ಹರಿಹರ: ಸರ್ಕಾರದ ಜಾಗವಿದ್ದರೂ ಬಳಸಿ, ಕಟ್ಟಡ ನಿರ್ಮಿಸದ ಕಾರಣ ತಾಲ್ಲೂಕಿನ ಹಲವು ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ.
ಸರ್ಕಾರಕ್ಕೆ ಸೇರಿದ ಅನುಪಯುಕ್ತ ನಿವೇಶನ, ಜಾಗಗಳನ್ನು ಸದ್ಬಳಕೆ ಮಾಡಿಕೊಂಡರೆ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳನ್ನು ಬಾಡಿಗೆ ಕಟ್ಟಡದಲ್ಲಿ ನಡೆಸುವ ಪ್ರಮೇಯ ಬರುವುದಿಲ್ಲ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ನಿರ್ಲಕ್ಷ್ಯದಿಂದ ಪ್ರತಿ ತಿಂಗಳೂ ಲಕ್ಷಾಂತರದ ರೂಪಾಯಿ ಬಾಡಿಗೆಗೆ ಹೋಗುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ.
ಜಿಲ್ಲೆಯ 2ನೇ ದೊಡ್ಡ ನಗರವಾದ ಹರಿಹರದಲ್ಲಿ ಕನಿಷ್ಠ ಏಳು ಸರ್ಕಾರಿ ಕಚೇರಿಗಳು ಹಲವು ದಶಕಗಳಿಂದ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಸಮಾಜ ಕಲ್ಯಾಣ, ಉಪ ನೋಂದಣಾಧಿಕಾರಿ, ವಾಣಿಜ್ಯ ತೆರಿಗೆ, ಕಾರ್ಮಿಕ ಕಲ್ಯಾಣ, ಅಬಕಾರಿ, ಕೆಆರ್‌ಐಡಿಸಿಎಲ್ (ಭೂಸೇನಾ ನಿಗಮ), ಸಹಕಾರ ಹೀಗೆ ವಿವಿಧ ಇಲಾಖೆಗಳು ದುಬಾರಿ ಬಾಡಿಗೆಯ ಖಾಸಗಿ ಕಟ್ಟಡಗಳಲ್ಲಿವೆ. ಈ ಕಚೇರಿಗಳಿಗಾಗಿ ವರ್ಷಕ್ಕೆ ಸರ್ಕಾರ ಕನಿಷ್ಠ ₹ 20 ಲಕ್ಷ ಬಾಡಿಗೆ ಪಾವತಿಸುತ್ತಿದೆ.
ಉಪಯೋಗಕ್ಕೆ ಬಾರದ ಜಾಗ:
ನಗರದ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿರುವ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ 15 ವಸತಿ ಗೃಹಗಳಿವೆ. ಈ ಪೈಕಿ ಇಲ್ಲಿನ ಎರಡು ವಸತಿ ಗೃಹಗಳಲ್ಲಿ ಮಾತ್ರ ನೌಕರರ ಕುಟುಂಬಗಳಿವೆ. ಉಳಿದ 13 ವಸತಿ ಗೃಹಗಳು ದಶಕದಿಂದ ಖಾಲಿ ಬಿದ್ದಿವೆ. ಈ ವಸತಿ ಗೃಹಗಳ ಜಾಗವೇ ಅಂದಾಜು 25,000 ಚದುರ ಅಡಿ ಆಗುತ್ತದೆ.
ಇನ್ನು ಇದೇ ಹೆದ್ದಾರಿಯ ಶಿವಮೊಗ್ಗ ರಸ್ತೆಯಲ್ಲಿರುವ ಜಲಸಂಪನ್ಮೂಲ ನಿಗಮದ ನಾಲ್ಕು ಎಕರೆ ಜಾಗವಿದ್ದು, ಇಲ್ಲಿ ಇಲಾಖೆಯ ಕಚೇರಿ, 70ಕ್ಕೂ ಹೆಚ್ಚು ವಸತಿ ಗೃಹಗಳು, ಒಂದು ಪ್ರವಾಸಿ ಮಂದಿರವಿದೆ. ಕಚೇರಿಯನ್ನು ಹೊರತುಪಡಿಸಿದರೆ 60ಕ್ಕೂ ಹೆಚ್ಚು ವಸತಿ ಗೃಹಗಳು ಶಿಥಿಲಗೊಂಡಿದ್ದು ಯಾರೂ ವಾಸವಿಲ್ಲ.
ಪ್ರವಾಸಿ ಮಂದಿರದಲ್ಲಿ ಸೂಕ್ತ ಸೌಲಭ್ಯಗಳಿಲ್ಲದ್ದರಿಂದ ಅತಿಥಿಗಳ ನೆರವಿಗೆ ಬಾರದೆ ಅದೂ ಹಾಳು ಬಿದ್ದಿದೆ.
