ADVERTISEMENT

ಬದುಕಿನ ಬಂಡಿ ಸಾಗಿಸಲು ಬೇಕಿದೆ ದ್ವಿಚಕ್ರ ವಾಹನ!

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 6:33 IST
Last Updated 15 ಆಗಸ್ಟ್ 2023, 6:33 IST
ಮಂಜಮ್ಮ
ಮಂಜಮ್ಮ   

ಅನಿತಾ ಎಚ್.

ದಾವಣಗೆರೆ: ಟೈಲರಿಂಗ್‌ ವೃತ್ತಿ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ತಾಲ್ಲೂಕಿನ ಹದಡಿ ಗ್ರಾಮದ ಕೆ. ಮಂಜಮ್ಮ ಚಿಕ್ಕಂದಿನಿಂದಲೇ ಪೋಲಿಯೊಪೀಡಿತೆ. ಕೆಲಸ– ಕಾರ್ಯಗಳಿಗಾಗಿ ಅತ್ತಿಂದಿತ್ತ ಓಡಾಡಲು ಇವರಿಗೆ ದ್ವಿಚಕ್ರ ವಾಹನ (ಇನ್ನೆರಡು ಚಕ್ರಗಳು ಆಧಾರವಾಗಿರುವ)ದ ಅಗತ್ಯವಿದ್ದು, ನಾಲ್ಕೈದು ಬಾರಿ ಅರ್ಜಿ ಸಲ್ಲಿಸಿದ್ದರೂ ಸರ್ಕಾರದ ಯೋಜನೆಯ ನೆರವು ದೊರೆತಿಲ್ಲ.

ಪರಿಶಿಷ್ಟ ಜಾತಿಗೆ ಸೇರಿದ ಮಂಜಮ್ಮ ಅವರಿಗೆ ತಾಯಿ, ಇಬ್ಬರು ಸಹೋದರಿಯರು, ಸಹೋದರ ಇದ್ದಾರೆ. ಜೀವನ ಸಾಗಿಸಲು ಇವರಿಗೆ ತುಂಡು ಭೂಮಿಯೂ ಇಲ್ಲ. ಒಂದೂವರೆ ವರ್ಷದ ಮಗುವಾಗಿದ್ದಾಗಲೇ ಪೋಲಿಯೊ ಬಾಧಿಸಿ ಬಲಗಾಲು ಸ್ವಾಧೀನ ಕಳೆದುಕೊಂಡಿದ್ದರಿಂದ ತಾಯಿ ಮತ್ತು ತಮ್ಮನ ಜತೆಗೆ ವಾಸವಾಗಿದ್ದಾರೆ. ಸಹೋದರಿಯರಿಗೆ ವಿವಾಹವಾಗಿದ್ದು, ಸಹೋದರ ಕೂಲಿ ಕೆಲಸ ಮಾಡುತ್ತಾರೆ.

ADVERTISEMENT

ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ತ್ರಿಚಕ್ರ ವಾಹನ ಪಡೆಯಲು 2022–23ನೇ ಸಾಲಿನಲ್ಲಿ ಒಟ್ಟು 380 ಅರ್ಜಿ ಸಲ್ಲಿಸಿದ್ದಾರೆ. ಆದರೆ, 28 ಅರ್ಜಿದಾರರಿಗೆ ಮಾತ್ರ ಸರ್ಕಾರ ವಾಹನ ಮಂಜೂರು ಮಾಡಿದೆ. ಈ 28 ಜನರಲ್ಲೂ 2021–22ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದ 11 ಜನ ಅಂಗವಿಕಲರಿಗೆ ವಾಹನಗಳನ್ನು ನೀಡಬೇಕಿದ್ದು, ಮಿಕ್ಕ 17 ಜನರು ಮಾತ್ರವೇ ವಾಹನಗಳನ್ನು ಪಡೆಯಲು ಸಾಧ್ಯವಾಗಲಿದೆ. ಮಂಜಮ್ಮ ಅವರಂತೆ ಅದೆಷ್ಟೋ ಅಂಗವಿಕಲರು ಇಲಾಖೆ ನೆರವಿಗಾಗಿ ಚಾತಕಪಕ್ಷಿಗಳಂತೆ ಕಾಯಬೇಕಾಗಿದೆ.

