ಹರಿಹರ: ಹಣ್ಣಿನ ರಾಜ ಮಾವು ಬಂತು ದಾರಿ ಬಿಡಿ ಎಂಬಂತೆಯೇ, ಈಗ ಸಮುದ್ರದ ರಾಜ ಬಾಂಗ್ಡಾ ಮೀನು ಬಂತು ದಾರಿ ಬಿಡಿ ಎನ್ನಬೇಕಾಗಿದೆ.
ಹೌದು, ಈಗ ಬಾಂಗ್ಡಾ ಮೀನಿನ ಋತು ಆರಂಭವಾಗಿದೆ. ಮಾಂಸಾಹಾರಿಗಳಿಗೆ ಹಾಗೂ ಮೀನು ಪ್ರಿಯರಿಗೆ ಮೀನಿನ ರುಚಿ ಸವಿಯಲು ಇದು ಸುಸಮಯ.
ಪ್ರತಿ ವರ್ಷದಂತೆ ಆಗಸ್ಟ್ 15ರಿಂದ ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಆರಂಭವಾಗಿದೆ. ಹೀಗಾಗಿ ಒಳನಾಡಿನ ಜನರಿಗೂ ಈಗ ಕಡಿಮೆ ದರದಲ್ಲಿ ಯತೇಚ್ಛ ‘ಸೀ ಫುಡ್’ ದೊರೆಯುತ್ತಿದೆ. ಈ ಋತು ಬಿಟ್ಟು ಬೇರೆ ಸಮಯದಲ್ಲೂ ಸಮುದ್ರದ ಮೀನುಗಳು ಒಳನಾಡಿನ ಮಾರುಕಟ್ಟೆಗಳಲ್ಲಿ ಲಭ್ಯ ಇರುತ್ತಾದರೂ, ಆಗ ಎರಡರಿಂದ ಮೂರು ಪಟ್ಟು ದರ ಇರುತ್ತದೆ.
ದಾವಣಗೆರೆಯ ಅರುಣಾ ಟಾಕೀಸ್ ಎದುರಿನ ಪಶು ಆಸ್ಪತ್ರೆ ಹಿಂಭಾಗ ಹಾಗೂ ಡಾಂಗೆ ಪಾರ್ಕ್ ಮೀನಿನ ಮಾರುಕಟ್ಟೆಯಲ್ಲಿರುವ ನಾಲ್ವರು ಸಗಟು ಮೀನಿನ ವ್ಯಾಪಾರಿಗಳೀಗ ಸಮುದ್ರದ ಮೀನುಗಳನ್ನು ತರಿಸಿ ಮಾರಾಟ ಮಾಡುವುದರಲ್ಲಿ ನಿರತರಾಗಿದ್ದಾರೆ.
ದಾವಣಗೆರೆಯ ಈ ವ್ಯಾಪಾರಿಗಳು ಪ್ರತಿ ದಿನ ಅಂದಾಜು 20 ಟನ್ ಬಾಂಗ್ಡಾ ಮೀನು ತರಿಸುತ್ತಿದ್ದು, ಹಾಟ್ ಕೇಕ್‌ನಂತೆ ಖರ್ಚಾಗುತ್ತಿವೆ. ಜಿಲ್ಲೆಯ ಹರಿಹರ, ಜಗಳೂರು, ಚನ್ನಗಿರಿ, ವಿಜಯನಗರ ಜಿಲ್ಲೆಯ ಹರಪನಹಳ್ಳಿ ಸೇರಿದಂತೆ ನಾನಾ ಕಡೆಯ ವ್ಯಾಪಾರಿಗಳು ಇಲ್ಲಿ ಖರೀದಿಸಿ ಮಾರಾಟ ಮಾಡುತ್ತಿದ್ದಾರೆ.
ಬಾಂಗ್ಡಾ ಮೀನುಗಳನ್ನು ಒಂದು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಓಣಿ, ಓಣಿಗಳಲ್ಲಿ ಸುತ್ತಾಡುತ್ತಾ ಮಾರಾಟ ಮಾಡಲಾಗುತ್ತಿದೆ. 30 ರಿಂದ 40 ಕೆಜಿಯಷ್ಟು ಮೀನು 2–3 ಗಂಟೆಗಳಲ್ಲಿ ಬಿಕರಿಯಾಗುತ್ತವೆ.
