ADVERTISEMENT

ಮಾನಸಿಕ ಒತ್ತಡಗಳಿಂದ ಸ್ಕಿಜೋಫ್ರೇನಿಯಾ: ಡಾ. ಖಾದರ್ 

​ಪ್ರಜಾವಾಣಿ ವಾರ್ತೆ
Published 26 ಮೇ 2024, 14:11 IST
Last Updated 26 ಮೇ 2024, 14:11 IST
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿಯಲ್ಲಿ ಸ್ಕಿಜೋಫ್ರೇನಿಯಾ ಕಾಯಿಲೆ ನಿರ್ಮೂಲನಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿಯಲ್ಲಿ ಸ್ಕಿಜೋಫ್ರೇನಿಯಾ ಕಾಯಿಲೆ ನಿರ್ಮೂಲನಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಕಡರನಾಯ್ಕನಹಳ್ಳಿ: ‘ಸ್ಕಿಜೋಫ್ರೇನಿಯಾ ಎಂಬುದು ತೀವ್ರತರ ಮಾನಸಿಕ ಕಾಯಿಲೆಯಾಗಿದ್ದು, ಹದಿ ಹರೆಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಿದುಳಿನಲ್ಲಿರುವ ರಾಸಾಯನಿಕ ಅಂಶಗಳ ಏರುಪೇರುಗಳಿಂದ ಬರಬಹುದಾದ ಕಾಯಿಲೆ. ಒತ್ತಡ, ಅಹಿತಕರ ಘಟನೆಗಳು, ಆನುವಂಶಿಕ ಸಮಸ್ಯೆಗಳಿಂದ ಈ ಕಾಯಿಲೆ ಬರುವ ಸಾಧ್ಯತೆಯೂ ಇರುತ್ತದೆ. ಬೇಗ ಕಾಯಿಲೆಯ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ಕೊಡಿಸಿದರೆ ನಿಯಂತ್ರಣ ಸಾಧ್ಯ’ ಎಂದು ತಾಲ್ಲೂವ ವೈದ್ಯಾಧಿಕಾರಿ ಡಾ.ಖಾದರ್ ತಿಳಿಸಿದರು.

ಸಮೀಪದ ಉಕ್ಕಡಗಾತ್ರಿ ಗ್ರಾಮದ ಅಜ್ಜಯ್ಯ ಅವರ ದೇವಸ್ಥಾನದ ಸಭಾಂಗಣದಲ್ಲಿ ಸ್ಕಿಜೋಫ್ರೇನಿಯಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಉಕ್ಕಡಗಾತ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ, ದಾವಣಗೆರೆಯ ಮಾನಸಧಾರ ಹಗಲು ಆರೈಕೆ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ADVERTISEMENT

ಸ್ಕಿಜೋಫ್ರೇನಿಯಾ ಸಾವಿರ ಜನರ ಪೈಕಿ ಮೂವರಲ್ಲಿ ಕಾಣಿಸಬಹುದಾಗಿದೆ. ವ್ಯಕ್ತಿಯ ಭಾವನೆಗಳು, ಆಲೋಚನೆಗಳು, ವರ್ತನೆಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಕಾಯಿಲೆ ಪೀಡಿತ ವ್ಯಕ್ತಿಯು ಸಮಾಜದ ವಿರುದ್ಧದ ವರ್ತನೆ, ತನ್ನದೇ ಭ್ರಮೆಲೋಕದಲ್ಲಿ ಇರುವುದು, ತನ್ನಷ್ಟಕ್ಕೆ ತಾನು ಮಾತನಾಡುವುದು, ಅನುಮಾನ ಪಡುವುದು, ತನ್ನಷ್ಟಕ್ಕೆ ನಗುವುದು, ಸ್ವಚ್ಛತೆ ಇಲ್ಲದಿರುವುದು ಮೊದಲಾದ ವರ್ತನೆಗಳನ್ನು ತನಗೆ ಅರಿವಿದಲ್ಲದೇ ತೋರಿಸುತ್ತಾನೆ. ಇದಕ್ಕೆ ಚಿಕಿತ್ಸೆ ಇದೆ. ಗುಣಮುಖರಾದ ಮೇಲೆ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಉತ್ತಮ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುವುದು’ ಎಂದು ಸೈಕ್ಯಾಟ್ರಿಕ್ ಸೋಷಿಯಲ್ ವರ್ಕರ್ ಮಾತನಾಡಿದರು.

ಗುಣಮುಖರಾದ ನಂತರ ಪ್ರತಿನಿತ್ಯ ಅವರು ಯೋಗ, ಧ್ಯಾನ, ವ್ಯಾಯಾಮ ಮಾಡುವುದು, ಸಂಗೀತ ಕೇಳುವುದು ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಗುಣಮುಖರಾಗುತ್ತಾರೆ ಎಂದು ಮನಶಾಸ್ತ್ರ ಸಂಶೋಧನಾ ವಿದ್ಯಾರ್ಥಿ ಡಾ.ಲಕ್ಷಿ ಹೇಳಿದರು.

ವೈದ್ಯಾಧಿಕಾರಿ ಡಾ.ನವೀನ್, ಜಿಲ್ಲಾ ಮೇಲ್ವಿಚಾರಕ ಹೊರಕೇರಿ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಉಮ್ಮಣ್ಣ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್, ತಾಲ್ಲೂಕು ಆಶಾ ಮೇಲ್ವಿಚಾರಕಿ ಕವಿತಾ, ನಾಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.