎಎಸ್ ಅಕಾಡೆಮಿಯ ಸಂಪನ್ಮೂಲ ವ್ಯಕ್ತಿಗಳಾದ ಪ್ರದೀಪ್ ಕೃಷ್ಣ ‘ಪರಿಶ್ರಮ ಇದ್ದರೆ ಯಶಸ್ಸು ಖಚಿತ’ ಎಂದರು. ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ಆಯೋಜಿಸುವ ಪರೀಕ್ಷೆಗೆ ಪ್ರತಿ ಹಂತದಲ್ಲೂ ತಯಾರಿ ವಿಭಿನ್ನವಾಗಿರಬೇಕು. ಈ ಪರೀಕ್ಷೆಗಳ ಸಾಮಗ್ರಿಯೇ ಬಹುತೇಕ ಇತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಇರುತ್ತವೆ. ಈ ಪರೀಕ್ಷೆ ಎದುರಿಸಿದರೆ ಉಳಿದ ಪರೀಕ್ಷೆಗಳು ಸುಲಭ ಎಂದರು. ‘ಉತ್ತರ ಭಾರತದವರೇ ಯುಪಿಎಸ್‌ಸಿ ಹಾಗೂ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸುತ್ತಾರೆ. ಕಾರಣ ಅವರಲ್ಲಿ ಪೂರ್ವ ಹಂತದಲ್ಲೇ ತಯಾರಿ ಇರುತ್ತದೆ. ಪಿಯುಸಿ ನಂತರ ಅಲ್ಲಿ ಇಂತಹ ಪರೀಕ್ಷೆಗಳ ತಯಾರಿ ನಡೆಯುತ್ತದೆ. ಆದರೆ ನಮ್ಮಲ್ಲಿ ಪದವಿ ನಂತರ ಈ ಬಗ್ಗೆ ಯೋಚಿಸುತ್ತಾರೆ. ನಮ್ಮ ಮನಸ್ಥಿತಿ ಬದಲಾಗಬೇಕು. ಕನ್ನಡಿಗರೂ ಈ ಪರೀಕ್ಷೆಗಳಲ್ಲಿ ಸಾಧನೆ ಮಾಡಬೇಕು ಎಂಬುದು ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಆಶಯ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು. ಸಮಯದ ಪರಿವೆಯೇ ಇಲ್ಲದಂತೆ ಓದಬೇಕು. ಪರೀಕ್ಷಾ ತಯಾರಿ ಅಂತರ್ಗತವಾಗಬೇಕು. ಮನಃಪೂರ್ವಕವಾಗಿ ಕಾಯಕ ಮಾಡಬೇಕು. ಇನ್‌ಸೈಟ್‌ನಂತಹ ಸಂಸ್ಥೆಗಳ ಪ್ರಯೋಜನ ಪಡೆಯಿರಿ. ಆನ್‌ಲೈನ್‌ನಲ್ಲಿ ಸಂಸ್ಥೆಯ ಅಧ್ಯಯನ ಸಾಮಗ್ರಿ ಉಚಿತವಾಗಿ ಲಭ್ಯವಿದ್ದು ಅದನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು. ದಾವಣಗೆರೆ ಜಿಲ್ಲೆಯ ಪ್ರತಿ ಮನೆಯಲ್ಲೂ ಒಬ್ಬ ಐಎಎಸ್ ಅಧಿಕಾರಿ ಇರಬೇಕು ಎಂಬ ಆಶಯ ಸಂಸ್ಥೆಯದು. ವಿನಯಕುಮಾರ್ ಅವರ ಕನಸಿಗೆ ಎಲ್ಲರೂ ನೀರೆರೆಯಬೇಕು ಎಂದು ಮನವಿ ಮಾಡಿದರು.
