ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿ ಮೂರ್ತಿಯ ವಿಸರ್ಜನೆಯ ಶೋಭಾಯಾತ್ರೆ ಮೆರವಣಿಗೆ ಸಾವಿರಾರು ಜನರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್, ಹಿಂದೂ ಮಹಾ ಗಣಪತಿ ಸಂಘಟನೆಯ ಮುಖ್ಯಸ್ಥ ಜೊಳ್ಳಿ ಗುರು, ಪಾಲಿಕೆ ಮಾಜಿ ಸದಸ್ಯ ಶಿವಗಂಗಾ ಬಸವರಾಜ್ ಅವರು ಗಣಪತಿ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಶ್ರೀಶೈಲ ಮಠದ ಆನೆಯು ಮೊದಲು ಸಾಗಿತು. ಅದರ ಹಿಂದೆ ಅಂಬೇಡ್ಕರ್, ಗೌತಮ ಬುದ್ಧ, ಬಸವಣ್ಣ, ಛತ್ರಪತಿ ಶಿವಾಜಿ, ಕನಕದಾಸ, ವಾಲ್ಮೀಕಿ, ಧರ್ಮಸ್ಥಳ ಉತ್ಸವ ಮೂರ್ತಿಗಳು ಸಾಗಿದವು. ಚಂಡೆ, ಡೊಳ್ಳು ಕುಣಿತ, ನಂದಿಕೋಲು ಸೇರಿ ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಹೈಸ್ಕೂಲ್ ಮೈದಾನದಿಂದ ಆರಂಭವಾದ ಮೆರವಣಿಗೆ ಎವಿಕೆ ಕಾಲೇಜು ರಸ್ತೆಯ ಮೂಲಕ ಚೇತನಾ ಹೋಟೆಲ್ ರಸ್ತೆ ತಲುಪಿತು. ಆನಂತರ ಅಂಬೇಡ್ಕರ್ ವೃತ್ತ ತಲುಪಿ ಹದಡಿ ರಸ್ತೆಯ ಮೂಲಕ ಜಯದೇವ ವೃತ್ತದಲ್ಲಿ ಸಮಾವೇಶಗೊಂಡಿತು.
ಮೆರವಣಿಗೆಯಲ್ಲಿ ಯುವಕರು ಡಿ.ಜೆ. ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಯುವತಿಯರಿಗಾಗಿ ಪ್ರತ್ಯೇಕ ಡಿ.ಜೆ. ವ್ಯವಸ್ಥೆ ಮಾಡಿದ್ದು, ಯುವತಿಯರು ನೃತ್ಯದ ಮೂಲಕ ಶೋಭಾಯಾತ್ರೆಗೆ ಇನ್ನಷ್ಟು ಕಳೆತಂದರು. ಬನಾಯೆಂಗೆ ಮಂದಿರ್' ಹಾಡು ಡಿ.ಜೆ.ಯಲ್ಲಿ ಅನುರಣಿಸಿತು.
ಮರೆವಣಿಗೆ ವೇಳೆ ಮಾರ್ಗ ಮಧ್ಯೆ ವಿವಿಧ ಸಂಘಟನೆಗಳು ಆಹಾರ ಪೊಟ್ಟಣಗಳು, ನೀರು, ಮಜ್ಜಿಗೆ ಹಾಗೂ ಪಾನಕಗಳನ್ನು ವಿತರಿಸುವ ಮೂಲಕ ಹಸಿವು, ಬಾಯಾರಿಕೆ ನೀಗಿಸಿದವು.
ಮೆರವಣಿಗೆ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.