ಚನ್ನಗಿರಿ: ತಾಲ್ಲೂಕಿನ ಉಬ್ರಾಣಿ ಹೋಬಳಿಯ ಹನುಮಲಾಪುರದಿಂದ ತಾವರೆಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದು ಸಂಪೂರ್ಣ ಹಾಳಾಗಿದ್ದು, ಶೀಘ್ರ ದುರಸ್ತಿ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹನುಮಲಾಪುರ ಕುಗ್ರಾಮವಾಗಿದ್ದು ರಸ್ತೆ ಸರಿ ಇಲ್ಲದ ಕಾರಣ ಜನರು ಕೆಲಸ ಕಾರ್ಯಗಳಿಗೆ ಬೇರೆಡೆ ಹೋಗಲು ಪ್ರಯಾಸಪಡಬೇಕಾಗಿದೆ. ಗ್ರಾಮದ ಶಾಲಾ ಮಕ್ಕಳು, ರೈತರು ತಮ್ಮ ಕೆಲಸ ಕಾರ್ಯಗಳಿಗಾಗಿ ತೆರಳಲು ಈ ರಸ್ತೆ ಬಿಟ್ಟರೆ ಬೇರೆ ಮಾರ್ಗ ಇಲ್ಲ. ಬೇರೆ ಮಾರ್ಗದಲ್ಲಿ ಹೋಗಬೇಕೆಂದರೆ 7ರಿಂದ 8 ಕಿ.ಮೀ. ಹೆಚ್ಚುವರಿಯಾಗಿ ಪ್ರಯಾಣಿಸಬೇಕು. ಸ್ವಂತ ವಾಹನ ಸೌಲಭ್ಯ ಇಲ್ಲದವರು ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿದೆ.
ರಸ್ತೆ ಬದಿಯಲ್ಲಿ ಯಥೇಚ್ಛ ಪ್ರಮಾಣದಲ್ಲಿ ಗಿಡಮರಗಳು ಬೆಳೆದು ನಿಂತಿವೆ. ಅರಣ್ಯ ಪ್ರದೇಶವಾಗಿರುವುದರಿಂದ ಕಾಡುಪ್ರಾಣಿಗಳ ಕಾಟ. ತಾವರೆಕೆರೆ ಗ್ರಾಮದ ರೈತರ ತೋಟಗಳು ಈ ಭಾಗದಲ್ಲಿ ಹೆಚ್ಚಾಗಿದ್ದು, ಅಡಿಕೆ ಹಾಗೂ ತೆಂಗಿನ ಕೊಯ್ಲು ಮಾಡಲು ಇದೇ ರಸ್ತೆಯಲ್ಲಿ ತೆರಳಬೇಕಿದೆ. ರಸ್ತೆ ಅತ್ಯಂತ ಕಿರಿದಾಗಿದ್ದು, ಎದುರಿನಿಂದ ವಾಹನ ಬಂದರೆ ಮತ್ತೊಂದು ವಾಹನ ಸಾಗಲು ತೊಂದರೆ ಅನುಭವಿಸುವಂತಾಗಿದೆ.
ರಸ್ತೆ ದುರಸ್ತಿ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಈಗಾಗಲೇ ಹಲವು ಸಲ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯು ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಸೇರಿದ್ದು, ದುರಸ್ತಿ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಅನುದಾನ ಬಂದಿಲ್ಲ ಎಂದು ಹೇಳುತ್ತಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸಿ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಹನುಮಲಾಪುರ ಗ್ರಾಮದ ವಾಸಿ ವೆಂಕಟೇಶ್ ಒತ್ತಾಯಿಸಿದ್ದಾರೆ.
ಸಮಸ್ಯೆಯ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಭಾರ ಎಇಇ ಜಿ.ಎಂ. ಲೋಹಿತ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.