ADVERTISEMENT

ಹರಿಹರ: ಮಾಯದಂತ ಮಳೆ ಬಂತಣ್ಣ, ಕೊಂಡಜ್ಜಿ ಕೆರೆಗೆ..

ತುಂಬಿದ ಕೆರೆ ಒಡಲು; ಜನ, ಜಾನುವಾರು, ಪ್ರಾಣಿ, ಪಕ್ಷಿ, ಜಲಚರಗಳಿಗೆ ಬಂತು ಜೀವ ಸಂಚಾರ

ಟಿ.ಇನಾಯತ್‌ ಉಲ್ಲಾ
Published 10 ನವೆಂಬರ್ 2024, 6:00 IST
Last Updated 10 ನವೆಂಬರ್ 2024, 6:00 IST
ನೀರಿನ ಕೊರತೆಯಿಂದ ಒಡಲು ಖಾಲಿಯಾಗಿದ್ದ ಹರಿಹರ ತಾಲ್ಲೂಕಿನ ಕೊಂಡಜ್ಜಿ ಕೆರೆಯ ಇದೇ ವರ್ಷದ ಮಾರ್ಚ್ 24ರ ಚಿತ್ರ
ನೀರಿನ ಕೊರತೆಯಿಂದ ಒಡಲು ಖಾಲಿಯಾಗಿದ್ದ ಹರಿಹರ ತಾಲ್ಲೂಕಿನ ಕೊಂಡಜ್ಜಿ ಕೆರೆಯ ಇದೇ ವರ್ಷದ ಮಾರ್ಚ್ 24ರ ಚಿತ್ರ   

ಹರಿಹರ: ಕಳೆದ ವರ್ಷ ಮಳೆ ಕೊರತೆ, ಬಿರು ಬಿಸಿಲಿನಿಂದಾಗಿ ಖಾಲಿಯಾಗಿದ್ದ ತಾಲ್ಲೂಕಿನ ಕೊಂಡಜ್ಜಿ ಕೆರೆಯ ಒಡಲು ಈ ಬಾರಿ ತುಂಬಿ ಕೋಡಿ ಬಿದ್ದಿದ್ದು, ಆ ಭಾಗದ ಜನ, ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ಮತ್ತೆ ಜೀವ ಸಂಚಾರ ಸಿಕ್ಕಿದೆ.

ಮಳೆ ನೀರು ಮತ್ತು ಭದ್ರಾ ಕಾಲುವೆ ಈ ಕೆರೆಗೆ ನೀರನ್ನೊದಗಿಸುವ ಮೂಲಗಳು. 2019, 2020, 2021, 2022ನೇ ಸಾಲಿನಲ್ಲಿ ತುಂಬಿದ್ದ ಈ ಕೆರೆ 2023 ನೇ ಸಾಲಿನಲ್ಲಿ ಖಾಲಿಯಾಗಿತ್ತು. ಈ ಕೆರೆ ಒಣಗಿದ್ದರಿಂದ ಕೃಷಿಕರ ಜೊತೆಗೆ ಸುತ್ತಲಿನ ಕಾಡಿನ ಪ್ರಾಣಿ, ಪಕ್ಷಿಗಳಿಗೂ ಜಲ ಸಂಕಟ ಉಂಟಾಗಿತ್ತು.

ಕೆರೆಯ ಗುಂಡಿಗಳಲ್ಲಿ ಉಳಿದಿದ್ದ ಅಳಿದುಳಿದ ನೀರನ್ನೂ ಕೆಲವು ರೈತರು ತಮ್ಮ ತೋಟಗಳಿಗೆ ಸಾಗಿಸುತ್ತಿದ್ದರು. ಈ ಕುರಿತು ‘ಪ್ರಜಾವಾಣಿ’ಯಲ್ಲಿ ಮೇ ತಿಂಗಳಲ್ಲಿ ವಿಶೇಷ ವರದಿ ಪ್ರಕಟಿಸಿ ಜನರಲ್ಲಿ ಜಾಗೃತಿ ಮೂಡಿಸಿ, ಪ್ರಾಣಿ, ಪಕ್ಷಿಗಳ ಉಳಿವಿಗೆ ಬೆಂಬಲವಾಗಿ ನಿಲ್ಲಲಾಗಿತ್ತು.