ಬಾಂಗ್ಡಾ ಮೀನಿನ ಸೀಸನ್ ಆರಂಭವಾಯಿತೆಂದರೆ ಕೆ.ಜಿ.ಗೆ ₹750 ಬೆಲೆಯ ಮಟನ್, ₹200 ಬೆಲೆಯ ಚಿಕನ್ ಮಾರಾಟ ಕೆಲ ಮಟ್ಟಿಗೆ ತಗ್ಗುತ್ತದೆ. ಈ ಸೀಸನ್‌ನಲ್ಲಿ ಮಾಂಸಾಹಾರಿಗಳ ಮನೆಗಳಲ್ಲಿ ಅಷ್ಟೆ ಅಲ್ಲ, ಮಾಂಸಾಹಾರಿ ಹೋಟೆಲ್, ಡಾಬಾಗಳಲ್ಲಿಯೂ ಗ್ರಾಹಕರ ಇಷ್ಟವಾದ ಆಹಾರವಾಗಿ ಬಾಂಗ್ಡಾ ಮೀನು ಮಾರಾಟವಾಗುತ್ತಿದೆ.
ಸಮುದ್ರದ ಮೀನಿನ ರುಚಿ, ಅದರಲ್ಲಿರುವ ಔಷಧೀಯ ಗುಣಗಳನ್ನು ಅರಿತವರು ಈ ಋತುವಿನಲ್ಲಿ ತಥೇಚ್ಛವಾಗಿ ಸೇವಿಸುತ್ತಾರೆ. ಬಾಂಗ್ಡಾ ಮೀನಿನ ದರ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹150ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಕೈಗೆಟಕುವ ದರ ಇರುವುದರಿಂದ ಬಡವರೂ ಖರೀದಿ ಮಾಡುತ್ತಿದ್ದಾರೆ.
ಬಾಂಗ್ಡಾ ಮೀನಿನಲ್ಲಿದೆ ಒಮೆಗಾ-3
ಬಾಂಗ್ಡಾ ಮೀನಿನಲ್ಲಿರುವ ವಿಟಮಿನ್ ಪ್ರೊಟೀನ್ ನ್ಯುಟ್ರಿಷಿಯಂಟ್ಸ್ ಇತರೆ ಪೋಷಕಾಂಶಗಳು ಮನುಷ್ಯನ ಹೃದಯ ಮಿದುಳು ಮೂಳೆ ಶ್ವಾಸಕೋಶ ಕರುಳು ಚರ್ಮ ಸಮಸ್ಯೆ ದೃಷ್ಟಿ ದೋಷಗಳನ್ನು ನಿವಾರಿಸುತ್ತವೆ. ಸಮುದ್ರದ ಎಲ್ಲ ಮೀನುಗಳಲ್ಲಿ ಸಾಮಾನ್ಯವಾಗಿ ಒಮೆಗಾ-3 ತೈಲದ ಅಂಶ ಇರುತ್ತದೆ. ಅದೇ ರೀತಿ ಬಾಂಗ್ಡಾದಲ್ಲಿಯೂ ಇದೆ. ಈ ಸೀಸನ್‌ನಲ್ಲಿ ಅತ್ಯಂತ ಕಡಿಮೆ ದರಕ್ಕೆ ಅಂದರೆ ಮೋಸಂಬಿ ಸೇಬು ಹಣ್ಣಿನ ದರದಲ್ಲಿ ಇದು ಲಭ್ಯವಾಗುತ್ತಿದೆ. ಹೀಗಾಗಿ ಈಗ ನಿಯಮಿತವಾಗಿ ಇದರ ಸೇವನೆ ಒಳ್ಳೆಯದು. ಇದಲ್ಲಿರುವ ಐಯೋಡಿನ್ ಸೆಲೆನಿಯಮ್ ಜಿಂಕ್ ಪೊಟಾಶಿಯಮ್‌ನಿಂದಾಗಿ ಅಸ್ತಮಾ ಥೈರಾಯ್ಡ್ ಪೀಡಿತರಿಗೆ ಇದು ದಿವೌಷಧಿಯಾಗಿದೆ ಎಂದು ಇಲ್ಲಿನ ಮೀನುಗಾರಿಕೆ ಇಲಾಖೆ ಸಹಾಯಕ ನಿದೇಶಕ ಶಶಿಕುಮಾರ್ ಬಿ.ಎನ್. ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.