ADVERTISEMENT

ಭಾನುವಳ್ಳಿ: ನಾಮಫಲಕ ತೆರವಿಗೆ 10 ದಿನ ಗಡುವು

ಜಿಲ್ಲಾಧಿಕಾರಿ, ಎಸ್‌ಪಿ, ಗ್ರಾಮ ಪಂಚಾಯಿತಿಗೆ ಹಾಲುಮತ ಸಮುದಾಯ ಮನವಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 6:18 IST
Last Updated 18 ಫೆಬ್ರುವರಿ 2024, 6:18 IST
ಕಡರನಾಯ್ಕನಹಳ್ಳಿ ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ವೃತ್ತಗಳಲ್ಲಿ ಅನಧಿಕೃತ ನಾಮಫಲಕಗಳನ್ನು ತೆರವುಗೊಳಿಸಲು ಆಗ್ರಹಿಸಿ ಹಾಲುಮತ ಸಮಾಜದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು
ಕಡರನಾಯ್ಕನಹಳ್ಳಿ ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ವೃತ್ತಗಳಲ್ಲಿ ಅನಧಿಕೃತ ನಾಮಫಲಕಗಳನ್ನು ತೆರವುಗೊಳಿಸಲು ಆಗ್ರಹಿಸಿ ಹಾಲುಮತ ಸಮಾಜದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು   

ಕಡರನಾಯ್ಕನಹಳ್ಳಿ: ಗ್ರಾಮದ ಹಲವು ವೃತ್ತಗಳಲ್ಲಿ ವಿವಿಧ ನಾಯಕರ ಹೆಸರಿನಲ್ಲಿ ಹಾಕಲಾಗಿರುವ ನಾಮಫಲಕಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮದ ಹಾಲುಮತ ಸಮುದಾಯದ ಮುಖಂಡರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು. 

ಭಾನುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೂ ಮನವಿ ಸಲ್ಲಿಸಿರುವ ಮುಖಂಡರು, ಹತ್ತು ದಿನಗಳೊಳಗೆ ತೆರವುಗೊಳಿಸದಿದ್ದಲ್ಲಿ ಗ್ರಾಮ ಪಂಚಾಯಿತಿ ಎದುರು ಧರಣಿ ಹಮ್ಮಿಕೊಳ್ಳುವುದಾಗಿ ಗಡುವು ನೀಡಿದ್ದಾರೆ. 

ಭಾನುವಳ್ಳಿ ಗ್ರಾಮದಲ್ಲಿ ಈ ಹಿಂದೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮಾಡಲಾಗಿತ್ತು. ಅದರ ಸಮೀಪದಲ್ಲಿ ಮದಕರಿ ನಾಯಕ ವೃತ್ತವಿದೆ ಎಂಬ ಕಾರಣಕ್ಕೆ ರಾಯಣ್ಣ ಪ್ರತಿಮೆಯನ್ನು ತೆರವುಗೊಳಿಸಬೇಕು ಎಂದು ವಾಲ್ಮೀಕಿ ಸಮುದಾಯದ ಸದಸ್ಯರು ಅಹೋರಾತ್ರಿ ರಾತ್ರಿ ಧರಣಿ ಹಮ್ಮಿಕೊಂಡಿದ್ದರು. ಹೀಗಾಗಿ, ಜನವರಿ 23ರಂದು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪೊಲೀಸ್ ಬಂದೋಬಸ್ತ್ ಅಡಿಯಲ್ಲಿ ರಾಯಣ್ಣನ ಮೂರ್ತಿಯನ್ನು ತೆರವುಗೊಳಿಸಿ, ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಆದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇತ್ತು. ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ, ಅಲ್ಲಿ ಈಗಲೂ ಪೊಲೀಸ್ ಬಂದೋಬಸ್ತ್ ಜಾರಿಯಲ್ಲಿದೆ.  

ADVERTISEMENT

ಇದೀಗ ವಿವಾದಕ್ಕೆ ಮತ್ತೆ ಜೀವ ಬಂದಿದೆ. ನೂರಾರು ಸಂಖ್ಯೆಯ ಹಾಲುಮತ ಸಮಾಜದ ಮುಖಂಡರು ಎಸ್‌ಪಿ ಉಮಾ ಪ್ರಶಾಂತ್, ಜಿಲ್ಲಾಧಿಕಾರಿ ಎಂ.ವಿ ವೆಂಕಟೇಶ್ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದು, ಹೋರಾಟದ ಮುನ್ಸೂಚನೆ ನೀಡಿದ್ದಾರೆ. 

‘ಗ್ರಾಮದಲ್ಲಿ ಒಂದೇ ಜಾತಿಯ ಜನರಿಲ್ಲ. ಅನೇಕ ಜಾತಿಗಳ ಜನರು ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದಾರೆ. ಎಲ್ಲ ವೃತ್ತಗಳು ಮತ್ತು ರಸ್ತೆಗಳಿಗೆ ಅನಧಿಕೃತವಾಗಿ ನಾಮಕರಣ ಮಾಡಲಾಗಿದೆ. ಇದಕ್ಕೆ ಯಾವ ಪ್ರಾಧಿಕಾರದ ಅನುಮತಿಯನ್ನೂ ಪಡೆದಿಲ್ಲ. ಇಂತಹವುಗಳನ್ನು ತೆರವುಗೊಳಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕನ್ನಪ್ಪ ಆಗ್ರಹಿಸಿದ್ದಾರೆ. 

‘ಎಲ್ಲ ದಾಖಲೆಗಳನ್ನು ಪರಿಶೀಲಿಸುತ್ತೇವೆ. ಗ್ರಾಮದಲ್ಲಿ ಸಾಮರಸ್ಯ ಮುಖ್ಯ. ನಿಮ್ಮ ಬೇಡಿಕೆಯನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಭರವಸೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ಪಾಟೀಲ್, ಮುಖಂಡರಾದ ಎಚ್.ಎಸ್. ಕರಿಯಪ್ಪ, ಬಿ.ಎಂ. ಕೆಂಚಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರಪ್ಪ, ರೇವಣಸಿದ್ದಪ್ಪ, ಹೇಮಂತರಾಜು ಸಿಎಸ್ ಮತ್ತು ಹಾಲುಮತ ಸಮಾಜದ ನೂರಾರು ಜನರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.