ADVERTISEMENT

ಹಳೇದೇವರ ಹೊನ್ನಾಳಿ: ಕರಡಿ ಸೆರೆ

​ಪ್ರಜಾವಾಣಿ ವಾರ್ತೆ
Published 30 ಮೇ 2024, 7:13 IST
Last Updated 30 ಮೇ 2024, 7:13 IST
ಹೊನ್ನಾಳಿ ತಾಲ್ಲೂಕಿನ ಹಳೆ ದೇವರಹೊನ್ನಾಳಿ ಗ್ರಾಮದ ದೇವಸ್ಥಾನದಲ್ಲಿ ಅಡಗಿ ಕುಳಿತಿದ್ದ ಕರಡಿಗೆ ಬಲೆಬೀಸಿದ ಅರಣ್ಯ ಇಲಾಖೆ ಅಧಿಕಾರಿಗಳು
ಹೊನ್ನಾಳಿ ತಾಲ್ಲೂಕಿನ ಹಳೆ ದೇವರಹೊನ್ನಾಳಿ ಗ್ರಾಮದ ದೇವಸ್ಥಾನದಲ್ಲಿ ಅಡಗಿ ಕುಳಿತಿದ್ದ ಕರಡಿಗೆ ಬಲೆಬೀಸಿದ ಅರಣ್ಯ ಇಲಾಖೆ ಅಧಿಕಾರಿಗಳು   

ಹೊನ್ನಾಳಿ: ತಾಲ್ಲೂಕಿನ ಹಳೆದೇವರಹೊನ್ನಾಳಿ ಗ್ರಾಮದಲ್ಲಿರುವ ದೇವಸ್ಥಾನ ಹಾಗೂ ಅದರ ಸುತ್ತಲಿನ ಪೊದೆಗಳಲ್ಲಿ ಕಳೆದ ತಿಂಗಳಿನಿಂದ ಅವಿತುಕೊಂಡಿದ್ದ ಕರಡಿಯನ್ನು ಪ್ರಾದೇಶಿಕ ಅರಣ್ಯ ವಲಯದ ಅಧಿಕಾರಿಗಳು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಬುಧವಾರ ಭದ್ರಾವತಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಇಲ್ಲಿನ ಸಣ್ಣಬೀರಪ್ಪ ದೇವಸ್ಥಾನ ಗುಹೆಯ ರೀತಿಯಲ್ಲಿದ್ದು, ರಸ್ತೆ ಪಕ್ಕದಲ್ಲಿದ್ದರೂ ಜನ ಬಂದು ಹೋಗುವುದು ಕಡಿಮೆ. ಆದರೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವವರಿಗೆ ಹಾಗೂ ದೇಗುಲಕ್ಕೆ ಬಂದುಹೋಗುವ ಭಕ್ತರಿಗೆ ಕರಡಿ ಉಪಟಳ ನೀಡುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. 

ಚನ್ನಗಿರಿ ತಾಲ್ಲೂಕಿನ ಆರ್‌ಎಫ್‍ಒ ಗಮನಕ್ಕೆ ತಂದ ನಂತರ, ಕರಡಿ ಸೆರೆ ಹಿಡಿಯಲು ಬೋನು ಇರಿಸಲಾಗಿತ್ತು. ಆದರೂ ಕರಡಿ ಅದರಲ್ಲಿ ಬಿದ್ದಿರಲಿಲ್ಲ. ಈ ಭಾಗದ ಜನರಿಗೆ ಆತಂಕ ಇದ್ದೇ ಇತ್ತು. ಶಾಸಕ ಡಿ.ಜಿ. ಶಾಂತನಗೌಡ ಅವರ ಸೂಚನೆ ಬಳಿಕ ದೇವಸ್ಥಾನ ಹಾಗೂ ಪೊದೆಯ ಸುತ್ತ ಬಲೆಯನ್ನು ಕಟ್ಟಲಾಗಿತ್ತು. ಪಟಾಕಿ ಸಿಡಿಸಿ, ಗದ್ದಲ ಎಬ್ಬಿಸಿ ಅದು ಗುಹೆಯಿಂದ ಹೊರಬರುವಂತೆ ಮಾಡಲಾಯಿತು. ಪಟಾಕಿ ಶಬ್ದಕ್ಕೆ ಹೆದರಿ ಹೊರಬಂದ ಕರಡಿ ಬಲೆಯೊಳಗೆ ಸಿಕ್ಕಿಕೊಂಡಿತು. 

ADVERTISEMENT

ಕಾರ್ಯಾಚರಣೆಯಲ್ಲಿ ಗ್ರಾಮದ ಹಾಲೇಶ್ ಹಾಗೂ ಇಲಾಖೆಯ ಸಿಬ್ಬಂದಿಯೊಬ್ಬರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿವೆ ಎಂದು ಮಾವಿನಕಟ್ಟೆ ಅರಣ್ಯಾಧಿಕಾರಿ ಜಗದೀಶ್ ಹೇಳಿದರು.

ಅರಣ್ಯ ಇಲಾಖೆಯ ಸಿಬ್ಬಂದಿ ಮೈಲಾರಸ್ವಾಮಿ, ನಾಗರಾಜ್ ಗಾರ್ಡ್ ಭೀಮಪ್ಪ, ಮಿರ್ಜಾ ಹೇಮಂತ್ ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.

ಹೊನ್ನಾಳಿ ತಾಲ್ಲೂಕು ಹಳೆ ದೇವರಹೊನ್ನಾಳಿ ಗ್ರಾಮದಲ್ಲಿ ಕರಡಿ ಸೆರೆ ಹಿಡಿದ ಸಿಬ್ಬಂದಿ
ಹಳೇದೇವರ ಹೊನ್ನಾಳಿಯಲ್ಲಿ ಕರಡಿ ಹಿಡಿಯುವ ಕಾರ್ಯಾಚರಣೆಯನ್ನು ನೋಡಲು ಜಮಾಯಿಸಿದ್ದ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.