ಕನಸು ಬಿತ್ತುವ ವೇದಿಕೆ: ಜಿ.ಬಿ. ವಿನಯಕುಮಾರ್
ಬಡತನದ ಹಿನ್ನೆಲೆಯಿಂದ ಬಂದ ತಮ್ಮ ಬಾಲ್ಯದ ಬದುಕಿನ ಬಗ್ಗೆ ತಿಳಿಸುತ್ತಲೇ ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಕನಸನ್ನು ಇನ್‌ಸೈಟ್ಸ್ ಐಎಎಸ್ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯಕುಮಾರ್ ಬಿತ್ತಿದರು. ಕನಸು ಹೊತ್ತು ಬಂದವರಿಗೆ ಅದಕ್ಕೆ ಮಾರ್ಗದರ್ಶನ ನೀಡುವುದು. ಕನಸು ಕಾಣದಿದ್ದವರಿಗೆ ಕನಸನ್ನು ಬಿತ್ತುವುದು ಈ ಕಾರ್ಯಕ್ರಮದ ಉದ್ದೇಶ ಎಂದರು. ‘ತಂದೆ ತರುತ್ತಿದ್ದ ಪುಸ್ತಕಗಳನ್ನು ಓದುವ ಆಸಕ್ತಿ ನನ್ನಲ್ಲಿ ಸಾಧನೆ ಮಾಡುವ ಹಂಬಲ ತಂದಿತು’ ಎಂದ ಅವರು ‘ಸಾಹಿತ್ಯದ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ. ಇಂಗ್ಲಿಷ್ ಗೊತ್ತಿಲ್ಲ ಗ್ರಾಮೀಣ ಪ್ರದೇಶ ಎಂಬ ಕೀಳರಿಮೆ ಬೇಡ. ಬಡತನ ಇದ್ದರೂ ದೊಡ್ಡ ಕನಸು ಕಾಣಿ’ ಎಂದು ಸಲಹೆ ನೀಡಿದರು. ‘ನಿಮ್ಮಲ್ಲಿನ ಲೋಪಗಳನ್ನು ಗುರುತಿಸಿ ಅದನ್ನು ತೊಡೆದುಹಾಕಲು ಪ್ರಯತ್ನಿಸಬೇಕು. ವಿನಯತೆ ಇರಲಿ. ಜೀವನದಲ್ಲಿ ಅಡೆತಡೆ ಇದ್ದರೂ ಕನಸು ಕಂಡು ಸಾಕಾರಗೊಳಿಸುವ ಮನೋಭಾವ ಇರಲಿ’ ಎಂದು ಹುರಿದುಂಬಿಸಿದರು. ‘ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಸೋಲನ್ನು ಸವಾಲಾಗಿ ಸ್ವೀಕರಿಸಿ ಸೋಲು ಎದುರಿಸಿದಾಗಲೆಲ್ಲ ಗಟ್ಟಿತನ ಬರುತ್ತದೆ ಎಂದು ಕಿವಿಮಾತು ಹೇಳಿದರು. ತಾಲ್ಲೂಕು ಮಟ್ಟದಲ್ಲಿ ತರಬೇತಿ ಕೇಂದ್ರ: ಮುಂದಿನ ವರ್ಷದ ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ ಸಂಸ್ಥೆಯಿಂದ ತರಬೇತಿ ಕೇಂದ್ರ ಆರಂಭಿಸುವ ಗುರಿ ಇದ್ದು ಅದನ್ನು ದಾವಣಗೆರೆ ಜಿಲ್ಲೆಯಿಂದಲೇ ಆರಂಭಿಸಲಾಗುವುದು ಎಂದು ವಿನಯ್‌ಕುಮಾರ್ ತಿಳಿಸಿದರು.
ಲೋಕಸಭಾ ಚುನಾವಣೆ: ವಿನಯ್‌ಕುಮಾರ್ ಆಕಾಂಕ್ಷಿ
ಕಾರ್ಯಕ್ರಮದಲ್ಲಿ ಮಾತನಾಡಿದ ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಶಮಂತ್ ಗೌಡ ‘ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಮುಂಬರುವ ಲೋಕಸಭಾ ಚುನಾವಣೆಯ ಆಕಾಂಕ್ಷಿ. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ’ ಎಂದರು. ಇನ್‌ಸೈಟ್ಸ್ ಸಂಸ್ಥೆಯ ಮೂಲಕ ಹಲವು ಬದಲಾವಣೆ ತಂದ ಅವರು ರಾಜಕೀಯ ಕ್ಷೇತ್ರದಲ್ಲೂ ಹಲವು ಬದಲಾವಣೆ ಬಯಸಿ ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರದ ಸುಧಾರಣೆ ತರುವ ಹೆಬ್ಬಯಕೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅವರಿಗೆ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು. ಸಮಸ್ಯೆಗಳ ನೆಪ ಹೇಳದೇ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಿ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.