ADVERTISEMENT

ಹರಿಹರ | ನಗರಸಭೆ ಕಚೇರಿ ಕಾಮಗಾರಿಯೇ ಅಪೂರ್ಣ: ಬುನಾದಿ ಹಂತದಿಂದ ಮೇಲೇಳದ ಕಟ್ಟಡ!

ಟಿ.ಇನಾಯತ್‌ ಉಲ್ಲಾ
Published 25 ಜುಲೈ 2024, 6:47 IST
Last Updated 25 ಜುಲೈ 2024, 6:47 IST
ಹರಿಹರದ ನಗರಸಭೆ ಕಚೇರಿ ಕಟ್ಟಡ ಕಾಮಗಾರಿ ಅಪೂರ್ಣಗೊಂಡಿರುವುದು
ಹರಿಹರದ ನಗರಸಭೆ ಕಚೇರಿ ಕಟ್ಟಡ ಕಾಮಗಾರಿ ಅಪೂರ್ಣಗೊಂಡಿರುವುದು   

ಹರಿಹರ: ಇಲ್ಲಿನ ನಗರಸಭೆಯ ಕಚೇರಿ ಕಟ್ಟಡದ ಕಾಮಗಾರಿ ಅಪೂರ್ಣಗೊಂಡಿದೆ. ಅನುದಾನ ಇದ್ದರೂ ಕಾಮಗಾರಿ ಸ್ಥಗಿತಗೊಂಡಿರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಾರೆ.

6 ದಶಕಗಳ ಹಿಂದೆ ನಿರ್ಮಿಸಿದ್ದ ನಗರಸಭೆ ಕಚೇರಿ ಕಟ್ಟಡದಲ್ಲಿ ಹೆಚ್ಚಿನ ಸ್ಥಳಾವಕಾಶ ಇರಲಿಲ್ಲ. ಈ ಕಾರಣ ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಲು 2021ನೇ ಸಾಲಿನಲ್ಲಿ ರಾಜ್ಯ ಸರ್ಕಾರ ₹ 4.22 ಕೋಟಿ ಅನುದಾನ ನೀಡಿತ್ತು.
ನಂತರ ಬೆಂಗಳೂರಿನ ಗುತ್ತಿಗೆದಾರರಿಗೆ ಕಾಮಗಾರಿಯ ಟೆಂಡರ್ ಸಿಕ್ಕಿತ್ತು. 

ಕಟ್ಟಡದ ಬುನಾದಿ (ತಳಪಾಯ) ಬಿಟ್ಟರೆ ಬೇರೆ ಕಾಮಗಾರಿ ಕೈಗೊಂಡಿಲ್ಲ. ಒಂದು ವರ್ಷದ ಹಿಂದೆ ಈ ಕಾಮಗಾರಿ ಪೊರೈಸಿದ್ದು, ಉಳಿದ ಕಾಮಗಾರಿ ಆರಂಭವೇ ಆಗಿಲ್ಲ.

ADVERTISEMENT

ನಗರಸಭೆಯಿಂದ ಮೂರು ನೋಟಿಸ್‌ ನೀಡಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದರೂ  ಸ್ಪಂದಿಸುತ್ತಿಲ್ಲ. ಟೆಂಡರ್ ನೀಡಿದ ನಂತರ 12 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಷರತ್ತು ಇದ್ದರೂ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂಬುದು ಅಧಿಕಾರಿಗಳ ದೂರು.

ದಾಖಲೆ ಇಡಲು ಜಾಗವಿಲ್ಲ:

ಹಳೆ ಕಟ್ಟಡ ತೆರವುಗೊಳಿಸಿದ ಕಾರಣ ಅಧಿಕಾರಿಗಳು, ಸಿಬ್ಬಂದಿ ಪರದಾಡುವಂತಾಗಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಪೌರಾಯುಕ್ತರು, ಕಂದಾಯ ಹಾಗೂ ಲೆಕ್ಕಪತ್ರ ಶಾಖೆಗಳನ್ನು ಹಳೆ ಕಟ್ಟಡದ ಹಿಂಭಾಗದಲ್ಲಿನ 1ನೇ ಮಹಡಿಯಲ್ಲಿರುವ ಎಂಜಿನಿಯರಿಂಗ್, ಆರೋಗ್ಯ ಶಾಖೆಗೆ ಸ್ಥಳಾಂತರಿಸಲಾಯಿತು.

