ಹರಿಹರ: ನಗರದ ಬೆಂಕಿನಗರ ಸಮೀಪದಲ್ಲಿರುವ ಡಿ.ಬಿ. ಕೆರೆ ನಾಲೆಗೆ ತಡೆಗೋಡೆ ನಿರ್ಮಿಸುವುದರಿಂದ ಪ್ರವಾಹದ ನೀರು ನಾಲೆಯ ಇನ್ನೊಂದು ಭಾಗದಲ್ಲಿರುವ ಜಮೀನುಗಳಿಗೆ ನುಗ್ಗದಂತೆ ಕ್ರಮ ವಹಿಸಬೇಕು ಎಂದು ಅಮರಾವತಿ ಪ್ರದೇಶದ ರೈತರು ಶನಿವಾರ ಆಗ್ರಹಿಸಿದರು.
ಮಳೆಗಾಲ ಸಂದರ್ಭದಲ್ಲಿ ಪ್ರವಾಹ ಸ್ಥಿತಿ ಎದುರಿಸುವ ಬೆಂಕಿನಗರ, ಪ್ರಶಾಂತ್ ನಗರ ಹಾಗೂ ಕಾಳಿದಾಸ ನಗರ ನಿವಾಸಿಗಳ ಅನುಕೂಲಕ್ಕಾಗಿ ಮಹಬೂಬ್ ಬಸ್ತಿ ಸಮೀಪದ ಡಿ.ಬಿ. ಕೆರೆ ನಾಲೆಗೆ ₹71 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗುವುದಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ನೀಡಿರುವ ಹೇಳಿಕೆಯನ್ನು ಸ್ವಾಗತಿಸುತ್ತೇವೆ. ಅಧಿಕಾರಿಗಳು ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಯೋಜನೆ ರೂಪಿಸಬೇಕು. ವಸತಿ ಪ್ರದೇಶದ ಕಡೆಗೆ ತಡೆಗೋಡೆ ನಿರ್ಮಿಸುವ ಯೋಜನೆಯಿಂದ ಮುಂದಿನ ದಿನಗಳಲ್ಲಿ ರೈತರ ಜಮೀನುಗಳ ಬೆಳೆಗಳು ಜಲಾವೃತವಾಗಿ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ಇದೇ ನಾಲೆಯ ಪ್ರವಾಹದ ನೀರು ನುಗ್ಗಿ ಬೆಳೆ ನಷ್ಟವಾಗಿದೆ. ಅಧಿಕಾರಿಗಳು ರೈತರಿಗೆ ಆಗಬಹುದಾದ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು ಎಂದು ರೈತ ಮುಖಂಡರಾದ ಗೌಡರ ಪುಟ್ಟಪ್ಪ, ಅಮರಾವತಿ ಬಸವರಾಜಪ್ಪ, ಗಂಗಾನಗರ ಬಸಣ್ಣ ಅವರು ಕೋರಿದರು.
ತಡೆಗೋಡೆ ನಿರ್ಮಿಸುವುದರಿಂದ ಈ ಭಾಗದ ನಿವಾಸಿಗಳ ತೊಂದರೆಗೆ ಮುಕ್ತಿ ಸಿಗಲಿದೆ. ಒಂದು ಸಮಸ್ಯೆ ಸರಿಪಡಿಸಲು ಹೋಗಿ ಇನ್ನೊಂದು ಸಮಸ್ಯೆ ಹುಟ್ಟಿಕೊಳ್ಳಬಾರದು ಎಂದು ಹಿರಿಯ ಕ್ರೀಡಾಪಟು ಎಚ್.ನಿಜಗುಣ ಹೇಳಿದರು.
ನಾಲೆ ಸಮೀಪದ ಹಳೆ ಪಿ.ಬಿ.ರಸ್ತೆಯ ಲಾಲ್ ಬೇಗ್ ಬಿಲ್ಡಿಂಗ್ ಮುಂಭಾಗದಲ್ಲಿರುವ ನಗರಸಭೆ ಚರಂಡಿಗೂ, ನಾಲೆಗೂ ಸಂಪರ್ಕ ಕಲ್ಪಿಸಬೇಕು. ಪ್ರವಾಹ ಉಂಟಾದಾಗ ನಾಲೆ ನೀರು ಚರಂಡಿಗೆ ಹರಿಯುವಂತೆ ಮಾಡಬಹುದು ಎಂದು ನಿವೃತ್ತ ಎಂಜಿನಿಯರ್ ವಿ.ಎಸ್.ಮಲ್ಲಿಕಾರ್ಜುನ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಾಕೀರ್, ಡಿಆರ್‌ಎಂ ಸರ್ಕಾರಿ ಪ್ರೌಢಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಜಬಿವುಲ್ಲಾ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.