ADVERTISEMENT

ಹಾಲಸ್ವಾಮಿ ಮಠ: ನೂತನ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ ಇಂದು

ಕಾಶಿ ಜಂಗಮವಾಡಿ ಮಠದ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀಗಳ ನೇತೃತ್ವ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 23:30 IST
Last Updated 19 ಫೆಬ್ರುವರಿ 2024, 23:30 IST
ನ್ಯಾಮತಿ ತಾಲ್ಲೂಕಿನ ಗೋವಿನಕೋವಿಯ ಹಾಲಸ್ವಾಮಿ ಬೃಹನ್ಮಠ 
ನ್ಯಾಮತಿ ತಾಲ್ಲೂಕಿನ ಗೋವಿನಕೋವಿಯ ಹಾಲಸ್ವಾಮಿ ಬೃಹನ್ಮಠ    

ಗೋವಿನಕೋವಿ (ನ್ಯಾಮತಿ): ಇಲ್ಲಿನ ಹಾಲಸ್ವಾಮಿ ಬೃಹನ್ಮಠಕ್ಕೆ ನೂತನ ಗುರುಗಳಾಗಿ ಶಿವಯೋಗಿ ವಿಶ್ವಾರಾಧ್ಯ ಹಾಲಸ್ವಾಮಿಜಿ ಅವರ ಪಟ್ಟಾಧಿಕಾರ ಮಹೋತ್ಸವ ಹಾಗೂ ಧರ್ಮ ಸಮಾರಂಭ ಫೆ.20, 21 ಮತ್ತು 22ರಂದು ಜರುಗಲಿದೆ.

ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದು, ಕಾಶಿ ಜಂಗಮವಾಡಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮತ್ತು ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಫೆ.20ರಂದು ಬೆಳಿಗ್ಗೆ ಗಂಗಾ ಪೂಜೆ, ಧ್ವಜಾರೋಹಣ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ, ನಾಂದಿ, ಗಣಪತಿ ಮಂಡಲಾರಾಧನೆ ಮತ್ತು ಗಣಹೋಮ, ಮಹಾಮಂಗಳಾರತಿ, ನವ ದುರ್ಗಾರಾಧನೆ, ಶ್ರೀಚಕ್ರ ಪೂಜೆ, ಸಂಕ್ಷಿಪ್ತ ದುರ್ಗಾ ಸಪ್ತಶತಿ ಪಾರಾಯಣ ನಡೆಯಲಿದೆ.

ADVERTISEMENT

ಸಂಜೆ ಧರ್ಮಸಭೆ ನಡೆಯಲಿದ್ದು, ವೀರಾಪುರ ಹಿರೇಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಿಯೋಜಿತ ಮಹಾಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ.

ಫೆ.21ರಂದು ಬೆಳಿಗ್ಗೆ ಗಣಪತಿಪೂಜೆ, ಉಮಾಮಹೇಶ್ವರ ಪಂಚಕಲಶ, ರುದ್ರ, ಮೃತ್ಯುಂಜಯ ಕಲಶ, ನವಗ್ರಹ ಪೂಜೆ, ಮೃತ್ಯುಂಜಯ ನಡೆಯಲಿದೆ. ಸಂಜೆ ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.

ಫೆ.22ರಂದು ಕಾಶಿ ಸ್ವಾಮೀಜಿ ಮತ್ತು ಹಿರೇಕಲ್ಮಠ ಶ್ರೀಗಳ ನೇತೃತ್ವದಲ್ಲಿ ನೂತನ ಶ್ರೀಗಳ ಕೇಶಮಂಡನ, ಹರಿದ್ರಾಲೇಪನ, ಮಸ್ತಕಾಭಿಷೇಕದ ಮಂಗಳಸ್ನಾನ, ಮಂತ್ರೋಪದೇಶ, ದಂಡ, ಕಮಂಡಲಾರಾಧನೆ ನಡೆಯಲಿದೆ. ಬಳಿಕ ನೂತನ ಸ್ವಾಮೀಜಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. ನಂತರ ಧರ್ಮಸಭೆ ನಡೆಯಲಿದೆ.