ನಗರದಲ್ಲಿ ಬೀರೂರು–ಸಮ್ಮಸಗಿ ಹೆದ್ದಾರಿಯ ತಾಲ್ಲೂಕು ಕಚೇರಿ ಪಕ್ಕದಲ್ಲಿ ಆರೋಗ್ಯ ಇಲಾಖೆಗೆ ಸೇರಿದ ಹಳೆ ಸರ್ಕಾರಿ ಆಸ್ಪತ್ರೆಯ ಹಲವು ಎಕರೆ ಜಾಗವಿದೆ. ಇಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಮಾತ್ರವಿದ್ದು ಉಳಿದ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದು, ಜಾಗವೂ ನಿರುಪಯುಕ್ತವಾಗಿದೆ.
ಸರ್ಕಾರಿ ಜಾಗ ನಿರುಪಯುಕ್ತವಾಗಿದೆ ಎಂದರೆ ಒತ್ತುವರಿ ವೀರರ ದುರಾಸೆಯ ಕಣ್ಣು ಬೀಳುತ್ತದೆ. ಸರ್ಕಾರಿ ಜಾಗಗಳಲ್ಲಿ ರಾತ್ರೋ ರಾತ್ರಿ ಕಟ್ಟಡಗಳು ತಲೆ ಎತ್ತಿ, ನಂತರ ದಶಕಗಳ ಕಾಲ ಸರ್ಕಾರಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅಲೆಯುತ್ತಿರುವ ಪ್ರಕರಣಗಳೂ ಸಾಕಷ್ಟಿವೆ ಎಂಬುದು ನಗರದ ಜನರ ಅಭಿಪ್ರಾಯ.
ಸರ್ಕಾರಕ್ಕೆ ಸೇರಿದ ಖಾಲಿ ಜಾಗಗಳಲ್ಲಿ ಸರ್ಕಾರಿ ಕಚೇರಿ ಕಟ್ಟಡಗಳನ್ನು ನಿರ್ಮಿಸುವುದರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗಗಳ ರಕ್ಷಣೆಯ ಜೊತೆಗೆ ಖಾಸಗಿ ಕಟ್ಟಡಗಳ ಮಾಲೀಕರಿಗೆ ಲಕ್ಷಾಂತರ ರೂಪಾಯಿ ಬಾಡಿಗೆ ಪಾವತಿಸುವುದನ್ನು ತಪ್ಪಿಸಬಹುದು. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಬೀಳುತ್ತಿರುವ ಹೊರೆ ತಪ್ಪಿಸಬಹುದು. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಒತ್ತಾಯಿಸುತ್ತಾರೆ ಅತಿಥಿ ಉಪನ್ಯಾಸಕ ಅಬ್ದುಲ್ ಖಾಲಖ್.
ಸರ್ಕಾರಕ್ಕೆ ಸೇರಿದ ಖಾಲಿ ಜಾಗಗಳಲ್ಲಿ ಕಟ್ಟಡ ನಿರ್ಮಿಸಿದರೆ ಬಾಡಿಗೆ ಪಾವತಿಯ ಭಾರ ತಗ್ಗುತ್ತದೆ. ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ.
-ಬಿ.ಪಿ.ಹರೀಶ್ ಶಾಸಕ
ಸ್ವಂತ ನಿವೇಶನ ಸಿಕ್ಕರೆ ಇಲಾಖೆಯ ಅನುದಾನದಿಂದ ಕಚೇರಿ ನಿರ್ಮಿಸಿಕೊಳ್ಳಲು ಅನುಕೂಲವಾಗುತ್ತದೆ. ಬಾಡಿಗೆ ಕೊಡುವುದು ತಪ್ಪುತ್ತದೆ.
-ಜಿ.ನಾರಪ್ಪ ಪ್ರಭಾರ ಸಹಾಯಕ ಆಯುಕ್ತ ವಾಣಿಜ್ಯ ತೆರಿಗೆ ಇಲಾಖೆ
ನಗರದಲ್ಲಿ ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಹಲವು ಜಾಗಗಳಿವೆ. ಅದನ್ನು ಗುರುತಿಸಿ ಉಪಯೋಗಿಸಿಕೊಳ್ಳಬೇಕು ಅಧಿಕಾರಿಗಳು ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸಿದರೆ ಸರ್ಕಾರದ ಬೊಕ್ಕಸದ ಹೊರೆ ತಗ್ಗಿಸಬಹುದು.
-ಅಬ್ದುಲ್ ಖಾಲಖ್ ಅತಿಥಿ ಉಪನ್ಯಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.