ಹರಿಹರ: ಒಂದೆಡೆ ಕೊಬ್ಬರಿ ದರ ಇಳಿಕೆಯ ಹೊಡೆತ, ಇನ್ನೊಂದೆಡೆ ತೆಂಗಿಗೆ ಕಪ್ಪುತಲೆ ಹುಳುಬಾಧೆ ಎದುರಾಗಿದ್ದು, ತಾಲ್ಲೂಕಿನ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಭತ್ತ, ಮೆಕ್ಕೆಜೋಳ, ಅಡಿಕೆ, ಎಲೆಬಳ್ಳಿಯ ನಡುವೆ ತೆಂಗು ತಾಲ್ಲೂಕಿನ ಪ್ರಮುಖ ಬೆಳೆ. ತಾಲ್ಲೂಕಿನಲ್ಲಿ 4787 ಎಕರೆ ತೆಂಗು ಬೆಳೆ ಪ್ರದೇಶವಿದ್ದು, ಈ ಪೈಕಿ 2000 ಎಕರೆ ಪ್ರದೇಶದ ಬೆಳೆಗೆ ಕಪ್ಪುತಲೆ ಹುಳು ಬಾಧೆ ಕಾಡುತ್ತಿದೆ. ರೋಗದಿಂದ ಶೇ 40ರಷ್ಟು ಇಳುವರಿ ಕುಸಿದಿದ್ದು, ರೈತರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ತಾಲ್ಲೂಕಿನ ಹೊಳೆಸಿರಿಗೆರೆ, ಕಡರನಾಯಕನಹಳ್ಳಿ, ಹೊಸಪಾಳ್ಯ, ಹಳೆ ಪಾಳ್ಯ, ಬನ್ನಿಕೋಡು, ಹಲಸಬಾಳು ಮತ್ತು ಹನಗವಾಡಿ ಗ್ರಾಮಗಳ ಸುತ್ತಲಿ ಪ್ರದೇಶಗಳಲ್ಲಿ ತೆಂಗು ಬೆಳೆಯಲಾಗುತ್ತದೆ. ಉಳಿದಂತೆ ಇತರೆ ಗ್ರಾಮಗಳಲ್ಲೂ ಅಲ್ಪ, ಸ್ವಲ್ಪ ಪ್ರಮಾಣದಲ್ಲಿ ತೆಂಗಿನ ಬೆಳೆ ಇದೆ.
‘ನನ್ನ ಎರಡೂವರೆ ಎಕರೆ ತೆಂಗಿನ ತೋಟದಲ್ಲಿ ಈ ಮುಂಚೆ ಎರಡೂವರೆ ತಿಂಗಳಿಗೆ 3 ಟ್ರ್ಯಾಕ್ಟರ್ ಲೋಡ್ ಬೆಳೆ ಬರುತ್ತಿತ್ತು. ಈಗ ಒಂದು ಕಾಲು ಟ್ರ್ಯಾಕ್ಟರ್ ಮಾತ್ರ ಬೆಳೆ ಬರುತ್ತಿದೆ’ ಎಂದು ತಾಲ್ಲೂಕಿನ ಹೊಳೆಸಿರಿಗೆರೆಯ ರೈತ ಕುಂದೂರು ಮಂಜಪ್ಪರ ಅಳಲು ತೋಡಿಕೊಂಡರು.
ಮಂಜಪ್ಪರಂತೆಯೇ ತಾಲ್ಲೂಕಿನ ತೆಂಗು ಬೆಳೆದ ಹಲವು ರೈತರು ತೆಂಗಿನ ಇಳುವರಿ ಕೈಗೆ ಬಾರದೇ ಸಂಕಷ್ಟಕ್ಕೀಡಾಗಿದ್ದಾರೆ.
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ತೆಂಗಿನ ತೋಟಗಳು ಕಪ್ಪುತಲೆ ಹುಳುಬಾಧೆಯಿಂದಾಗಿ ಕಪ್ಪಾಗಿವೆ. ಯಾರೋ ಬೆಂಕಿ ಹಾಕಿ ಸುಟ್ಟಿದ್ದಾರೆ ಎಂಬಷ್ಟರ ಮಟ್ಟಿಗೆ ಗಿಡಗಳು ಕಪ್ಪಾಗಿವೆ.
ಪ್ರತಿ ವರ್ಷದ ಬೇಸಿಗೆ ಆರಂಭದಲ್ಲಿ ಈ ಕಾಯಿಲೆ ತಾಲ್ಲೂಕಿನ ರೈತರನ್ನು ಕಾಡುತ್ತಿದ್ದು, ಇದರಿಂದ ಹೇಗೆ ಹೊರಬರಬೇಕೆಂಬುದು ತಿಳಿಯದೆ ಆತಂಕಕ್ಕೀಡಾಗಿದ್ದಾರೆ. ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಹಲವು ಮಾರ್ಗೋಪಾಯಗಳನ್ನು ಹೇಳುತ್ತಿದ್ದು, ಅದನ್ನು ಪಾಲನೆ ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ.
ಕಲ್ಪವೃಕ್ಷಕ್ಕೆ ಎದುರಾಗಿರುವ ಇಂತಹ ಹಲವು ಸಮಸ್ಯೆಗೆ ತಜ್ಞರು ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಯ.
‘ಬೇರು ಉಪಚರಿಸುವ ವಿಧಾನ ಅನುಸರಿಸಿ’
ತೆಂಗಿಗೆ ಕಾಡುತ್ತಿರುವ ಕಪ್ಪುತಲೆ ಹುಳುವಿನ ಬಾಧೆಯಿಂದ ಇಳುವರಿ ಇಳಿದು ರೈತರಿಗೆ ಸಂಕಷ್ಟ ಎದುರಾಗಿದೆ. ತೋಟಗಾರಿಕೆ ಇಲಾಖೆಯಿಂದ ಸೂಚಿಸಿರುವ ಯಾಂತ್ರಿಕ ಜೈವಿಕ ಹಾಗೂ ಬೇರಿನ ಮೂಲಕ ಉಪಚರಿಸುವ ವಿಧಾನವನ್ನು ರೈತರು ಪಾಲಿಸಬೇಕು. ಜೊತೆಗೆ ತೆಂಗಿನ ಮರಗಳ ಪೋಷಣೆಗೆ ಆದ್ಯತೆ ನೀಡಬೇಕು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಶಿಧರಸ್ವಾಮಿ ಎಚ್.ಎನ್. ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.