ಹರಪನಹಳ್ಳಿ: ಆರ್‌ಟಿಐ ಕಾರ್ಯಕರ್ತ ಟಿ. ಶ್ರೀಧರ್ ಹತ್ಯೆಗೆ ಕುಮ್ಮಕ್ಕು ನೀಡಿರುವ ಪ್ರಭಾವಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ವೇದಿಕೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನೆ ಮೆರವಣಿಗೆ ಮಿನಿವಿಧಾನ ಸೌದಕ್ಕೆ ತೆರಳಿ, ತಹಶೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಮುಖಂಡ ಹೊಸಳ್ಳಿ ಮಲ್ಲೇಶ್ ಮಾತನಾಡಿ, ‘ಶ್ರೀಧರ್ ಅವರನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿರುವುದು ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಅವರ ಪತ್ನಿ ನೀಡಿರುವ ದೂರಿನಂತೆ ಪ್ರಭಾವಿಗಳಾಗಿರುವ ಪಿ.ಟಿ. ಪರಮೇಶ್ವರನಾಯ್ಕ ಮತ್ತು ಅವರ ಪುತ್ರ ಪಿ.ಟಿ. ಭರತ್ ಅವರನ್ನೂ ಕೂಡಲೇ ಬಂಧಿಸಿ ಸೂಕ್ತ ತನಿಖೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.
ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಟಿ.ವಿ. ರೇಣುಕಮ್ಮ ಮಾತನಾಡಿ, ‘ಶ್ರೀಧರ್ ಹತ್ಯೆ ಆರೋಪಿಗಳು ಎಷ್ಟೇ ಪ್ರಭಾವಿಗಳಿರಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಸಾಕ್ಷಿಗಳನ್ನು ನಾಶಮಾಡುವ ಸಾಧ್ಯತೆ ಇರುವುದರಿಂದ ಪ್ರಕರಣದ ತನಿಖೆ ಚುರುಕುಗೊಳಿಸಬೇಕು. ಶ್ರೀಧರ್ ಅವರು ಸಲ್ಲಿಸಿದ್ದ ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನಗಳಿಗೆ ಕಡಿವಾಣ ಹಾಕಿ, ತನಿಖೆಗೆ ಆದೇಶಿಸಬೇಕು. ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕು
ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪದ್ಮಾವತಿ, ಗುಡಿಹಳ್ಳಿ ಹಾಲೇಶ್, ಆರ್. ಗೋಣೆಪ್ಪ, ಎ.ಡಿ. ದ್ವಾರಕೀಶ್, ಪ್ರಕಾಶ್, ರಹಮತ್ ಉಲ್ಲಾ, ಅಂಜಿನಮ್ಮ, ತಿರುಕಮ್ಮ, ಶಬ್ಬೀರ್, ಅಂಜಿನಪ್ಪ, ಸಿದ್ದಲಿಂಗಮ್ಮ, ಬಸವರಾಜ್,ಶಾಹಿದಾ ಬೇಗಂ ಅವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.