ADVERTISEMENT

ಹರಿಹರ: ₹15,000 ಲಂಚ ಪಡೆಯುವಾಗ ಸಿಕ್ಕಿಬಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 11:31 IST
Last Updated 29 ಡಿಸೆಂಬರ್ 2022, 11:31 IST
ಬಿ.ಸಿ. ಸಿದ್ದಪ್ಪ
ಬಿ.ಸಿ. ಸಿದ್ದಪ್ಪ   

ಹರಿಹರ (ದಾವಣಗೆರೆ ಜಿಲ್ಲೆ): ಖಾಸಗಿ ಶಾಲೆಯೊಂದರ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದ ಹರಿಹರದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಬಿ.ಸಿ. ಸಿದ್ದಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಗುರುವಾರ ಬಿದ್ದಿದ್ದಾರೆ.

ಹರಿಹರದ ಕೆ.ಆರ್‌. ನಗರದ ದುರುಗೋಜಿ ಗೋಪಾಲರಾವ್‌ ಎಜುಕೇಷನಲ್‌ ಆ್ಯಂಡ್‌ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಡಿ.ಜಿ. ರಘುನಾಥ್‌ ಅವರು ತಮ್ಮ ‘ವಿದ್ಯಾದಾಯಿನಿ’ ಶಾಲೆಯ ಸಿಬಿಎಸ್‌ಇ ಮಾನ್ಯತೆ ನವೀಕರಣಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನಮೂನೆ 15ರಲ್ಲಿ ಅಗತ್ಯ ಪ್ರಮಾಣಪತ್ರ ಹಾಗೂ ಶಾಲಾ ಶುಲ್ಕ ನಿಗದಿ ಮಾಡಿಕೊಡಲು ಬಿಇಒ ಕಚೇರಿಗೆ ಮನವಿ ಸಲ್ಲಿಸಿದ್ದರು.

ಈ ಕೆಲಸ ಮಾಡಿಕೊಡಲು ₹ 50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಿಇಒ ಸಿದ್ದಪ್ಪ, ಡಿಸೆಂಬರ್‌ 13ರಂದು ಮುಂಗಡವಾಗಿ ₹ 10,000 ಪಡೆದುಕೊಂಡಿದ್ದರು. ಬಾಕಿ ₹ 40,000 ನೀಡುವಂತೆ ಬಿಇಒ ಬುಧವಾರ ಮತ್ತೆ ಬೇಡಿಕೆ ಇಟ್ಟಿದ್ದರು. ಅಷ್ಟು ಹಣ ನೀಡಲು ಒಪ್ಪದ ರಘುನಾಥ್‌ ಅವರು, ₹ 15,000 ಕೊಡುವುದಾಗಿ ಹೇಳಿ ಬಂದಿದ್ದರು. ಬಳಿಕ ಈ ಬಗ್ಗೆ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು.

ADVERTISEMENT

ಗುರುವಾರ ಮಧ್ಯಾಹ್ನ ಬಿಇಒ ಕಚೇರಿಯ ತಮ್ಮ ಕೊಠಡಿಯಲ್ಲಿ ₹ 15,000 ಲಂಚವನ್ನು ರಘುನಾಥ್‌ ಅವರಿಂದ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿ ಸಿದ್ದಪ್ಪ ಅವರನ್ನು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಎಸ್‌ಪಿ ಎಂ.ಎಸ್‌. ಕೌಲಾಪುರೆ ನೇತೃತ್ವದಲ್ಲಿ ಡಿವೈಎಸ್‌ಪಿ ರಾಮಕೃಷ್ಣ ಕೆ.ಜಿ. ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಆಂಜನೇಯ ಎನ್‌.ಎಚ್‌. ಹಾಗೂ ಎಚ್‌.ಎಸ್‌. ರಾಷ್ಟ್ರಪತಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.