ಹರಿಹರ: ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಇದರಿಂದ ರೈತರಿಗೆ ಮೋಸವಾಗುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗಮನ ಹರಿಸಬೇಕು’ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀ ಹೇಳಿದರು.
ಹೊರವಲಯದ ಶೇರಾಪುರ ಹನುಮಂತ ದೇವರ ದೇವಸ್ಥಾನದ ಕಳಶಾರೋಹಣ ಹಾಗೂ ಹನುಮಂತ ದೇವರ ಪರು ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
‘ಯಾವ ಐಎಎಸ್ ಅಧಿಕಾರಿ ಈ ಯೋಜನೆಯ ನಿಯಮಗಳನ್ನು ರೂಪಿಸಿದ್ದಾರೋ ತಿಳಿಯದು. ಬೆಳೆ ವಿಮಾ ಕಂಪನಿಗೆ ಮಾತ್ರ ದೊಡ್ಡ ಲಾಭವಿದ್ದು, ರೈತರಿಗೆ ನಷ್ಟ ಉಂಟಾಗುತ್ತಿದೆ. ಇದು ಖಂಡನೀಯ’ ಎಂದರು.
‘ಬೆಳೆ ನಷ್ಟಕ್ಕೀಡಾದ ರೈತನಿಗೆ ಪರಿಹಾರ ನೀಡಲು ಆ ಜಮೀನಿನ 7 ವರ್ಷಗಳ ಬೆಳೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆಗಳ ಸ್ಥಿತಿಗತಿ, ಅಂಕಿ ಅಂಶಗಳನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. 7 ವರ್ಷದ ಅಂಕಿ–ಅಂಶ ಅಗತ್ಯವಿಲ್ಲ. ಜೊತೆಗೆ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೌಗೋಳಿಕ ಸ್ಥಿತಿ ಏಕರೂಪವಾಗಿರುವುದಿಲ್ಲ. ನನಗೆ ಪ್ರಧಾನಿ ಮೋದಿ ಅವರು ಸಂಪರ್ಕಕ್ಕೆ ಸಿಕ್ಕಲ್ಲಿ, ಅವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು, ಬೆಳೆ ವಿಮಾ ಕಂಪನಿಯ ನಿಯಮಾವಳಿಗಳನ್ನು ಬದಲಿಸಲು ಆಗ್ರಹಿಸುತ್ತೇನೆ’ ಎಂದು ತಿಳಿಸಿದರು.
‘ನಾವೀಗ ಚಂದ್ರನಲ್ಲಿ ನೀರು ಹುಡುಕುವ ತಂತ್ರಜ್ಞಾನ ಹೊಂದಿದ್ದೇವೆ. ಹೀಗಿರುವಾಗ ವಿವಿಧ ಕಾರಣಗಳಿಗೆ ಬೆಳೆ ಹಾನಿಗೀಡಾಗಿ ನಷ್ಟಕ್ಕೊಳಗಾದ ರೈತನಿಗೆ ಪರಿಹಾರ ನೀಡಲು ಅಸಂಬದ್ಧ ನಿಯಮಾವಳಿಗಳನ್ನು ರೂಪಿಸಿರುವುದು ಸರಿಯಲ್ಲ. ನಾವು ಯಾವುದೇ ರಾಜಕೀಯ ಪಕ್ಷದ ಪರ ಇಲ್ಲ. ಜನ ಸಾಮಾನ್ಯರ ಪರ’ ಎಂದರು.
ಹೊಸ ಅಥವಾ ನವೀಕೃತ ದೇವಾಲಯಗಳಲ್ಲಿ ದೇವರ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ಹಮ್ಮಿಕೊಳ್ಳಲಾಗುತ್ತದೆ. ನಮಗೆಲ್ಲ ಪ್ರಾಣವಾಯು ಆಗಿರುವ ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಎನ್ನುವುದು ಸರಿಯಲ್ಲ ಅದರ ಬದಲು ಭಕ್ತಿ ಪ್ರತಿಷ್ಠಾಪನೆ ಎನ್ನಬೇಕು–ಶಿವಮೂರ್ತಿ ಶಿವಾಚಾರ್ಯ, ಶ್ರೀ ತರಳಬಾಳು ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.