ರಾಂಪುರ ಹಾಲಸ್ವಾಮಿ ಮಠದ ಶಿವಕುಮಾರ ಸ್ವಾಮೀಜಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನೂತನ ಶ್ರೀಗಳಿಂದ ಧರ್ಮೋಪದೇಶ ನಡೆಯಲಿದ್ದು, ಸಂಸದ ಜಿ.ಎಂ. ಸಿದ್ದೇಶ್ವರ, ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಜನಪ್ರತಿನಿಧಿಗಳು, ಎಚ್.ಕೆ. ಬಸಪ್ಪ, ಬಸವರಾಜಪ್ಪ, ಎಚ್.ಬಿ. ಮಂಜಪ್ಪ, ಡಿ.ಜಿ. ವಿಶ್ವನಾಥ, ಗ್ರಾಮ ಪಂಚಾಯಿತಿ ಅಧ್ಯಕ್ಷ ದಾನೇಶ, ಜಂಗಮ ಸಮುದಾಯದ ಎಂ. ರೇವಣಸಿದ್ದಯ್ಯ,ಎಂ.ಪಂಚಾಕ್ಷರಯ್ಯ, ಸಾಧು ವೀರಶೈವ ಸಮುದಾಯದ ಜಿ. ಶಿವಪ್ಪ, ಎಚ್.ಎ. ಗದ್ದಿಗೆ, ಹಾಲಸ್ವಾಮಿ ಸೇವಾ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಿವಿಧ ಸಂಘಟನೆಗಳು, ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ.

ಹಾಲಸ್ವಾಮಿ ಸೇವಾ ಸಮಿತಿಯ ಪದಾಧಿಕಾರಿಗಳು ಗ್ರಾಮಸ್ಥರು, ಭಕ್ತರ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ರಮೇಶ, ಗೌರವಾಧ್ಯಕ್ಷ ಎಚ್. ಫಾಲಾಕ್ಷಪ್ಪಗೌಡ್ರು, ಕಾರ್ಯದರ್ಶಿ ವಿ.ಎಚ್.ರುದ್ರೇಶ, ಎ.ಸತೀಶ, ಜಿ.ವಿ. ರಮೇಶ, ಎಸ್.ಎಚ್. ಶಿವಮೂರ್ತಿ, ಬಿ.ರಾಜಪ್ಪ ತಿಳಿಸಿದರು.


ವಿಶ್ವಾರಾಧ್ಯ ಮಹಾಲಿಂಗ ಹಾಲ ಸ್ವಾಮೀಜಿ

ನೂತನ ಶ್ರೀಗಳ ಪರಿಚಯ ಲಿಂ. ಶಿವಯೋಗಿ ಸಣ್ಣ ಹಾಲ ಸ್ವಾಮೀಜಿ ಮತ್ತು ಜಯಮ್ಮ ದಂಪತಿಯ ಪುತ್ರ ಮಹಾಲಿಂಗ ಸ್ವಾಮಿ ಮರಿದೇವರು 1998ರ ಜೂನ್ 21ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಗ್ರಾಮದಲ್ಲಿ ನಂತರ ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪೂರೈಸಿದರು. ಸಾಗರ ತಾಲ್ಲೂಕಿನ ವೀರಾಪುರ ಹಿರೇಮಠದಲ್ಲಿ ಧಾರ್ಮಿಕ ಶಿಕ್ಷಣ ಜ್ಯೋತಿಷ್ಯ ವೇದಾಧ್ಯಯನ ಮಾಡಿದ್ದಾರೆ. ಫೆ.22ರಂದು ಕಾಶಿ ಜಗದ್ಗುರು ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಎಂಬ ನಾಮಧೇಯದೊಂದಿಗೆ ಪಟ್ಟಾಧಿಕಾರ ನೆರವೇರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.