ಹೊನ್ನಾಳಿ: ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ರೈತರ ಬದುಕು ಇನ್ನೂ ಹಸನಾಗಿಲ್ಲ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ವಿಷಾದಿಸಿದರು.
ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ 4ನೇ ದಿನದ ದಸರಾ ಮತ್ತು ಶರನ್ನವರಾತ್ರಿ ಕಾರ್ಯಕ್ರಮದ ಧರ್ಮಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭತ್ತ, ಮೆಕ್ಕೆಜೋಳ, ಅಡಿಕೆ ಸೇರಿ ಇತರೆ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆದರೆ, ಮಧ್ಯವರ್ತಿಗಳಿಗೆ ಸಿಂಹಪಾಲು ಲಾಭ ಸಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ರೈತರ ಬೆಳಿಗಳಿಗೆ ಎಂ.ಆರ್.ಪಿ. ದರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಇತ್ತೀಚೆಗೆ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ತಂದೆ–ತಾಯಿಗಳು ನಿಧನರಾದಾಗ ಅದ್ದೂರಿಯಾಗಿ ವೈಕುಂಠ ಸಮಾರಾಧನೆ ಮಾಡುವ ಬದಲು, ಅವರು ಬದುಕಿದ್ದಾಗ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಕಿ ಶಾಂತಾ ಉಪನ್ಯಾಸ ನೀಡಿದರು. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ನಿವೃತ್ತ ಪ್ರಾಂಶುಪಾಲ ಜಯಪ್ಪ, ಹಾವೇರಿಯ ಕರ್ಜಗಿ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಎಚ್.ಬಸವರಾಜ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಕೆ.ಸುರೇಶ್, ಪುರಸಭಾ ಸದಸ್ಯರಾದ ಕೆ.ವಿ.ಶ್ರೀಧರ್, ರಂಗನಾಥ್, ಸುರೇಶ್ ಹೊಸಕೇರಿ, ಮೆಸ್ಕಾಂ ಮಾಜಿ ನಿರ್ದೇಶಕ ರುದ್ರೇಶ್, ಕರವೇ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಪೇಟೆ ಪ್ರಶಾಂತ್, ಸರಳಿನಮನೆ ಮಂಜಪ್ಪ, ಎಚ್.ಬಿ.ಸಿದ್ದಪ್ಪ, ಟಿ.ಎಂ.ಬಸವರಾಜಯ್ಯ ಶಾಸ್ತ್ರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.