ಒಂದೂವರೆ ವರ್ಷದಿಂದ ಪೌರಾಯುಕ್ತರು, ಕಂದಾಯ ಹಾಗೂ ಲೆಕ್ಕಪತ್ರ ಶಾಖೆಗಳ ಸಿಬ್ಬಂದಿ ಎಂಜಿನಿಯರಿಂಗ್‌ ಶಾಖೆಯ ಇಕ್ಕಟ್ಟಾದ ಜಾಗದಲ್ಲಿ ಕುಳಿತು ಕರ್ತವ್ಯ ನಿರ್ವಹಿಸುವಂತಾಗಿದೆ. ಈ ಶಾಖೆಗಳ ದಾಖಲೆ, ಬೀರುಗಳನ್ನು ಇಡಲು ಜಾಗವಿಲ್ಲ. ವಿವಿಧ ಕೆಲಸ, ಕಾರ್ಯಗಳಿಗೆ ಕಚೇರಿಗೆ ಬರುವ ನಾಗರಿಕರಿಗೆ ನಿಲ್ಲಲೂ ಜಾಗವಿಲ್ಲದಂತಾಗಿದೆ. 1ನೇ ಮಹಡಿ ಆಗಿರುವುದರಿಂದ ವಯಸ್ಸಾದವರೂ ಸೇರಿ ಕೆಲವರು ಅಲ್ಲಿಗೆ ಹೋಗಲು ತೊಂದರೆ ಎದುರಿಸುವಂತಾಗಿದೆ.

‘ಇತ್ತೀಚಿಗೆ ನನ್ನ ಮಗನ ಮನೆ ನಿರ್ಮಾಣಕ್ಕೆ ಪರವಾನಗಿ ಬೇಕಿತ್ತು. ಮಂಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ನಾನು ಹತ್ತಾರು ಬಾರಿ 1ನೇ ಮಹಡಿ ಹತ್ತಿ, ಇಳಿದು ಸಾಕಾಗಿತ್ತು. ನಗರಸಭೆ ಕಚೇರಿ ಸದ್ಯ ಚಿಕ್ಕ ಜಾಗದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ. ಇಂತಹ ಜ್ವಲಂತ ಸಮಸ್ಯೆ ನಿವಾರಣೆ ಬಗ್ಗೆ ಸಂಬಂಧಿತ ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಯತ್ನಿಸುತ್ತಿಲ್ಲ’ ಎಂದು ಜನಪರ ಹೋರಾಟ ವೇದಿಕೆ ಸಂಚಾಲಕ ಜೆ. ಕಲೀಂ ಬಾಷಾ ದೂರುತ್ತಾರೆ.

ಹರಿಹರದ ನಗರಸಭೆ ಕಚೇರಿ ಕಟ್ಟಡ ಕಾಮಗಾರಿ ಅಪೂರ್ಣಗೊಂಡಿರುವುದು

ಅನುದಾನ ಇದ್ದರೂ ಕಚೇರಿ ಕಟ್ಟಡ ಕಾಮಗಾರಿ ವಿಳಂಬ ಮಾಡುತ್ತಿರುವುದು ವಿಪರ್ಯಾಸ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣ ಎಂದೂ ಅವರು ಹರಿಹಾಯ್ದಿದ್ದಾರೆ.

ಜೆ.ಕಲೀಂಬಾಷಾ
ಗುತ್ತಿಗೆದಾರರಿಗೆ 3 ನೋಟಿಸ್‌ ಜಾರಿ ಮಾಡಲಾಗಿದೆ. ಆದರೂ ಅವರು ಸ್ಪಂದಿಸಿಲ್ಲ. ಅವರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸು ಮಾಡಿ ನಿಯಮಾವಳಿ ಅನ್ವಯ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
ಸುಬ್ರಹ್ಮಣ್ಯ ಶ್ರೇಷ್ಠಿ ಪೌರಾಯುಕ್ತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.