ADVERTISEMENT

ದಾವಣಗೆರೆ | ನ್ಯಾಯಾಧೀಶರೊಂದಿಗೆ ವೇದಿಕೆ ಹಂಚಿಕೊಳ್ಳದ ಎಚ್. ಆಂಜನೇಯ!

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 16:07 IST
Last Updated 7 ಆಗಸ್ಟ್ 2023, 16:07 IST
ಎಚ್‌.ಆಂಜನೇಯ
ಎಚ್‌.ಆಂಜನೇಯ   

ದಾವಣಗೆರೆ: ‘ಕೋವಿಡ್ ನಿಯಮ ಉಲ್ಲಂಘನೆ ಆರೋಪದಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಾರಣವನ್ನು ಮುಂದಿರಿಸಿದ ಮಾಜಿ ಸಚಿವ ಎಚ್. ಆಂಜನೇಯ, ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ನ್ಯಾಯಾಧೀಶರ ಜೊತೆ ವೇದಿಕೆ ಹಂಚಿಕೊಳ್ಳದೇ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಿದರು.

ಈಚೆಗೆ ನಿಧನರಾದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾಗಿದ್ದ ಸುನಂದಾ ದುರುಗೇಶ್ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಚ್‌.ಆಂಜನೇಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಹಿಮಾಚಲ ಪ್ರದೇಶ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ರಾಜೇಶ್ವರಿ ಹೆಗಡೆ ಅತಿಥಿಯಾಗಿ ಪಾಲ್ಗೊಂಡಿದ್ದರು.

ಸಭಿಕರ ಸಾಲಿನಲ್ಲಿ ಕುಳಿತಿದ್ದ ಆಂಜನೇಯ ಅವರು ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದಾಗ ನಿರಾಕರಿಸಿದರಲ್ಲದೆ, ಉದ್ಘಾಟನೆ ವೇಳೆ ವೇದಿಕೆಗೆ ಬಂದು ಮಾತನಾಡಿದರು. ‘ನನ್ನ ವಿರುದ್ಧ ದಾಖಲಾಗಿರುವ ಕೋವಿಡ್‌ ನಿಯಮ ಉಲ್ಲಂಘನೆಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭ ನ್ಯಾಯಾಧೀಶರ ಜೊತೆ ವೇದಿಕೆ ಹಂಚಿಕೊಂಡರೆ ತಪ್ಪಾಗುತ್ತದೆ. ಹಾಗಾಗಿ ನಾನು ವೇದಿಕೆ ಮೇಲೆ ಕೂರುವುದಿಲ್ಲ’ ಎಂದರು. ನಂತರ ಭಾಷಣ ಮಾಡಿ ಕಾರ್ಯಕ್ರಮದಿಂದ ನಿರ್ಗಮಿಸಿದರು.

ADVERTISEMENT

ಪ್ರಕರಣವೇನು?

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ 2022ರ ಜನವರಿ 9ರಿಂದ 10 ದಿನಗಳ ಕಾಲ ರಾಮನಗರದಿಂದ ಪಾದಯಾತ್ರೆ ಹಮ್ಮಿಕೊಂಡಿತ್ತು. ಆ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರೊಂದಿಗೆ ಎಚ್.ಆಂಜನೇಯ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.