ADVERTISEMENT

ಹರಿಹರ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಬೀರೂರು– ಸಮ್ಮಸಗಿ ಹೆದ್ದಾರಿ ಕಾಮಗಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 14:26 IST
Last Updated 8 ಡಿಸೆಂಬರ್ 2023, 14:26 IST
ಹರಿಹರದ ಬೀರೂರು– ಸಮ್ಮಸಗಿ ಹೆದ್ದಾರಿ ಕಾಮಗಾರಿ ಕೈಗೊಳ್ಳಲು ಆಗ್ರಹಿಸಿ ಜಯ ಕರ್ನಾಟಕ ಹಾಗೂ ವಿವಿದ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಹರಿಹರ ಬಂದ್ ನಿಮಿತ್ತ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಹರಿಹರದ ಬೀರೂರು– ಸಮ್ಮಸಗಿ ಹೆದ್ದಾರಿ ಕಾಮಗಾರಿ ಕೈಗೊಳ್ಳಲು ಆಗ್ರಹಿಸಿ ಜಯ ಕರ್ನಾಟಕ ಹಾಗೂ ವಿವಿದ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಹರಿಹರ ಬಂದ್ ನಿಮಿತ್ತ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು    

ಹರಿಹರ: ಇಲ್ಲಿನ ಬೀರೂರು– ಸಮ್ಮಸಗಿ ಹೆದ್ದಾರಿ ಕಾಮಗಾರಿ ಆರಂಭಿಸಲು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ವಿವಿಧ 15 ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಗಾಂಧಿ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು ಕೂಡಲೇ ಬೀರೂರು– ಸಮ್ಮಸಗಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಘೊಷಣೆ ಕೂಗುತ್ತ ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು.

ನಗರದಲ್ಲಿ ಹಲವು ವ್ಯಾಪಾರಿಗಳು ಅಂಗಡಿ, ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ್ದರೆ, ಇನ್ನೂ ಕೆಲವರು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದರು.

ADVERTISEMENT

ಶಾಲೆ, ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಸರ್ಕಾರಿ ಕಚೇರಿ, ಬ್ಯಾಂಕ್‌, ಹಣಕಾಸು ಸಂಸ್ಥೆಗಳಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸಿದರೂ ಸಾರ್ವಜನಿಕರ ಸಂಖ್ಯೆ ಕಡಿಮೆ ಇತ್ತು. ಬಸ್ ವಾಹನ ಸಂಚಾರ ಎಂದಿನಂತಿತ್ತು. ಆದರೆ, ಸದಾ ಜನರಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕ ಸಂಖ್ಯೆ ಕಡಿಮೆ ಇತ್ತು.

ಬೆಳಿಗ್ಗೆಯಿಂದಲೇ ಜಯ ಕರ್ನಾಟಕ ಸಂಘಟನೆ ಸೇರಿದಂತೆ ಇತರೆ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಅಂಗಡಿಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದರು.

‘13 ದಿನಗಳಿಂದ ಧರಣಿ ಮಾಡುತ್ತಿದ್ದರೂ ಅಧಿಕಾರಿಗಳು ಇಂದು, ನಾಳೆ ಎಂದು ಸಮಯ ತಳ್ಳಿದ್ದು ಬಿಟ್ಟರೆ ರಸ್ತೆಯ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ಅನಿವಾರ್ಯವಾಗಿ ಇಂದು ಬಂದ್‌ ಕರೆ ನೀಡಲಾಗಿತ್ತು’ ಎಂದು ಜಯ ಕರ್ನಾಟಕ ಸಂಘಟನೆಯ ಎಸ್.ಗೋವಿಂದ ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಗುರುಬಸವರಾಜ್ ಹಾಗೂ ಪಿಡಬ್ಲ್ಯುಡಿ ಎಇಇ ಕೆ.ಶಿವಮೂರ್ತಿ, ‘ಶಾಸಕರು ಬಂದ ತಕ್ಷಣ ಸಭೆ ಮಾಡಿ ಸೋಮವಾರ ರಸ್ತೆ ದುರಸ್ತಿ ಕಾರ್ಯ ಆರಂಭಿಸುತ್ತೇವೆ’ ಎಂದು ಭರವಸೆ ನೀಡಿದರು.

ಟಿಪ್ಪು ಸುಲ್ತಾನ್ ಸೇನೆಯ ಅಧ್ಯಕ್ಷ ಸಿಕಂದರ್ ಧರ್ವೇಷ್, ಅಂಬೇಡ್ಕರ್ ಸಾರ್ವಜನಿಕ ಸೇವಾ ಸಮಿತಿ ಅಧ್ಯಕ್ಷ ಕೊಟ್ರೇಶ್, ಕರವೇ (ನಾರಾಯಣಗೌಡ ಬಣ) ಗೌರವಾಧ್ಯಕ್ಷ ಬಿ.ಮುಗ್ದುಮ್, ರುದ್ರಗೌಡ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕೊಪ್ಪಳದ ಮಂಜುನಾಥ್, ಮಾರುತಿ ಆಟೊ ನಿಲ್ದಾಣ ಚಾಲಕರ ಸಂಘದ ಅಧ್ಯಕ್ಷ ತಿಪ್ಪೇಶಿ, ಎಎಪಿ ನಗರ ಘಟಕದ ಅಧ್ಯಕ್ಷ ಮಲ್ಲೇಶ್, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಅಣ್ಣಪ್ಪ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಮೊಹ್ಮದ್ ಇಲಿಯಾಸ್, ಎಂ.ಮಂಜುನಾಥ್, ಷಬ್ಬೀರ್ ಅಹ್ಮದ್, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ, ಶ್ರೀನಿವಾಸ್ ಕೊಡ್ಲಿ, ದಲಿತ ಮುಖಂಡ ಪೈ ಹನುಮಂತಪ್ಪ, ಶಶಿ ನಾಯ್ಕ, ರಾಮಪ್ಪ, ಸಮರ ಸೇನೆಯ ಭಾಗ್ಯದೇವಿ, ಜಿ.ಮಂಜುನಾಥ್, ಅಲ್ತಾಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.