ಹರಿಹರ: ಬಿ.ಪಿ.ಹರೀಶ್ ಅವರು 2008-13ರ ಅವಧಿಯಲ್ಲಿ ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ₹800 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ವಿವಿಧ ಯೋಜನೆಗಳಡಿ ನಿರ್ವಸತಿಕರಿಗೆ 12,700 ಮನೆಗಳನ್ನು ನಿರ್ಮಿಸಲಾಗಿದೆ ಎಂದು ಬಿಜೆಪಿ ಗ್ರಾಮಾಂತರ ವಿಭಾಗದ ಅಧ್ಯಕ್ಷ ಎಂ.ಪಿ.ಲಿಂಗರಾಜ್ ಹೇಳಿದರು.
ಕಾಂಗ್ರೆಸ್ ಮಾಜಿ ಶಾಸಕ ಎಸ್.ರಾಮಪ್ಪ ಅವರ ಆರೋಪಕ್ಕೆ ಸುದ್ದಿಗೋಷ್ಠಿಯಲ್ಲಿ ತೀರುಗೇಟು ನೀಡಿದ ಅವರು, ‘ಹರೀಶ್ ಅವರಿಗೆ ಸುಳ್ಳು ಹೇಳುವ ಅಗತ್ಯವಿಲ್ಲ, ದಾಖಲೆಗಳೇ ಇದನ್ನು ಸಾಕ್ಷೀಕರಿಸುತ್ತವೆ. ರಾಮಪ್ಪ ಅವರು ಕತ್ತಲಲ್ಲಿ ಕಲ್ಲು ಹೊಡೆಯುವುದನ್ನು ಬಿಡಬೇಕೆಂದು’ ಎಂದರು.
ತಾಲ್ಲೂಕಿನ ಬಡವರಿಗೆ ವಸತಿ ಯೋಜನೆ ರೂಪಿಸಲು ತಮ್ಮ ಅವಧಿಯಲ್ಲಿ ಎಷ್ಟು ಮನೆಗಳು ಅಗತ್ಯವಿದೆ ಎಂದು ಸಲ್ಲಿಸಿದ ಪ್ರಸ್ತಾವನೆಗಳ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ರಾಮಪ್ಪ ಅವರಿಗೆ ಸವಾಲು ಹಾಕಿದರು.
ತುಂಗಭದ್ರಾ ನದಿಗೆ ಸೇತುವೆ, ದಾವಣಗೆರೆ-ಹರಿಹರ ಮಾರ್ಗಕ್ಕೆ ಬೈಪಾಸ್, ಸರ್ಕಾರಿ ಪಾಲಿಟೆಕ್ನಿಕ್, ಕೆ.ಎಚ್.ಬಿ ಕಾಲೊನಿ, ಮಿನಿ ವಿಧಾನಸೌಧ ಸೇರಿದಂತೆ ಗ್ರಾಮೀಣ ಭಾಗದ ಹಲವಾರು ಗ್ರಾಮಗಳ ಸಂಪರ್ಕಿಸುವ ಸಿಸಿ ರಸ್ತೆ ನಿರ್ಮಿಸಿರುವುದು ಕಣ್ಣೆದುರಿಗೆ ಇದೆ. ಆದರೆ ರಾಮಪ್ಪ ಅವರಿಗೆ ಕಾಣದಿರುವುದು ವಿಪರ್ಯಾಸ ಎಂದು ಕುಟುಕಿದರು.
ನಗರಸಭಾ ಸದಸ್ಯ ಆಟೊ ಹನುಮಂತಪ್ಪ, ಧೂಡಾ ಮಾಜಿ ಸದಸ್ಯ ರಾಜು ರೋಖಡೆ, ಪಕ್ಷದ ನಗರ ಘಟಕ ಅಧ್ಯಕ್ಷ ಅಜಿತ್ ಸಾವಂತ್, ಪ್ರಧಾನ ಕಾರ್ಯದರ್ಶಿಗಳಾದ ತುಳುಜಪ್ಪ ಭೂತೆ, ಮಂಜಾನಾಯ್ಕ, ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ವೀರೇಶ್ ಆದಾಪುರ, ಎಸ್‌ಸಿ ಮೋರ್ಚಾ ಅಧ್ಯಕ್ಷ ಸಂತೋಷ್ ಗುಡಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.