ಅಂಗವಿಕಲರಿಗೆ ಸರ್ಕಾರ ಅಗತ್ಯ ಅನುಕೂಲಕರ ವಾಹನ ಒದಗಿಸಬೇಕು. ಅಸಹಾಯಕರು ಸೌಲಭ್ಯಗಳಿಗಾಗಿ ಅಲೆದಾಡುವ ದುಃಸ್ಥಿತಿ ಇರಬಾರದು.
ಬಲ್ಲೂರು ರವಿಕುಮಾರ್‌, ರಾಜ್ಯ ಕಾರ್ಯದರ್ಶಿ, ರೈತ ಸಂಘ ಹಸಿರು ಸೇನೆ

‘ಬಲಗಾಲಿನ ಸ್ವಾಧೀನ ಇಲ್ಲದ ಕಾರಣ ಪವರ್‌ ಮಷಿನ್‌ನಲ್ಲಿ ಟೈಲರಿಂಗ್‌ ಮಾಡುತ್ತಿದ್ದೇನೆ. ಈಚೆಗೆ ಬೆನ್ನುನೋವು ಹೆಚ್ಚಿದೆ. ಸಹೋದರಿ ಸಹಾಯ ಮಾಡುತ್ತಾಳೆ. ವಾಹನವಿಲ್ಲದ ಕಾರಣ ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ಬಸ್‌ ನಿಲ್ದಾಣದವರೆಗೆ, ಮಾರುಕಟ್ಟೆಗೆ ನಡೆದುಕೊಂಡೇ ಹೋಗಬೇಕಿದೆ. ಇದರಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ. ವಾಹನವಿದ್ದರೆ ವಸ್ತುಗಳ ಖರೀದಿ ಸುಲಭ ಎಂದು ಇಲಾಖೆಗೆ ಐದಾರು ಸಲ ಅರ್ಜಿ ಸಲ್ಲಿಸಿದ್ದೇನೆ. ಆದರೂ ವಾಹನ ಸಿಕ್ಕಿಲ್ಲ’ ಎಂದು ಮಂಜಮ್ಮ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಪ್ರಸಕ್ತ ಸಾಲಿನಲ್ಲಿ ಮಂಜೂರಾಗಿರುವ 28 ವಾಹನಗಳಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಇಬ್ಬರಿಗೆ ಮಾತ್ರ ವಿತರಿಸಲು ಸಾಧ್ಯವಾಗಿದೆ. ಮಂಜಮ್ಮ ಅವರಿಗೆ ಮುಂದಿನ ವರ್ಷ ವಾಹನ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.
ಕೆ.ಪ್ರಕಾಶ್‌ ಅಡಿಗ, ಜಿಲ್ಲಾ ಅಧಿಕಾ,ರಿ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ

‘ವಾಹನಕ್ಕಾಗಿ ಅರ್ಜಿ ಸಲ್ಲಿಸಿ, ಸೌಲಭ್ಯ ಸಿಗದಿದ್ದಾಗ ಕಚೇರಿಗೆ ಹೋಗಿ ಅಧಿಕಾರಿಗಳನ್ನು ವಿಚಾರಿಸಿದ್ದೇನೆ. ಆದರೆ, ಸರ್ಕಾರ ವಾಹನ ಮಂಜೂರು ಮಾಡಬೇಕಿದೆ. ನಾವು ಕೈಯಿಂದ ಕೊಡಲು ಆಗದು ಎಂದು ಅಧಿಕಾರಿಗಳು ಉತ್ತರಿಸಿದ್ದಾರೆ. ಒಮ್ಮೆ ಸ್ಥಳೀಯ ಶಾಸಕರಿಂದ ಶಿಫಾರಸು ಪತ್ರ ತರುವಂತೆ ಹೇಳಿದ್ದರು. ಒಂದು ಬಾರಿ ಶಿಫಾರಸು ಪತ್ರ ನೀಡಿದ್ದೆ. ಮತ್ತೊಮ್ಮೆ ಪತ್ರಕ್ಕಾಗಿ ಶಾಸಕರ ಮನೆಗೆ ಹೋಗಿದ್ದೆ. ಅವರು ಸಿಗದ ಕಾರಣ ಪತ್ರ ನೀಡಲು ಸಾಧ್ಯವಾಗಲಿಲ್ಲ. ವಾಹನ ಸಿಕ್ಕರೆ ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳಬಹುದು. ಕುಟುಂಬಕ್ಕೂ ಸಹಾಯವಾಗುತ್ತದೆ. ತಮ್ಮನ ಕೂಲಿಯಲ್ಲಿಯೇ ಜೀವನ ಸಾಗಿಸುವುದು ಕಷ್ಟವಾಗಿದೆ. ನನ್ನಂತೆ ಅಗತ್ಯವಿರುವ ಎಲ್ಲರಿಗೂ ವಾಹನ ಸೌಲಭ್ಯವನ್ನು ಸಕಾಲಕ್ಕೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಕೋರಿದರು.

ಮಂಜಮ್ಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.