ಹರಿಹರ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ಪರಿಣಾಮವಾಗಿ ಬಾಗಿಲು ಮುಚ್ಚಿದ್ದ ನಗರದ ಸಾರ್ವಜನಿಕ ಆಸ್ಪತ್ರೆಯ ಐಸಿಯು ವಿಭಾಗ ಪುನರಾರಂಭಗೊಂಡಿತು.
ಗುರುವಾರ ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಕಾರ್ಯಕರ್ತರು, ಕೋವಿಡ್ ನಂತರದ ಅವಧಿಯಲ್ಲಿ ಆರಂಭಿಸಲಾದ ಐಸಿಯು ವಿಭಾಗವನ್ನು ಏಕೆ ಮುಚ್ಚಲಾಗಿದೆ ಎಂದು ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಹನುಮನಾಯ್ಕ ಅವರಿಗೆ ಪ್ರಶ್ನಿಸಿದರು.
ಕಾರಣಾಂತರಗಳಿಂದ ಐಸಿಯು ವಿಭಾಗದ ಸೇವೆ ನೀಡಲಾಗುತ್ತಿಲ್ಲ. ಸಿಬ್ಬಂದಿ ನೇಮಿಸಿ ಸೇವೆ ಪುನರಾರಂಭಿಸಲಾಗುವುದು ಎಂದು ಹನುಮನಾಯ್ಕ ಭರವಸೆ ನೀಡಿದರು. ನಂತರ ಸಂಘಟನೆ ಕಾರ್ಯಕರ್ತರು ಹಾಗೂ ವೈದ್ಯರ ಸಮ್ಮುಖದಲ್ಲಿ ಐಸಿಯು ವಿಭಾಗದ ಬೀಗವನ್ನು ತೆರೆಯಲಾಯಿತು.
ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸಾ ಸೇವೆ ದೊರಕಬೇಕು. ಹೊರಗುತ್ತಿಗೆ ಕಾರ್ಮಿಕರಿಗೆ ಕೂಡಲೇ ಬಾಕಿ ವೇತನ ವಿತರಣೆ ಮಾಡಬೇಕು. ಅವರಿಗೆ ಆರೋಗ್ಯ ಸುರಕ್ಷಾ ಸಲಕರಣೆಗಳನ್ನು ವಿತರಿಸಬೇಕು. ರೋಗಿಗಳಿಗೆ ಹೊರಗಡೆ ಖರೀದಿಸಲು ಔಷಧಿ ಚೀಟಿ ನೀಡದೆ ಆಸ್ಪತ್ರೆಯಲ್ಲೇ ಔಷಧಿ ಉಚಿತವಾಗಿ ವಿತರಣೆ ಮಾಡಬೇಕು. ಖಾಲಿ ಇರುವ ಇಎನ್‌ಟಿ ಹಾಗೂ ಇತರೆ ತಜ್ಞ ವೈದ್ಯರನ್ನು ನಿಯುಕ್ತಿ ಮಾಡಬೇಕು. ಆಸ್ಪತ್ರೆ ಒಳ, ಹೊರ ಆರವಣ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ್ ಮಾನೆ ಹಾಗೂ ನಗರ ಘಟಕದ ಅಧ್ಯಕ್ಷ ಪ್ರೀತಮ್ ಬಾಬು ಆಗ್ರಹಿಸಿದರು.
ಸಂಘಟನೆ ಕಾರ್ಯಕರ್ತರಾದ ಅಲಿ ಅಕ್ಬರ್, ರಾಮು, ರಮೇಶ್ ಮಡಿವಾಳ, ಗಂಗಾಧರ, ಮಂಜುನಾಥ, ವೀರೇಶ್, ರುದ್ರೇಶ್, ಸಂತೋಷ್, ಗಿರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.