ADVERTISEMENT

ಮುಸ್ಲಿಮರಿಲ್ಲದ ಊರಲ್ಲಿ ಹಿಂದೂಗಳಿಂದ ಮೊಹರಂ; ಪುರಾತನ ಕಾಲದಿಂದ ನಡೆದು ಬಂದ ಆಚರಣೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 4:15 IST
Last Updated 9 ಆಗಸ್ಟ್ 2022, 4:15 IST
ಮಾಯಕೊಂಡ ಸಮೀಪದ ದೊಡ್ಡಮಾಗಡಿ ಗ್ರಾಮದಲ್ಲಿ ಮೊಹರಂ ವಿಶೇಷ ಆಚರಣೆಗೆ ಸಿದ್ಧತೆ ನಡೆಸುತ್ತಿರುವುದು (ಎಡಚಿತ್ರ). ಪೀರ್ ದೇವರಿಗೆ ಅಲಂಕಾರ ಮಾಡಿರುವುದು
ಮಾಯಕೊಂಡ ಸಮೀಪದ ದೊಡ್ಡಮಾಗಡಿ ಗ್ರಾಮದಲ್ಲಿ ಮೊಹರಂ ವಿಶೇಷ ಆಚರಣೆಗೆ ಸಿದ್ಧತೆ ನಡೆಸುತ್ತಿರುವುದು (ಎಡಚಿತ್ರ). ಪೀರ್ ದೇವರಿಗೆ ಅಲಂಕಾರ ಮಾಡಿರುವುದು   

ಮಾಯಕೊಂಡ: ಹಿಂದೂ ಮುಸ್ಲಿಮರ ಸೌಹಾರ್ದಕ್ಕೆ ಸಾಕ್ಷಿಯಾದ ಗ್ರಾಮಸಮೀಪದ ದೊಡ್ಡಮಾಗಡಿ.ಮುಸ್ಲಿಮರಿಲ್ಲದ ಈ ಊರಿನಲ್ಲಿ ಪುರಾತನ ಕಾಲದಿಂದಲೂ ಹಿಂದುಗಳೇ ಮೊಹರಂ ಆಚರಿಸುತ್ತಿರುವುದು ವಿಶೇಷ.

ಹಿಂದುಗಳೇ ಇರುವ ಪುಟ್ಟ ಗ್ರಾಮಕೊಡಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮಾಗಡಿ. ಮೊಹರಂ ಆಚರಿಸುತ್ತಾ ಭಾವೈಕ್ಯ ಹಾಗೂ ಮತೀಯ ಸೌಹಾರ್ದಕ್ಕೆ ಸಾಕ್ಷಿಯಾಗಿದ್ದಾರೆ ಗ್ರಾಮಸ್ಥರು.

ಸಂಪ್ರದಾಯದಂತೆ ಮೊಹರಂ ಆಚರಿಸುವ ಗ್ರಾಮಸ್ಥರು,ಪ್ರತಿ ವರ್ಷ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಿ, ಶ್ರಾವಣ ಮಾಸದ ಅಮಾವಾಸ್ಯೆಯಂದು ಕೆಂಡದ ಗುಂಡಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡುತ್ತಾರೆ.

ADVERTISEMENT

ಕತ್ತಲರಾತ್ರಿ (ಮೊಹರಂ ಹಿಂದಿನ) ದಿನ ವಿಶೇಷ ಸವಾಲು ಕಾರ್ಯಕ್ರಮ ನಡೆಯುತ್ತದೆ. ನಂತರ ಒಂಭತ್ತನೇ ದಿನ ಮುಂಜಾನೆ ಕೆಂಡ ತುಳಿಯಲಾಗುತ್ತದೆ. ರಾತ್ರಿ ಪೀರ್ ಸ್ವಾಮಿಗೆ ಶ್ರದ್ಧಾ, ಭಕ್ತಿಗಳಿಂದ ವಿಶೇಷ ಪೂಜೆ ಸಲ್ಲಿಸಿ ಸಕ್ಕರೆ ಹಂಚಲಾಗುತ್ತದೆ. ಸಂಜೆ ಪೂಜೆ ನೆರವೇರಿಸುವ ಮೂಲಕ ಮೊಹರಂ ಅನ್ನು ಸಂಪ್ರದಾಯದಂತೆ ಆಚರಿಸಲಾಗುತ್ತದೆ ಎನ್ನುತ್ತಾರೆ ದೇವಸ್ಥಾನದ ಪೂಜಾರಿ ರಾಮನಾಯ್ಕ ಮತ್ತು ಹುಸೇನ್ ನಾಯ್ಕ.

ಮಾಯಕೊಂಡ ಹಾಗೂ ದೊಡ್ಡಮಾಗಡಿ ಎರಡೂ ಗ್ರಾಮಗಳಲ್ಲೂ ಮೊಹರಂ ಆಚರಣೆ ನಡೆಯುತ್ತಿತ್ತು. ಆದರೆ ಕೆಲ ದಶಕಗಳಿಂದ ಮಾಯಕೊಂಡದಲ್ಲಿ ಆಚರಣೆ ಮಾಡುತ್ತಿಲ್ಲ. ಆದರೆ ಮಾಗಡಿ ಗ್ರಾಮದಲ್ಲಿ ಆಚರಣೆ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಗ್ರಾಮದ ಸರ್ವರೂ ಒಂದೆಡೆ ಸೇರಿ ಸಂಭ್ರಮಿಸುವ ಆಚರಣೆ ಇದು ಎನ್ನುತ್ತಾರೆ ಮುಖಂಡರಾದ ಶಿವಗಾನಾಯ್ಕ, ಚಂದ್ರು, ಜಯಾನಾಯ್ಕ, ಬಾಬು ನಾಯ್ಕ, ಅರುಣ, ಈರಾನಾಯ್ಕ, ಸಂತೋಷ.

ಪೀರ್ ದೇವರ ಮೊಹರಂನಲ್ಲಿ ಕೆಂಡ ತುಳಿಯುವುದು ವಿಶೇಷ. ಕೆಂಡದ ದಿನದಂದು‌ ಮಾಯಕೊಂಡ ಹೋಬಳಿಯ ವಿವಿಧ ಗ್ರಾಮಗಳಿಂದ ಭಕ್ತರು ಬಂದು ಕೆಂಡ ತುಳಿದು, ಸಕ್ಕರೆ ಹರಕೆ ಸಲ್ಲಿಸುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.