ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮಿ ರಂಗನಾಥ ದೇವಾಲಯದ ಕೆರೆಗೆ ಪಶ್ಚಿಮಭಾಗದ 2 ಹಳ್ಳಗಳಿಂದ ಎರಡು ದಿನಗಳಿಂದ ನೀರು ಹರಿದುಬರುತ್ತಿದೆ.
ಪ್ರಸಕ್ತ ಮಳೆಗಾಲ ಆರಂಭವಾದಾಗಿನಿಂದಲೂ ಕೆರೆಗೆ ನೀರು ಹರಿದು ಬರದೆ ಕೊಳವೆಬಾವಿ ಆಶ್ರಿತ ತೋಟಗಾರರ ನೆಮ್ಮದಿ ಕೆಡಿಸಿತ್ತು. ಮಳೆ ಬಂದ ವೇಳೆ ಮೇಲ್ಭಾಗದ ಚೆಕ್ ಡ್ಯಾಂ ಮೂಲಕ ನೀರು ಭೂಮಿ ಸೇರಿ ಇಂಗಿ ಹೋಗುತ್ತಿತ್ತು.
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಹಳ್ಳಗಳ ಮೂಲಕ ಜಲಧಾರೆ ಕೆರೆ ಒಡಲು ಸೇರುತ್ತಿದ್ದು, ಹೊಂಡ ಗುಂಡಿಗಳು ತುಂಬುತ್ತಿವೆ. ಅಗಸನಹಳ್ಳದ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಬಾರಿ ಭಾರಿ ಪ್ರಮಾಣದಲ್ಲಿ ಹೂಳು ಎತ್ತಿರುವ ಕಾರಣ ನೀರಿನ ಸಂಗ್ರಹಣೆ ಹೆಚ್ಚಾಗುವ ವಿಶ್ವಾಸ ಇದೆ.
ಯಾವಾಗಲೂ ಮಳೆಗಾಲದ ಅಂತ್ಯದಲ್ಲಿ ಇಲ್ಲವೇ ದಸರಾ ವೇಳೆಗೆ ಕೆರೆ ಭರ್ತಿಯಾಗುತ್ತಿತ್ತು. ಆದರೆ, ಕೆರೆ ತಳಮಟ್ಟದವರೆಗೆ ಹೂಳು ಎತ್ತಿರುವ ಕಾರಣ, ಇಂಗುವಿಕೆ ಪ್ರಮಾಣ ಹೆಚ್ಚಾಗಲಿದೆ. ಕೆರೆ ಭರ್ತಿಯಾಗಲು ಭಾರಿ ಮಳೆ ಸುರಿಯಬೇಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆರೆಯ ಹೂಳನ್ನು ಸಮರ್ಪಕವಾಗಿ ಎತ್ತಲಿಲ್ಲ. ಭಾರಿ ಗಾತ್ರದ ಹೊಂಡ–ಗುಂಡಿಗಳು ಪಶ್ಚಿಮ ಭಾಗದಲ್ಲಿ ನಿರ್ಮಾಣವಾಗಿವೆ. ಹೂಳೆತ್ತಲು ಅನುದಾನ ನೀಡಲಿಲ್ಲ ಎಂದು ರೈತ ಸಂಘದ ಕೋಗಳಿ ಮಂಜುನಾಥ್ ತಿಳಿಸಿದರು.
ಕೆರೆ ಭರ್ತಿಯಾದರೆ 3 ವರ್ಷಗಳ ಕಾಲ ಕೊಳವೆಬಾವಿ, ತೆರೆದ ಬಾವಿಗೆ ಜೀವ ಬರುತ್ತದೆ. ತೋಟದ ಬೆಳೆಗಾರರಿಗೆ ಅನುಕೂಲ. ಜನ– ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದರು.
ಕೆರೆ ಅಭಿವೃದ್ಧಿ ಪಡಿಸಲು ಈ ಬಾರಿ ಅವಕಾಶ ಇತ್ತು. ಎಂಜಿನಿಯರ್‌ಗಳು ಸೂಕ್ತ ಮಾರ್ಗದರ್ಶನ ನೀಡಲಿಲ್ಲ ಎಂದು ಹಿರೆ ಹಾಲಿವಾಣದ ಶಿವಕ್ಳ ಆಂಜನೇಯ ಬೇಸರ ವ್ಯಕ್ತಪಡಿಸಿದರು.
ಕೆರೆ ಪರಿಸರ ಸುಂದರವಾಗಿದೆ. ಪಕ್ಷಿಧಾಮವಿದೆ. ಪ್ರವಾಸಿ ಬಂಗ್ಲೆ, ಯಾತ್ರಿ ನಿವಾಸ ನಿರ್ಮಿಸಲಾಗಿದೆ. ಸುತ್ತ ಅರಣ್ಯ ಪ್ರದೇಶ ಇದ್ದು, ಸರ್ಕಾರದ ನಿರ್ಲಕ್ಷ್ಯ ಕಾರಣ ಯಾವುದೇ ಪ್ರಯೋಜನ ಇಲ್ಲ. ಪ್ರಾಣಿ ಸಂಗ್ರಹಾಲಯ, ಪಕ್ಷಿ ಧಾಮ, ದೋಣಿ ವಿಹಾರ, ಮೀನು ಸಾಕಾಣಿಕೆ ವ್ಯವಸ್ಥೆ ಮಾಡಿದರೆ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ ಎಂದರು.
ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ 97 ಎಕರೆ ಕೆರೆ ಅಭಿವೃದ್ಧಿ ಮಾಡಲು ಯಾವುದೇ ಅನುದಾನ ಇಲ್ಲʼ ಎಂದು ದೇವಾಲಯದ ಆಡಳಿತಾಧಿಕಾರಿ ಉಪತಹಶೀಲ್ದಾರ್ ಆರ್. ರವಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.