ADVERTISEMENT

ಬೇಸಿಗೆಯಲ್ಲಿ ದೂರದ ದೇಶಗಳಿಂದಲೂ ವಿಶಿಷ್ಟ ಬಗೆಬಗೆಯ ಪಕ್ಷಿಗಳು ಇಲ್ಲಿ ಸಂತಾನೋತ್ಪತ್ತಿಗೆ ಬರುವುದು ವಾಡಿಕೆ. ಸುತ್ತಲಿನ ಕಾಡು ಪ್ರದೇಶದಲ್ಲಿ ಜಿಂಕೆ, ಕಾಡು ಹಂದಿ, ನವಿಲು, ಮೊಲ ಹಾಗೂ ಹಲವು ಪ್ರಬೇಧದ ಪ್ರಾಣಿ, ಪಕ್ಷಿ, ಜಲಚರಗಳ ಉಳಿವಿಗೆ ಈ ವರ್ಷದ ಮಾರ್ಚ್, ಮೇ ತಿಂಗಳಲ್ಲಿ ಸಂಕಟ ಎದುರಾಗಿತ್ತು.

ಈ ಬಾರಿ ಮಳೆಗಾಲದಲ್ಲಿ ಸುರಿದ ಮಳೆ, ವಿಶೇಷವಾಗಿ ಅಕ್ಟೋಬರ್‌ನ ಮಳೆ ಕೆರೆ ಕೋಡಿ ಹರಿಯುವಂತೆ ಮಾಡಿದ್ದು, ಈಗಲೂ ಕೋಡಿಯಿಂದ ಹೆಚ್ಚುವರಿ ನೀರು ಹರಿಯುತ್ತಿದೆ. ಮೈದುಂಬಿದ ಕೆರೆ ಹಾಗೂ ಸುತ್ತಲಿನ ಹಸಿರಿನ ವಾತಾವರಣ, ಗುಡ್ಡ, ಬೆಟ್ಟಗಳು ಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿವೆ.

ಭದ್ರಾ ಕಾಲುವೆಯಿಂದ ನೀರು ಹರಿಸಿದಾಗ ಕೆರೆ ತುಂಬಲು 2 ಅಡಿ ಬಾಕಿ ಇತ್ತು. ಮಳೆಯಿಂದಾಗಿ ಕೋಡಿ ಹರಿದಿದೆ. 81 ಕ್ಯೂಸೆಕ್ ಸಾಮರ್ಥ್ಯದ ಕೆರೆಯಿಂದ ಇನ್ನೂ ಎರಡು ಕೆರೆ ತುಂಬುವಷ್ಟು ನೀರು ಹೆಚ್ಚುವರಿಯಾಗಿ ಹರಿದು ಹೋಗಿದೆ. 227 ಹೆಕ್ಟರ್ ಪ್ರದೇಶದ ಜಮೀನುಗಳಿಗೆ ನೀರು ಹರಿಸಲು ಅನುಕೂಲವಾಗಿದೆ

-ಮಹಾಂತೇಶ್ ಎಸ್.ಜಿ. ಭದ್ರಾ ನಂ.5 ಕಾಲುವೆಯ ಶಾಖಾಧಿಕಾರಿ 

ಕಳೆದ ಬೇಸಿಗೆಯಲ್ಲಿ ಕೆರೆ ಒಣಗಿದಾಗ ಕಾಡು ಪ್ರಾಣಿಗಳು ರೈತರ ಜಮೀನುಗಳಿಗೆ ನುಗ್ಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ಪ್ರದೇಶದಲ್ಲಿ 2 ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿತ್ತು. ಕೆರೆ ತುಂಬಿರುವುದರಿಂದ ಜನ ಜನವಾರುಗಳ ಜೊತೆಗೆ ಈ ಕಾಡಿನ ಪ್ರಾಣಿ ಪಕ್ಷಿ ಹತ್ತಾರು ಬಗೆಯ ಪ್ರಬೇಧಗಳಿಗೆ ಹಾಗೂ ಸುತ್ತಲಿನ ಮೂರ‍್ನಾಲ್ಕು ಕಿ.ಮೀ. ಪ್ರದೇಶದಲ್ಲಿ ಅಂತರ್ಜಲ ವೃದ್ಧಿಗೆ ಅನುಕೂಲವಾಗಿದೆ

-ಮೊಹ್ಮದ್ ಖಾಲಿದ್ ಮುಸ್ತಫಾ ಅರಣ್ಯಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.